ಬಿಟ್ ಕಾಯಿನ್ ದಂಧೆಯಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು ಅ.29: ಬಿಟ್ ಕಾಯಿನ್ ದಂಧೆ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ, ಯಾರನ್ನೂ ರಕ್ಷಣೆ ಮಾಡುವ ಅವಶ್ಯಕತೆಯೂ ಇಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಈ ಮೂಲಕ “ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳಿದ್ದಾರೆ. ಇದೇ ಕಾರಣಕ್ಕೆ ತನಿಖಾಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬ ವರದಿ ಬರುತ್ತಿದ್ದು ಇದು ಕಳವಳಕಾರಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಬೆಂಗಳೂರಿನಲ್ಲಿಂದು ತಿರುಗೇಟು ನೀಡಿದ್ದಾರೆ. ಹಾಗೂ ಸಿದ್ದರಾಮಯ್ಯ ಸಾಕ್ಷಿ ಆಧಾರ ಇಟ್ಟು ಮಾತಾಡಬೇಕು. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಸಾಕ್ಷಿ ಆಧಾರ ಕೊಡಲಿ, ಅದನ್ನೂ ತನಿಖೆ ಮಾಡುತ್ತೇವೆ. ಏನೂ ಇಲ್ಲದೇ ಸೂತ್ರ ಇಲ್ಲದೇ ಪಟ ಬಿಡಲು ಹೋಗಬಾರದು ಎಂದು ಟೀಕಿಸಿದ್ದಾರೆ.

ಇದೇ ವೇಳೆ ಡ್ರಗ್ಸ್ ವಿರುದ್ಧ ನಾನು ಯುದ್ಧ ಸಾರಿದ್ದೇನೆ ಎಂದ ಅವರು,  ಡ್ರಗ್ಸ್ ಪ್ರಕರಣ, ಅಕ್ರಮ ಹಣ ವರ್ಗಾವಣೆ ಕೇಸುಗಳಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ, ಕೇಂದ್ರದ ತನಿಖಾ ಸಂಸ್ಥೆಗಳು ನಿರಂತರವಾಗಿ ತನಿಖೆ ಮಾಡುತ್ತಿವೆ. ಕಳೆದ ಎರಡೂವರೆ ವರ್ಷದಿಂದ ಅತಿ ಹೆಚ್ಚು ಡ್ರಗ್ ಸೀಜ್ ಮಾಡಲಾಗಿದೆ. ಕಾನೂನಿನನ್ವಯ ಆರೋಪಿಗಳು ತಪ್ಪಿಸಿಕೊಳ್ಳದಂತೆ ಕೇಸ್ ಹಾಕಲಾಗಿದೆ. ಪ್ರಥಮ ಬಾರಿಗೆ ನಮ್ಮ ರಾಜ್ಯ ಡ್ರಗ್ ವಿರುದ್ಧ ದೊಡ್ಡ ಹೋರಾಟ ನಡೆಸಿದೆ ಎಂದು ಹೇಳಿದರು.

ಇನ್ನು ನಾವು ಅತ್ಯಂತ ಪ್ರಾಮಾಣಿಕತೆಯಿಂದ ತನಿಖೆ ಮಾಡಿದ್ದೇವೆ ಎಂದ ಅವರು, ಈ ಕೇಸ್ ನಲ್ಲಿ ನೊ ಕಾಂಪ್ರಮೈಸ್, ನಾವು ಸ್ಪಷ್ಟವಾಗಿದ್ದೇವೆ. ನಾವು ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಬಿಟ್ ಕಾಯಿನ್, ಮನಿಲಾಂಡರಿಂಗ್, ಡ್ರಗ್ ಕೇಸ್ ನಲ್ಲಿ ಯಾರೇ ಇದ್ದರೂ ತನಿಖೆ ಮಾಡುತ್ತೇವೆ. ತಪ್ಪಿತಸ್ಥರ ರಕ್ಷಣೆ ಮಾಡ್ತಿಲ್ಲ. ಯಾರೇ ಪ್ರಭಾವಿ ಇದ್ದರೂ ಕ್ರಮ ಕೈಗೊಳ್ಳುತ್ತೇವ ಎಂದು ಸಿಎಂ ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!