ಬೆಣ್ಣೆ ಹಣ್ಣಿನ ವಿವಿಧ ಖಾದ್ಯಗಳು

ಉಡುಪಿ, ಮೇ.4( ಉಡುಪಿ ಟೈಮ್ಸ್ ವರದಿ) : ಬೆಣ್ಣೆ ಹಣ್ಣು ( ಆವಕಾಡೊ) ಇದು ರುಚಿಕರವಾದ ಪೌಷ್ಟಿಕಾಂಶ ಭರಿತ ಹಣ್ಣು ಗಳಲ್ಲಿ ಒಂದು.ಬೆಣ್ಣೆ ಹಣ್ಣಿನಲ್ಲಿ ವಿಟಮಿನ್ ಎ, ಬಿ, ಸಿ, ಈ, ನಾರಿನಾಂಶ ಹಾಗೂ ಆ್ಯಂಟಿ ಆಕ್ಸಿಡಂಟ್‍ಗಳು ಹೇರಳವಾಗಿವೆ. ಈ ಹಣ್ಣು ಕೊಬ್ಬಿನಿಂದ ತುಂಬಿದ್ದರೂ ಅದರಲ್ಲಿ ಅನ್‍ಸ್ಯಾಚುರೇಟಡ್ ಕೊಬ್ಬು ಹೆಚ್ಚಾಗಿದ್ದು, ಅದು ಆರೋಗ್ಯಕರ ಕೊಬ್ಬಾಗಿದೆ. ಈ ಹಣ್ಣನ್ನು ಹಾಗೆ ತಿನ್ನಲು ತುಂಬಾ ರುಚಿಕರವಾಗಿದ್ದರೂ ಕೂಡಾ ಇದರ ಜ್ಯೂಸ್ ತುಂಬಾ ರುಚಿಕರ ವಾಗಿರುತ್ತದೆ. ಅಲ್ಲದೆ ಈ ಹಣ್ಣನ್ನು ವಿವಿಧ ಬಗೆಯ ತಿನಿಸು ಹಾಗೂ ಹಲವಾರು ಖಾದ್ಯಗಳಲ್ಲೂ ಬಳಕೆ ಮಾಡಲಾಗುತ್ತದೆ. ನಮ್ಮ ಇಂದಿನ ಅಂಕಣ ದಲ್ಲಿ ಬೆಣ್ಣೆ ಹಣ್ಣಿನಿಂದ ತಯಾರಿಸುವ ರುಚಿಕರ ಹಾಗೂ ಪೌಷ್ಟಿಕಾಂಶ ಯುಕ್ತ ಕೆಲವು ತಿನಿಸುಗಳನ್ನು ಪರಿಚಯಿಸುತ್ತಿದ್ದೇವೆ.


ಬೆಣ್ಣೆಹಣ್ಣಿನ ಪರೋಟ
ಬೇಕಾಗುವ ಸಾಮಗ್ರಿಗಳು : ಬೆಣ್ಣಿಹಣ್ಣು – 1, ಗೋಧಿ ಹಿಟ್ಟು – 2 ಕಪ್, ಜೀರಿಗೆ ಪುಡಿ – 1/2 ಚಮಚ, ಖಾರದ ಪುಡಿ – 1/2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಹುಳಿ ಹುಡಿ – ಸ್ವಲ್ಪ , ತುಪ್ಪ

ಮಾಡುವ ವಿಧಾನ :
ಪಾತ್ರೆಗೆ ಸಿಪ್ಪೆ ಹಾಗೂ ಬೀಜ ತೆಗೆದ ಬೆಣ್ಣೆ ಹಣ್ಣನ್ನು ಹಾಕಿ ಚೆನ್ನಾಗಿ ಸ್ಮಾಶ್ ಮಾಡಿ, ನಂತರ ತುಪ್ಪವನ್ನು ಹೊರತುಪಡಿಸಿ ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಕಲಸಿ (ಹಿಟ್ಟನ್ನು ಕಲಸಲು ನೀರಿನ ಅವಶ್ಯಕತೆ ಇಲ್ಲ. ಬೇಕಾದಲ್ಲಿ ಬಳಸಿಕೊಳ್ಳಿ). ಹದಿನೈದರಿಂದ ಇಪ್ಪತ್ತು ನಿಮಿಷ ಬಿಡಿ. ನಂತರ ಉಂಡೆಗಳನ್ನಾಗಿ ಮಾಡಿ ಚಪಾತಿಯಂತೆ ಲಟ್ಟಿಸಿ, ಕಾದ ತವಾದ ಮೇಲೆ ತುಪ್ಪ ಹಾಕಿ ಬೇಯಿಸಿದರೆ ರುಚಿಯಾದ ಬೆಣ್ಣೆ ಹಣ್ಣಿನ ಪರೋಟ ಸವಿಯಲು ಸಿದ್ಧ.

ಬೆಣ್ಣೆಹಣ್ಣಿನ ಮಿಲ್ಕ್ ಶೇಕ್:

ಬೇಕಾಗುವ ಸಾಮಾಗ್ರಿಗಳು : ಬೆಣ್ಣೆ ಹಣ್ಣು 1, ಹಾಲು 1ರಿಂದ 1/2, ನೀರು – 1/2 ಕಪ್, ಸಕ್ಕರೆ – 1/2 ಕಪ್, ಏಲಕ್ಕಿ ಪುಡಿ

ಮಾಡುವ ವಿಧಾನ : ಮಿಕ್ಸಿಯಲ್ಲಿ ಸಿಪ್ಪೆ ಹಾಗೂ ಬೀಜ ತೆಗೆದ ಬೆಣ್ಣೆ ಹಣ್ಣು, ಸಕ್ಕರೆ, ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಹಾಲು, ಏಲಕ್ಕಿ ಪುಡಿ ಹಾಕಿ ಮತ್ತೊಮ್ಮೆ ಮಿಕ್ಸಿಯಲ್ಲಿ ಕುಬ್ಬಿ. ಬಳಿಕ ರುಚಿಯಾದ ಬೆಣ್ಣೆಹಣ್ಣಿನ ಮಿಲ್ಕ್ ಶೇಕ್ ಲೋಟಕ್ಕೆ ಹಾಕಿ ಸವಿಯಲು ಕೊಡಿ

ಬೆಣ್ಣೆಹಣ್ಣಿನ ಟೋಸ್ಟ್
ಬೇಕಾಗುವ ಸಾಮಗ್ರಿಗಳು: ಬೆಣ್ಣೆ ಹಣ್ಣು – 1, ಬ್ರೆಡ್ 2, ಬೆಳ್ಳುಳ್ಳಿ – 1 ಎಸಳು, ಪೆಪ್ಪರ್ ಪುಡಿ – 1/2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ನಿಂಬೆರಸ – ಸ್ವಲ್ಪ , ಈರುಳ್ಳಿ – 1/2 , ಕ್ಯಾರೆಟ್ – 1, ಟೊಮೇಟೊ – 1, ಕೊತ್ತಂಬರಿ ಸೊಪ್ಪು – ಸ್ವಲ್ಪ, ಬೆಣ್ಣೆ

ಮಾಡುವ ವಿಧಾನ: ಒಂದು ಬೌಲ್‌ಗೆ ಬೆಣ್ಣೆ ಹಣ್ಣನ್ನು ಹಾಕಿ ಸ್ಮಾಶ್ ಮಾಡಿ, ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿಟ್ಟ ಬೆಳ್ಳುಳ್ಳಿ, ಪೆಪ್ಪರ್ ಪುಡಿ, ಉಪ್ಪು, ಲಿಂಬೆರಸ ಹಾಕಿ ಚೆನ್ನಾಗಿ ಕಲಸಿ, ಇನ್ನೊಂದು ಪಾತ್ರೆಯಲ್ಲಿ ತುರಿದ ಕ್ಯಾರೆಟ್, ಹೆಚ್ಚಿಟ್ಟ ಟೊಮೇಟೊ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಪೆಪ್ಪರ್ ಪುಡಿ ಹಾಕಿ ಕಲಸಿಡಿ, ಬ್ರೆಡ್ಡಿನ ಎರಡೂ ಬದಿಗೂ ಬೆಣ್ಣೆ ಸವರಿ ಕಾದ ತವಾದಲ್ಲಿ ಫೈ ಮಾಡಿ, ಬ್ರೆಡ್ ಮೇಲೆ ಬೆಣ್ಣೆ ಹಣ್ಣಿನ ಮಿಶ್ರಣ, ಅದರ ಮೇಲೆ ತರಕಾರಿ ಮಿಶ್ರಣವನ್ನು ಹಾಕಿದರೆ ರುಚಿಯಾದ ಬೆಣ್ಣೆಹಣ್ಣಿನ ಟೋಸ್ಟ್ ಸಿದ್ದ ವಾಗುತ್ತದೆ.

ಬೆಣ್ಣೆಹಣ್ಣಿನ ಸಲಾಡ್
ಬೇಕಾಗುವ ಸಾಮಗ್ರಿಗಳು : ಬೆಣ್ಣೆಹಣ್ಣು – 1 , ಈರುಳ್ಳಿ 1/2, ಟೊಮೇಟೊ – 1, ಕ್ಯಾರೆಟ್ – 1/2, ಸೌತೆ 1/2, ಕಾಳು ಮೆಣಸಿನ ಹುಡಿ, ಉಪ್ಪು, ಕೊತ್ತಂಬರಿ ಸೊಪ್ಪು, ಎಣ್ಣೆ, ಲಿಂಬೆರಸ
ಮಾಡುವ ವಿಧಾನ:
ಸಿಪ್ಪೆ ಹಾಗೂ ಬೀಜ ತೆಗೆದಿಟ್ಟುಕೊಂಡಂತಹ ಬೆಣ್ಣೆ ಹಣ್ಣನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಒಂದು ಬೌಲ್‌ಗೆ ಬೆಣ್ಣೆ ಹಣ್ಣು, ಸಣ್ಣದಾಗಿ ಹೆಚ್ಚಿಟ್ಟ ಈರುಳ್ಳಿ, ಟೊಮೇಟೊ, ಕ್ಯಾರೆಟ್, ಸೌತ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ನಂತರ ಕಾಳು ಮೆಣಸಿನ ಹುಡಿ, ನಿಂಬೆರಸ, ಸ್ವಲ್ಪ ಎಣ್ಣೆ ಹಾಗೂ ಉಪ್ಪು ಹಾಕಿ ಕಲಸಿದರೆ ಆರೋಗ್ಯಕರ ಸಲಾಡ್ ಸಿದ್ಧಗೊಳ್ಳುತ್ತದೆ.

ಬೆಣ್ಣೆಹಣ್ಣಿನ ಐಸ್ ಕ್ರೀಮ್
ಬೇಕಾಗುವ ಸಾಮಗ್ರಿಗಳು : ಬೆಣ್ಣೆ ಹಣ್ಣಿನ ಪಲ್ಸ್ – 2, ಹಾಲಿನ ಕೀಮ್ -1 ಕಪ್ , ಮಿಲ್ಕ್ ಮೇಡ್- 1 ಅಥವಾ 1/ 2ಕಪ್,


ಮಾಡುವ ವಿಧಾನ: ಮೊದಲು ಬೆಣ್ಣೆ ಹಣ್ಣಿನ ಪಲ್ಸ್ ಅನ್ನು ಮಿಕ್ಸಿಗೆ ಹಾಕಿ ಒಂದು ಸುತ್ತು ತಿರುವಿ, ಅದಕ್ಕೆ ಹಾಲಿನ ಕೀಮ್ ಹಾಗೂ ಮಿಲ್ಕ್ ಮೇಡ್ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ, ಈ ಮಿಶ್ರಣ ವನ್ನು ಆರು ಗಂಟೆ ಫ್ರೀಜರ್‌ನಲ್ಲಿ ಇಡಿ, ನಂತರ ಮತ್ತೊಮ್ಮೆ ಮಿಕ್ಸಿಗೆ ಹಾಕಿ ಬ್ಲೆಂಡ್ ಮಾಡಿ ನೊರೆನೊರೆ ಬರುವಷ್ಟು ತಿರುಗಿಸಿ. ಮತ್ತೆ ಆರು ಗಂಟೆ ಫ್ರೀಜರ್‌ನಲ್ಲಿ ಇಟ್ಟರೆ ರುಚಿಯಾದ ಐಸ್ ಕ್ರೀಮ್ ರೆಡಿ.

ವರ್ಷಾ ಮೊಳೆಯಾರ್
ಉಪನ್ಯಾಸಕಿ , ವಿವೇಕಾನಂದ ಕಾಲೇಜು
ಪುತ್ತೂರು, ದ.ಕ

Leave a Reply

Your email address will not be published. Required fields are marked *

error: Content is protected !!