ಶಾಲೆಗಳಲ್ಲಿ ಮಕ್ಕಳಿಗೆ ಸೈಬರ್ ಕ್ರೈಂ ಮತ್ತು ಇಂಟರ್ನೆಟ್ ಬಳಕೆಯ ಜಾಗೃತಿ ಮೂಡಿಸಲು ಶಿಕ್ಷಣ ಸಚಿವರಿಗೆ ಮನವಿ
ಉಡುಪಿ, ಅ.26(ಉಡುಪಿ ಟೈಮ್ಸ್ ವರದಿ): ಶಾಲೆಗಳಲ್ಲಿ ಮಕ್ಕಳಿಗೆ ಸೈಬರ್ ಕ್ರೈಂ ಮತ್ತು ಇಂಟರ್ನೆಟ್ ಬಳಕೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಚೈತನ್ಯ ಫೌಂಡೇಶನ್ ನ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಕಡೆಕಾರು ಹಾಗೂ ಸಾಮಾಜಿಕ ಕಾರ್ಯಕರ್ತ ಜೋಸೆಫ್ ಜಿ.ಎಮ್. ರೆಬೆಲ್ಲೋ ಅವರು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇವರ ಮೂಲಕ ಮನವಿಯನ್ನು ಹಸ್ತಾಂತರಿಸಿದರು.
ಈ ಮನವಿಯಲ್ಲಿ, ಕೋವಿಡ್ ಎಂಬುದು ವಿಶ್ವ ಕಂಡ ದೊಡ್ಡ ದುರಂತ. ಕೋವಿಡ್ ಸಂದರ್ಭದಲ್ಲಿ ಮೊಬೈಲ್ ಮೂಲಕ ಆನ್’ ಲೈನ್ ಶಿಕ್ಷಣವನ್ನು ನೀಡುವುದು ಅನಿವಾರ್ಯತೆಯಾಗಿ ಮೂಡಿಬಂದಿತ್ತು. ಈ ಸಂದರ್ಭದಲ್ಲಿ ಅಪ್ರಾಪ್ತ ಮಕ್ಕಳ ಕೈಗೂ ಮೊಬೈಲ್ ನೀಡಬೇಕಾಗಿ ಬಂದಿತ್ತು.ಅಪ್ರಾಪ್ತ ಮಕ್ಕಳು ಇಂಟರ್ನೆಟ್ ಬಳಕೆಯ ಬಗ್ಗೆ ಸರಿಯಾದ ಜ್ಞಾನ ಇಲ್ಲದೆ ಇಂಟರ್ನೆಟ್ ಬಳಕೆ ಮಾಡುವ ಸಂದರ್ಭದಲ್ಲಿ ಸೈಬರ್ ಕ್ರೈಂಗಳಿಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಆನ್ ಲೈನ್ ಬ್ಲಾಕ್ ಮೇಲ್ ತಂಡಗಳು ಮಕ್ಕಳಿಂದ ತಪ್ಪು ಕೆಲಸಗಳನ್ನು ಮಾಡಿಸುವ ಅಥವಾ ಆರ್ಥಿಕವಾಗಿ ನಷ್ಟ ಉಂಟುಮಾಡುವ ಸಾಧ್ಯತೆಗಳಿವೆ. ಅತಿಯಾದ ಇಂಟರ್ನೆಟ್ ಉಪಯೋಗದಿಂದ ಮಾನಸಿಕ ಸಮಸ್ಯೆಗಳಿಗೆ ಬಲಿಯಾಗುವ ಸಾಧ್ಯತೆಗಳ ಜೊತೆಗೆ ಆತ್ಮಹತ್ಯೆ ಸನ್ನಿವೇಶಗಳು ಬರಬಹುದು.
ದೀರ್ಘ ಅವಧಿಯ ನಂತರ ಈಗ ಶಾಲೆಗಳು ತೆರೆಯಲು ಪ್ರಾರಂಭಿಸಿವೆ. ಈ ಸಂದರ್ಭದಲ್ಲಿ ರಾಜ್ಯದ್ಯಾದಂತ ಶಾಲೆಗಳಲ್ಲಿ ಮೊದಲ ಆದ್ಯತೆಯ ಮೇರೆಗೆ ಸೈಬರ್ ಕ್ರೈಂ ಮತ್ತು ಇಂಟರ್ನೆಟ್ ಬಳಕೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಸರಕಾರದ ವತಿಯಿಂದ ಹಮ್ಮಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.