ವಾಟ್ಸ್ಯಾಪ್ ವ್ಯಸನ!
ಇತ್ತೀಚೆಗೆ ನಮ್ಮ ಬೆಳಗಿನ ಆರಂಭ ಬದಲಾಗಿ ಬಿಟ್ಟಿದೆ. ದಿನಪತ್ರಿಕೆ ಹಿಡಿಯುವ ಕೈಗಳಿಗಿಂತ ಮೊಬೈಲನ್ನು ಹಿಡಿದು ಈ ವಾಟ್ಸ್ಯಾಪ್ ಎಂಬ ಮಾಯಾಜಾಲದೊಳಗೆ ಕಳೆದು ಹೋಗಿರುವ ಕೈಗಳೇ ಹೆಚ್ಚು.
ಬೆಳಗಾಯಿತು ಎಂದರೆ ಸಾಕು! ಗುಡ್ ಮಾರ್ನಿಂಗ್ ಎಂಬ ಸಂದೇಶ ಸಕಲ ವಾಟ್ಸ್ಯಾಪ್ ಗ್ರೂಪಿಂದಲೂ ಸಾಲು ಸಾಲಾಗಿ ಬರುತ್ತವೆ! ರಾತ್ರಿ,ಮತ್ತೆ ಗುಡ್ ನೈಟ್ ಎಂಬ ಮೆಸೇಜ್. ಹಾಯ್, ಹೇ, ಹವ್ ಯೂ,ವಾಟ್ ಯು ಡೂಇಂಗ್,ದೆನ್? ಎನ್ನುವ ಉಪಯೋಗವಿಲ್ಲದ ಸಂದೇಶಗಳು ಬಂದಾಗ,ನಮ್ಮ ಶಬ್ದಕೋಶ ಎಷ್ಟು ಸಮೃದ್ಧವಾಗಿದೆ,ಆದರೆ ನಿಮಗೆ ಬರೀ ಈ ಶಬ್ದಗಳು ಮಾತ್ರ ತಿಳಿದಿವೆಯೇ? ಎಂದು ಕೇಳಬೇಕು ಅನಿಸುತ್ತದೆ. ಕೆಲವರಿಂದ, ಊಟ ಆಯ್ತಾ? ಟೀ ಆಯ್ತಾ? ಎನ್ನುವ ಔಪಚರಿಕೆ ಬೇರೆ!. ಸುಮ್ಮನೆ ಮೆಸೇಜ್ ಮಾಡಿ ವಾಟ್ಸ್ ಅಪ್? ಎಂದು ಕೇಳಿದವರಿಗೆ, ನಾನು ಸ್ಕಯ್,ಮೂನ್,ಸ್ಟಾರ್ಸ್! ಎಂದು ಹೇಳಿದ್ದೂ ಇದೆ!! ಪ್ರತೀ ದಿನ ತಪ್ಪದೇ ಗುಡ್ ಮಾರ್ನಿಂಗ್ ಮೆಸೇಜ್ ಕಳಿಸುವ ಜನರು ತಮ್ಮ ಮನೆಯವರಿಗೆ ಒಮ್ಮೆಯಾದರೂ ಗುಡ್ ಮಾರ್ನಿಂಗ್ ಹೇಳುವರೇ? ಎಂಬ ಪುಟ್ಟ ಸಂಶಯ!
ಈ ವಾಟ್ಸ್ಯಾಪ್ ಬಂದಾಗಿನಿಂದ ನಮ್ಮಲ್ಲಿ ಮಾತುಗಳು ಮಂಕಾಗಿ ಬರೀ ಇಮೋಜಿಗಳೇ ಜಾಸ್ತಿಯಾಗಿವೆ. ಎದುರು ಸಿಕ್ಕಾಗ ಮಾತಾಡಲು ಹಿಂಜರಿಯುವ ಜನರು ಮೆಸೇಜ್ ಕಳಿಸಲು ಹಿಂದೇಟು ಹಾಕುವುದಿಲ್ಲ. ವಾಟ್ಸ್ಯಾಪ್ ಗ್ರೂಪ್ ಫೈಟ್ಗಳಿಂದ ಬಿರಿಕು ಬಿಟ್ಟಿರುವ ಸಂಬಂಧಗಳಿಗೆ ಲೆಕ್ಕವಿಲ್ಲ. ಇದರ ಕಿರಿಕಿರಿ ತಾಳದೆ ಗ್ರೂಪ್ ಬಿಟ್ಟರೆ! ಅಷ್ಟು ಹೊತ್ತು ತಮಾಷೆ ನೋಡುತ್ತಿದ್ದ ಜನಗಳಿಂದ, ಯಾಕೆ ಗ್ರೂಪ್ ಬಿಟ್ಟೆ? ಎನ್ನುವ ಪ್ರಶ್ನೆಗಳು ಬೇರೆ!
ನಮ್ಮಂಥ ಯುವ ಸಮುದಾಯವಂತೂ ಇದಕ್ಕೆ ಪೂರ್ಣವಾಗಿ ಏಡಿಕ್ಟ್ ಆಗಿಬಿಟ್ಟಿದೆ. ಒಂದು ನಿಮಿಷ ಮೊಬೈಲನ್ನು ಬಿಟ್ಟಿರಲಾರೆವು ಎನ್ನುವ ಮಂದಿಯೂ ಇದ್ದಾರೆ.
ಒಮ್ಮೆ, ಪರೀಕ್ಷೆ ಬರೆಯುವ ವಿದ್ಯಾರ್ಥಿಯೊಬ್ಬ ಪ್ರಶ್ನೆಪತ್ರಿಕೆಯ ಫೋಟೋ ತೆಗೆದು ಹೊರಗಿರುವ ತನ್ನ ಒಬ್ಬ ಸಹಪಾಠಿಗೆ ಕಳುಹಿಸಿ,ಅವನು ಅದರ ಉತ್ತರಗಳನ್ನು ಇವನಿಗೆ ಫೋಟೋ ತೆಗೆದು ಕಳುಹಿಸಿದನಂತೆ, ನಂತರ ಈ ವಿಷಯ ತಿಳಿದ ಶಿಕ್ಷಕರು ಅವರಿಗೆ ತಕ್ಕ ಶಾಸ್ತಿಯೇ ಮಾಡಿದ್ದಾರೆ.ಇದು ಇತ್ತೀಚೆಗೆ ನಾನು ಕೇಳಿದ ವಿಷಯ. ಬಹುಶ ಇಂತಹ ಅನೇಕ ಘಟನೆಗಳು ಪ್ರತಿದಿನ ನಮ್ಮೆಲ್ಲರ ನಡುವೆ ಕಾಣಸಿಗುತ್ತವೆ. ಬೆಳಗ್ಗಿಂದ ಸಂಜೆವರೆಗೂ ಆ ಮೊಬೈಲೊಂದು ಕೈಲಿದ್ದರೆ ಸಾಕು ಕೆಲವರು ಹೊರ ಜಗತ್ತನ್ನು ಮರೆತೇ ಬಿಡ್ತಾರೆ.
ಪ್ರಯಾಣ ಮಾಡುವಾಗ ಕಿವಿಗೆ ಇಯರ್ ಫೋನ್ ಇಟ್ಟುಕೊಂಡು ಬಿಟ್ಟರೆ,ಬಸ್ ಏರುವ ಮುದಿ ವಯಸ್ಕರು,ಕೂಸು ಹೊತ್ತ ಹೆಂಗಳೆಯರು ಕಣ್ಣಿಗೇ ಕಾಣುತ್ತಿಲ್ಲ ಎಂಬಂತೆ ಕೂತಿರುತ್ತಾರೆ ಕೆಲವು ಜನರು.ಇದನ್ನೆಲ್ಲಾ ನೋಡುವಾಗ,ನಮ್ಮ ಸೊಸೈಟಿ ಎಷ್ಟು ಮುಂದುವರೆದಿದೆ ಎಂದು ಖುಷಿ ಪಡಬೇಕೋ,ಅಥವಾ ನಾವೆಲ್ಲಾ ಏಜುಕೆಟೆಡ್ ಫೂಲ್ಸ್ ಆಗುತ್ತಿರುವುದರಿಂದ ದುಖಃ ಪಡಬೇಡಕೋ ತೋಚುತ್ತಿಲ್ಲ.
ಇತ್ತೀಚೆಗೆ ಡಿಪ್ರೆಶನ್ ಎಂಬುದು ತುಸು ಹೆಚ್ಚಾಗಿ ಕೇಳ ಸಿಗುತ್ತದೆ. ಇದಕ್ಕೊಂದು ಕಾರಣ ಈ ಸೋಶಿಯಲ್ ಲೈಫ್ ಕೂಡ ಆಗಿರಬಹುದು.ಸೋಶಿಯಲ್ ಸೈಟ್ಸ್ ಎಂಬುದು,ಇತ್ತೀಚೆಗೆ ನಮ್ಮ ಹೈಟೆಕ್ ಕಾಲಹರಣವಾಗಿದೆ ಎಂದರೆ ತಪ್ಪಾಗಲಾರದು.ಕಂಡ ಕಂಡದ್ಧನ್ನೆಲ್ಲ ಫೋಟೋ ತೆಗೆದು ಸ್ಟೆಟಸ್ ಹಾಕುವ, ಎಲ್ಲೆಲ್ಲೋ ಸಿಲ್ಫೀ ಕ್ಲಿಕ್ಕಿಸಿ ಅಪ್ ಲೋಡ್ ಮಾಡುವ ತವಕ, ಲೆಕ್ಕವಿಲ್ಲದ ಫಾರ್ವರ್ಡ್ ಮೆಸೇಜ್, ಪದೇ ಪದೇ ಓದಿ ಬೋರಾಗುವ ಜೋಕ್ಸ್.ಅಯ್ಯೋ! ನನಗಂತೂ ಈ ಹುಚ್ಚರ ಸಂತೆಯಿಂದ ಯಾರಾದರೂ ಪಾರು ಮಾಡಿ ಎನ್ನುವಷ್ಟು ಸಾಕಾಗಿದೆ. ಗಂಟಲಲ್ಲಿ ಏನೋ ಸಿಕ್ಕಿ ಹಾಕಿಕೊಂಡು,ನುಂಗಲೂ ಆಗದೆ, ಉಗುಳಲೂ ಆಗದ ಸನ್ನಿವೇಶ.
ಹಾಗಂತ ಈ ವಾಟ್ಸ್ಯಾಪ್ ಕೆಟ್ಟದು ಎಂದೂ ಹೇಳಲಾರೆ!ಯಾಕೆಂದರೆ,ಎಲ್ಲವೂ ಡಿಜಿಟಲ್ ಆಗಿರುವ ಈ ದಿನಗಳಲ್ಲಿ ಕೆಲವು ವಿಷಯಗಳಿಗೆ ವಾಟ್ಸ್ಯಾಪ್ ತುಂಬ ಸಹಕಾರಿಯಾಗಿದೆ. ಆದರೆ ಅದನ್ನು ನಾವು ಉಪಯೋಗಿಸುವ ರೀತಿ ಸರಿಯಾಗಬೇಕಿದೆ.
ಒಮ್ಮೆ, ನಿಮಗೆ ಬರುವ ಮೆಸೇಜ್, ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬ ಒಂದು ಯೋಚನೆ ಮಾಡಿ ನಂತರ ಇತರರಿಗೆ ಕಳಿಸಿರಿ.
ನಮಗೆ ಸಿಗುವ ಸಂದೇಶಗಳು ನೂರು ಪ್ರತಿಶತ ನಿಜವಲ್ಲ, ಹಾಗಂತ ಬರೀ ಸುಳ್ಳು ಎಂದೂ ಹೇಳಲಾಗದು.
ಹಾಗಾಗಿ ವಾಸ್ತವವನ್ನು ಅರಿಯುವ ಒಂದು ಸಣ್ಣ ಪ್ರಯತ್ನ ಮಾಡಬೇಕಿದೆ.
ಈ ಜಗತ್ತು ನಮ್ಮ ಊಹೆಗಿಂತಲೂ ಬಹುಪಾಲು ವಿಶಾಲವಾಗಿದೆ. ನಮ್ಮ ಯೋಚನೆಗೂ ನಿಲುಕದ ಅನೇಕ ರಹಸ್ಯಗಳು ನಮ್ಮ ಸುತ್ತಲೂ ಇವೆ. ಕಣ್ಮನ ಸೆಳೆಯುವ ಸೌಂದರ್ಯ ನಮ್ಮ ಪ್ರಕೃತಿಯಲ್ಲಿದೆ. ಇಷ್ಟೆಲ್ಲಾ ವಿಶೇಷತೆಗಳು ನಮ್ಮ ಮುಂದಿರುವಾಗ,ನಾವು ಮೊಬೈಲ್ ಎಂಬ ಚಿಕ್ಕ ವಸ್ತುವಿನ ಕೈ ಗೊಂಬೆಯಾಗದೆ, ಅದರ ಸದುಪಯೋಗ ಪಡಿಸಿಕೊಂಡು ಹೋಗಬೇಕು ಎನ್ನುವ ಒಂದು ಆಶಯ.
– ಶರಣ್ಯ ಬಿ ಆಚಾರ್ಯ