ಮತದಾರರ ಪಟ್ಟಿಯಲ್ಲಿ ಲೋಪದೋಷವಾಗದಂತೆ ಕಾರ್ಯನಿರ್ವಹಿಸಿ: ಡಿಸಿ
ಉಡುಪಿ: ಮತದಾರರ ಪಟ್ಟಿ ಪರಿಶೀಲನೆಯಲ್ಲಿ ಯಾವುದೇ ಲೋಪದೋಷವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು. ಭಾನುವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2020 ಅಂಗವಾಗಿ ಸೆ.1 ರಿಂದ ಅ.15ರವರೆಗೆ ನಡೆಯಲಿರುವ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಿ ಮತಗಟ್ಟೆ ಅಧಿಕಾರಿಗಳು(ಬಿಎಲ್‌ಒ) ಮತ್ತು ಡಾಟಎಂಟ್ರಿ ಸಂಬಂಧಿಸಿದವರು ಯಾವುದೇ ತಪ್ಪುಗಳನ್ನು ಮಾಡಬಾರದು. ಲೋಪದೋಷ ಕಡಿಮೆ ಮಾಡುವುದೇ ನಮ್ಮ ಮುಖ್ಯ ಉದ್ದೇಶ ಎಂದರು.
ಮತಗಟ್ಟೆ ಅಧಿಕಾರಿಗಳಿಂದ ಮನೆಮನೆ ಭೇಟಿ, ಮತದಾರರ ಪಟ್ಟಿ ಸೇರ್ಪಡೆ, ತೆಗೆದು ಹಾಕುವುದು, ಪರಿಶೀಲನೆ, ದೃಡಿಕರಣ, ತಿದ್ದುಪಡಿ ಕೆಲಸಗಳು ವ್ಯವಸ್ಥಿತ, ಕ್ರಮಬದ್ಧವಾಗಿ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಾರ್ವಜನಿಕರು ಬಿಎಲ್‌ಒಗಳಿಗೆ ಸಹಕರಿಸಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿಕೊಂಡರು. ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿದಾಗ 18 ವರ್ಷ ಪೂರ್ಣಗೊಂಡಿರುವ ವ್ಯಕ್ತಿಗಳ ಮಾಹಿತಿ ನೀಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಪುನರಾವರ್ತನೆಯಾಗಿದ್ದರೆ, ಇತರೆ ತಪ್ಪುಗಳಿದ್ದರೆ ಮಾಹಿತಿ ನೀಡಬೇಕು. ಮೃತ ಮತದಾರರ ಹೆಸರನ್ನು ತೆಗೆಸಲು, ಶಾಶ್ವತವಾಗಿ ವಲಸೆ, ಗುಳೆ ಹೋದ ಮತದಾರರ ಬಗ್ಗೆ, ಅಂಗ ವಿಕಲ ಮತದಾರರ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಈ ಭಾರಿ ಮತದಾರರ ಸ್ಥಳ ಗುರುತಿಗಾಗಿ ಬಿಎಲ್‌ಒಗಳು ವಾಸಸ್ಥಳ, ಅಥವ ಕುಟುಂಬ ಸದಸ್ಯರು, ಮನೆ, ಕಟ್ಟಡ, ಜಾಗದ ಫೋಟೊವನ್ನು ತಮ್ಮ ಮೊಬೈಲ್‌ನಿಂದ ತೆಗೆದು ಚುನಾವಣ ಆಪ್‌ಗೆ ಅಪ್‌ಲೋಡ್ ಮಾಡುತ್ತಾರೆ ಎಂದು ಡಿಸಿ ತಿಳಿಸಿದರು.
ಓಟರ್ಸ್ ಹೆಲ್ಪ್‌ಲೈನ್ ಲೈನ್ ಆಪ್‌ನಲ್ಲಿ ಮತದಾರರು ಲಾಗಿನ್ ಆಗಿ ಆಧಾರ್ ಸಂಖ್ಯೆ ಮತ್ತು ಒಟಿಪಿ ಪ್ರಕ್ರಿಯೆಯಿಂದ ಏನಾದರು ತಪ್ಪುಗಳಿದ್ದಲ್ಲಿ ಅದನ್ನು ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್ ಉಪಸ್ಥಿತರಿದ್ದರು.