ಚಂದನವನದಿಂದ ಮರೆಯಾದ “ದೊಡ್ಮನೆ ಹುಡುಗ” : ಬದುಕಿನ ಪಯಣ ಮುಗಿಸಿದ “ವೀರ ಕನ್ನಡಿಗ”

ಉಡುಪಿ ಅ.29 (ಉಡುಪಿ ಟೈಮ್ಸ್ ವರದಿ): ಅಭಿಮಾನಿಗಳ ಪಾಲಿನ ಯುವರತ್ನ ಪುನೀತ್ ರಾಜಕುಮಾರ್ ಇಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಇಂದು ಮುಂಜಾನೆ ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ರಣವಿಕ್ರಮನ ಪಯಣ : ಅಣ್ಣಾವ್ರ ಮುದ್ದಿನ ಮಗ ಪುನೀತ್ ಬಾಲ ನಟನಾಗಿ ಮಿಂಚಿದವರು, ತಂದೆಯೊಂದಿಗೆ ಚಿತ್ರಗಳಲ್ಲಿ ನಟಿಸಿದರು. ಪುನೀತ್ ಅಭಿನಯಿಸಿದ ಪ್ರಹ್ಲಾದ ನ ಅಭಿನಯ ಎಲ್ಲರೂ ಮೆಚ್ಚಿದರು. ಅಪ್ಪು ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಪುನೀತ್ ಅನೇಕ ಚಿತ್ರಗಳ ಮೂಲಕ ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಆಗಿ ಬೆಳೆದರು. ಪುನೀತ್ ರಾಜ್ ಕುಮಾರ್ ಅವರು ತಮ್ಮ ಅಭಿನಯದ ಮೂಲಕ ಮಾತ್ರವಲ್ಲದೆ ಗಾಯನದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಸದಭಿರುಚಿಯ ಚಿತ್ರದ ಮೂಲಕ ಸಿನಿಪ್ರಿಯರಿಗೆ ಮನರಂಜನೆ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನೂ ನೀಡುತ್ತಿದ್ದರು. ಇವರು ನಟನೆ ಜೊತೆಗೆ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿದ್ದರು. ಇವರು ಕನ್ನಡದ ಕೋಟ್ಯಾಧಿಪತಿ ಹಾಗೂ ಫ್ಯಾಮಿಲಿ ಪವರ್ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದರು. ಇದರೊಂದಿಗೆ ಇವರು ಅನೇಕ ಪ್ರತಿಷ್ಟಿತ ಕಂಪೆನಿಗಳ ಜಾಹಿರಾತಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

1975 ರ ಜ.17 ರಂದು ಜನಿಸಿದ ಇವರ ಮೂಲ ಹೆಸರು ಲೋಹಿತ್. ಬಾಲನಟನಾಗಿ 1976ರಲ್ಲಿ ಪ್ರೇಮದ ಕಾಣಿಕೆ ಚಿತ್ರದ ಮೂಲಕ ಚಿತ್ರರಂಗ ಪಾದಾರ್ಪಣೆ ಮಾಡಿದ ಅವರು ನಂತರ ವಸಂತ ಗೀತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಬೆಟ್ಟದ ಹೂವು, ಭಕ್ತ ಪ್ರಹಲ್ಲಾದ, ಯಾರಿವನು ಚಿತ್ರ ಸೇರಿದಂತೆ 10 ಚಿತ್ರಗಳಲ್ಲಿ ನಟಿಸಿದ್ದರು.

2002 ರಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಅಪ್ಪು ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ ಅವರು, ಅಭಿ, ಆಕಾಶ್, ಅರಸು, ಮಿಲನ, ವಂಶಿ, ಹುಡುಗರು, ಮೈತ್ರಿ, ಚಕ್ರವ್ಯೂಹ, ನಟಸಾರ್ವ ಭೌಮ, ರಾಜಕುಮಾರ, ಚಕ್ರವ್ಯೂಹ ಸೇರಿ 29 ಚಿತ್ರಗಳಲ್ಲಿ ನಟಿಸಿದ್ದು ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಆಗಿದ್ದರು.

1999 ರ ಡಿ.1 ರಂದು ಅಶ್ವಿನಿ ರೇವಂತ್ ಅವರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ಇವರು ಪಿಆರ್‍ಕೆ ಆಡಿಯೋದ ಮಾಲಕರಾಗಿದ್ದಾರೆ.

ಬೆಟ್ಟದ ಹೂ ಚಿತ್ರದ ಅಭಿನಯಕ್ಕೆ ಬಾಲನಟನಾಗಿ ರಾಷ್ಟ್ರ ಪ್ರಶಸ್ತಿ ಸೇರಿ 3 ಉತ್ತಮಬಾಲ ನಟ ಪ್ರಶಸ್ತಿ ಹಾಗೂ 5 ಉತ್ತಮ ನಟ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಇವರ ಜೇಮ್ಸ್ ಹಾಗೂ ದೈತ್ಯ ಚಿತ್ರಗಳು ಚಿತ್ರೀಕರಣ ಹಂತದಲ್ಲಿದೆ.

ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!