ಮಡಿಕೇರಿ: ಒಂಟಿ ಮನೆಯಲ್ಲಿ ಮಹಿಳೆ ಹತ್ಯೆ, ದರೋಡೆ
ಮಡಿಕೇರಿ:ಒಂಟಿ ಮನೆಯಲ್ಲಿ ಮಹಿಳೆಯನ್ನು ಹತ್ಯೆ ಮಾಡಿ ದರೋಡೆ ಮಾಡಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕೆ. ನಿಡುಗಣೆಯಲ್ಲಿ ನಡೆದಿದೆ. ಲಲಿತಾ ಕೊಲೆಯಾದ ಮಹಿಳೆ.
ಇತ್ತೀಚೆಗೆ ಮನೆಯ ಕಾಫಿ ತೋಟದಲ್ಲಿ ಉತ್ತಮ ಬೆಳೆ ಬಂದಿದ್ದರಿಂದ ಕಾಫಿಯನ್ನು ಇತ್ತೀಚೆಗೆ ಮಾರಾಟ ಮಾಡಲಾಗಿತ್ತಂತೆ. ಮೈಸೂರಿನಲ್ಲಿರುವ ಲಲಿತಾ ಅವರ ಮಗ ಕಾಫಿಯಿಂದ ಬಂದ ಹಣವನ್ನು ತೆಗೆದುಕೊಂಡು ಕೇವಲ 50 ಸಾವಿರ ರೂಪಾಯಿಯನ್ನು ಮನೆಯಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಕಾಫಿಯಿಂದ ಬಂದ ದುಡ್ಡು ಇದೆಯೆಂದು ಗೊತ್ತಿರುವವರು ಯಾರೋ ಮಹಿಳೆಯನ್ನು ಹತ್ಯೆ ಮಾಡಿ ಮನೆ ದರೋಡೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮಹಿಳೆಯನ್ನು ಹತ್ಯೆ ಮಾಡಿದ ಆರೋಪಿಗಳು ಮನೆಯಲ್ಲಿದ್ದ 50,000 ರೂ. ನಗದು, ಸುಮಾರು ಎರಡು ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮಹಿಳೆಯು ಪ್ರತೀ ದಿನ ತೋಟದಲ್ಲಿ ಕೆಲಸ ಮಾಡಿ ಬಳಿಕ ಸಂಜೆ ಸ್ನಾನ ಮಾಡಿಯೇ ಮನೆಯೊಳಕ್ಕೆ ಹೋಗುತ್ತಿದ್ದರಂತೆ. ನಿನ್ನೆಯೂ ಕೂಡ ತೋಟದಲ್ಲಿ ಕೆಲಸ ಮಾಡಿ ಬಂದು ಮನೆ ಹಿಂದಿರುವ ಸ್ನಾನದ ಮನೆಯಲ್ಲಿ ನೀರು ಬಿಸಿ ಮಾಡಲು ಹೋದಾಗ ಸ್ನಾನದ ಮನೆಯ ಬಳಿಯೇ ದುಷ್ಕರ್ಮಿಗಳು ಮಹಿಳೆಯನ್ನು ಹತ್ಯೆ ಮಾಡಿದ್ದಾರೆ.
ಸ್ಥಳಕ್ಕೆ ಕೊಡಗು ಎಸ್ ಪಿ ಕ್ಷಮಾ ಮಿಶ್ರಾ ಮತ್ತು ಮಡಿಕೇರಿ ಡಿವೈಎಸ್ಪಿ ದಿನೇಶ್ ಕುಮಾರ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.