ಮುಷ್ಠಿ ಮರಳು ಹೊರ ಜಿಲ್ಲೆಗೆ ಸಾಗಟವಾಗದಂತೆ ಕ್ರಮ :ಡಿಸಿ

ಉಡುಪಿ: ಒಂದು ಮುಷ್ಠಿ ಮರಳು ಹೊರ ಜಿಲ್ಲೆಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಉಡುಪಿ ನಗರಸಭೆಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ತೆಗೆಯುವ ಮರಳು ಇಲ್ಲಿಯ ನಿರ್ಮಾಣ ಕಾಮಗಾರಿಗಳಿಗೆ ವಿನಿಯೋಗಿಸಲಾಗುವುದು. ಬಡವರ ಮನೆ ನಿರ್ಮಾಣ, ವಿವಿಧ ಸರ್ಕಾರಿ ಯೋಜನೆಗಳಡಿ ನಿರ್ಮಿಸಲಾಗುವ ಕಟ್ಟಡ, ಮನೆಗಳಿಗೆ ಮೊದಲ ಆದ್ಯತೆಯಲ್ಲಿ ಮರಳು ಸಿಗುವಂತೆ ಕ್ರಮ ವಹಿಸಲಾಗುವುದು ಎಂದರು.
ಮರಳಿನ ಸಮಸ್ಯೆಯಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿದ್ದು, ಜನರಿಗೆ ಮರಳು ನೀಡಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹಾಗಾಗಿ ಮರಳಿನ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಡಿಸಿ ತಿಳಿಸಿದರು.
ಸಿಆರ್‌ಝಡ್: ಶೀಘ್ರದಲ್ಲೇ ಮರಳುಗಾರಿಕೆ ಆರಂಭ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಮರಳು ದಿಬ್ಬಗಳ ಮರು ಸರ್ವೆ ಮಾಡುವ
ಅಗತ್ಯವಿಲ್ಲ. ನಾನ್‌ಸಿಆರ್‌ಝಡ್ ವ್ಯಾಪ್ತಿಯಲ್ಲಿ ಇಬ್ಬರಿಗೆ ಮರಳು ದಿಬ್ಬ
ತೆರವುಗೊಳಿಸಲು ಪರವಾನಗಿ ನೀಡಲಾಗಿದೆ. ಹಾಗೆಯೇ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಯಾವುದೇ ಕಾನೂನು ತೊಡಕು ಇಲ್ಲದೆ, ಅತೀ ಶೀಘ್ರದಲ್ಲಿ ಮರಳು ತೆಗೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಬಜೆ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಲಭ್ಯವಿದೆ. ಆದ್ದರಿಂದ ಕೂಡಲೇ ಜಲಾಶಯದ ಹೂಳೆತ್ತಲು ಕ್ರಮ ವಹಿಸಲಾಗುವುದು ಎಂದರು. ಮಂಗಳೂರು ಮಾದರಿಯಲ್ಲಿ ಮೊಬೈಲ್ ಆಪ್ ಮೂಲಕ ಜಿಲ್ಲೆಯಲ್ಲೂ ಮರಳು ಹಂಚಲಾಗುವುದೆಂದು ಈ ಸಂದರ್ಭ ಹೇಳಿದರು.
ತಿಂಗಳಿಗೊಮ್ಮೆ ಪೋನ್ ಇನ್: ಚಿಂತನೆ
ನಾನು ಕೋಲಾರದಲ್ಲಿ ಡಿಸಿ ಆಗಿದ್ದಾಗ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ಪೋನ್ ಇನ್ ಕಾರ್ಯಕ್ರಮವನ್ನು ನಡೆಸುತ್ತಿದ್ದೆ. ಅದನ್ನು ಉಡುಪಿಯಲ್ಲಿಯೂ ಮುಂದುವರಿಸುವ ಚಿಂತನೆ ಇದೆ. ಇದಕ್ಕೆ ಬೇಕಾಗುವ ಪೂರ್ವ ತಯಾರಿಯನ್ನು ಮಾಡಿಕೊಂಡು ಶೀಘ್ರದಲ್ಲಿಯೇ ಕಾರ್ಯಕ್ರಮವನ್ನು
ಆಯೋಜಿಸಲಾಗುವುದು. ಉಡುಪಿ ಹಾಗೂ ಮಣಿಪಾಲದಲ್ಲಿ ಸಂಚಾರ ದಟ್ಟನೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಸಾರಿಗೆ ಸಚಿವರ ಜತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!