ಸ್ವಯಂ ಪ್ರೇರಿತ ರಕ್ತದಾನ ಶಿಬಿರ: ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ

 ಉಡುಪಿ : ಒಬ್ಬ ವ್ಯಕ್ತಿ ನೀಡಿದ ರಕ್ತದಿಂದ ಕನಿಷ್ಠ ನಾಲ್ಕು ಜೀವವನ್ನು ಉಳಿಸಬಹುದು. ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮವಾಗುವುದಿಲ್ಲ ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಮಧುಸೂದನ್ ನಾಯಕ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ, ಜಯಲಕ್ಷ್ಮೀ ಸಿಲ್ಕ್ಸ್, ಜಯಲಕ್ಷ್ಮೀ ಆರ್ಕೇಡ ಉದ್ಯಾವರ, ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರ ಜ್ಞಾನ ಸಾಧನಾ ಉದ್ಯಾವರ ಇದರ ಸಂಯುಕ್ತ ಆಶ್ರಯದಲ್ಲಿ ಉದ್ಯಾವರದ ಜ್ಞಾನ ಸಾಧನಾಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ನಡೆದ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೃತಕವಾಗಿ ರಕ್ತ ತಯಾರಿಸಲು, ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಂದಿಗೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ.ದಾನಿಗಳು ನೀಡಿದ ರಕ್ತವನ್ನು ೩೫ ದಿನಗಳ ಕಾಲ ಮಾತ್ರ ಸಂಗ್ರಹಿಸಿಡಬಹುದು. ಪ್ಲಾಟಿಲೇಟ್ಸ್ ೫ ದಿನಗಳ ಕಾಲ ಮಾತ್ರ ಇಡಬಹುದು.ಯುವ ಜನತೆ ಹೆಚ್ಚಾಗಿ ರಕ್ತದಾನಿಗಳಾಗಿ ಎಂದು ಹೇಳಿದರು.

 ಉದ್ಯಾವರ ಜ್ಞಾನ ಸಾಧನ ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಜೋನ್ ಎಂ.ಡಿಸೋಜ ಮಾತನಾಡಿ, ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ರಕ್ತದಾನದಿಂದ ಹೆಚ್ಚು ಹೆಚ್ಚು ಜೀವಗಳನ್ನು ಉಳಿಸಬಹುದು. ರಕ್ತದಾನದಿಂದ ಒಂದು ಜೀವ ಉಳಿಸುವುದೇ ನಾವು ಮಾಡುವ ಶ್ರೇಷ್ಠದಾನ. ಅರ್ಹದಾನಿಗಳು ವರ್ಷಕ್ಕೆ ಒಂದೆರಡು ಬಾರಿಯಾದರೂ ರಕ್ತದಾನ ಮಾಡಿ ಎಂದು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮ್‌ರಾವ್ ಮಾತನಾಡಿ, ಜಿಲ್ಲೆಯಲ್ಲಿ ಗರ್ಭಿಣಿಯರಲ್ಲಿ ಶೇ.50ರಷ್ಟು ರಕ್ತ ಹೀನತೆ ಸಮಸ್ಯೆ ಇಂದಿಗೂ ಕಂಡು ಬರುತ್ತಿದೆ, ಆಹಾರ ಮತ್ತು ಔಷಧಿ ಸೇವಿಸಿ ರಕ್ತಹೀನತೆ ಆಗದಂತೆ ಗಮನ ಹರಿಸಬೇಕು. ಆಕ್ಸಿಡೆಂಟ್ ಆದಂತಹ ಸಂದರ್ಭಜಲ್ಲಿಯೇ ಅತೀ ಹೆಚ್ಚಾಗಿ ರಕ್ತದ ಅವಶ್ಯಕತೆ ಇರುವುದು. ಆದ್ದರಿಂದ ವಾಹನ ಚಲಾಯಿಸುವಾಗ ಯುವ ಜನತೆ ಜಾಗರೂಕರಾಗಿರಬೇಕು ಎಂದು ಹೇಳಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಎಸ್.ವಿ ರಕ್ತದ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಂದು ನಿಮಿಷ ಒಬ್ಬ ವ್ಯಕ್ತಿಗೆ ರಕ್ತದ ಅವಶ್ಯಕತೆ ಇರುತ್ತದೆ ಜಿಲ್ಲೆಯಲ್ಲಿ 3 ರಕ್ತದ ಅಧಿಕೃತ ನಿಧಿಗಳಿವೆ. ಎಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ರಕ್ತದಾನ ಮಾಡಿದಲ್ಲಿ ಅದು ಕೂಡ ಸಮಾಜಸೇವೆ ಮಾಡಿದ ಹಾಗೆ, ಯುವ ಜನತೆ ಹೆಚ್ಚು ಹೆಚ್ಚು ರಕ್ತದಾನ ಮಾಡಿ ಎಂದು ಹೇಳಿದರು.  ಈ ಸಂಧರ್ಭ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ 6 ಮಂದಿ ದಾನಿಗಳನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!