ನೂರು ಕೋಟಿ ಲಸಿಕಾಕರಣದ ಸಾಧನೆಗೆ ಹೆಮ್ಮೆಪಡೋಣ, ವಿಶ್ರಮಿಸುವುದು ಬೇಡ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ ಅ.22 : ನೂರು ಕೋಟಿ ಲಸಿಕಾಕರಣದ ಸಾಧನೆಗೆ ಹೆಮ್ಮೆ ಪಡೋಣ, ವಿಶ್ರಮಿಸುವುದು ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್ ಆವರಣದ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ 100 ಕೋಟಿ ಲಸಿಕಾಕರಣ ಭಾರತ ದೇಶದ ಪಯಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ನೂರು ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇದಕ್ಕಾಗಿ ಹೆಮ್ಮೆ ಪಡೋಣ ಆದರೆ ವಿಶ್ರಮಿಸುವುದು ಬೇಡ ಎಂದರು.

ವಿಪತ್ತನ್ನು ಕೂಡ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂಬ ಮಾತನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ನಿಜ ಎಂದು ಮಾಡಿ ತೋರಿಸಿದೆ. ಕೋವಿಡ್ ವೈರಾಣು ಕಾಲಿಟ್ಟಾಗ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಿಪಿಇ ಕಿಟ್, ಮಾಸ್ಕ್, ಕೈಗವಸುಗಳಿರಲಿಲ್ಲ. ಇಂದು ಈ ಉತ್ಪನ್ನಗಳನ್ನಷ್ಟೇ ಅಲ್ಲ, ಕೋವಿಡ್ ಲಸಿಕೆಯನ್ನು ಕೂಡ ರಫ್ತು ಮಾಡುವ ಸಾಮಥ್ರ್ಯ ಗಳಿಸಿಕೊಂಡಿದ್ದೇವೆ ಎಂದರು.

ಭಾರತದ ಈ ಸಾಧನೆಗೆ ವಿಶ್ವವೇ ಬೆರಗಾಗಿದೆ. ಕಳೆದ ಜನವರಿ 16 ರಿಂದ ದೇಶದಲ್ಲಿ ಕೋವಿಡ್ ಲಸಿಕೆ ನೀಡಲು ಪ್ರಾರಂಭಿಸಲಾಯಿತು. ಹಂತ ಹಂತವಾಗಿ ಹೆಚ್ಚಳ ಮಾಡುತ್ತಾ ಇದೀಗ ಕೇವಲ ಹತ್ತು ತಿಂಗಳ ಅವಧಿಯಲ್ಲಿ ನೂರು ಕೋಟಿ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇದರ ಹಿಂದೆ ವೈದ್ಯರು, ಅರೆವೈದ್ಯಕೀಯ, ಆರೋಗ್ಯ ಕಾರ್ಯಕರ್ತರ, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯ ಶ್ರಮವಿದೆ. ಇನ್ನು 3-4 ತಿಂಗಳ ಅವಧಿಯಲ್ಲಿ ಮತ್ತೆ ನೂರು ಕೋಟಿ ಲಸಿಕೆ ನೀಡುವ ಗುರಿ ಇದೆ. ರಾಜ್ಯದಲ್ಲಿಯೂ ಡಿಸೆಂಬರ್ ಅಂತ್ಯದ ವೇಳೆಗೆ ಶೇ.90 ರಷ್ಟು ಜನರಿಗೆ ಮೊದಲ ಡೋಸ್ ಹಾಗೂ ಶೇ.70 ರಷ್ಟು ಎರಡನೇ ಡೋಸ್ ಲಸಿಕೆ ನೀಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವಾಗ ಲಸಿಕಾಕರಣವೇ ಮದ್ದು ಎಂಬುದು ನೂರು ವರ್ಷಗಳ ಹಿಂದೆಯೇ ಸಾಬೀತಾಗಿದೆ. ಪೆನ್ಸಿಲಿನಿಂದ ಪೋಲಿಯೋವರೆಗೆ ಅನೇಕ ಲಸಿಕೆಗಳು ಮನುಷ್ಯನಿಗೆ ಬಾಹ್ಯವಾಗಿ ಶಕ್ತಿ ತುಂಬಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಾಗಿದೆ. ವೈರಾಣುಗಳಿಗೆ ಭೌಗೋಳಿಕ ಮತ್ತು ಖಗೋಳಿಯ ಗಡಿಗಳು ಇರುವುದಿಲ್ಲ. ಅಣುಸ್ಫೋಟದಂತೆ ಅದು ವೇಗವಾಗಿ ಹರಡಬಲ್ಲದು. ವೈರಾಣು ರೂಪಾಂತರಗೊಳ್ಳುವುದು ನಮ್ಮ ಮುಂದಿರುವ ಸವಾಲಾಗಿದೆ. ವಿಜ್ಞಾನಿಗಳು ಈ ನಿಟ್ಟಿನಲ್ಲಿ ಸಂಶೋಧನೆಗಳಲ್ಲಿ ಕಾರ್ಯತತ್ಪರರಾಗಿದ್ದಾರೆ. ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿದೆ. ನಮ್ಮ ರಾಜ್ಯದ ಆಸ್ಪತ್ರೆಗಳಲ್ಲಿ ಒಂದೇ ವರ್ಷದಲ್ಲಿ 1 ಲಕ್ಷ 25 ಸಾವಿರ ಹಾಸಿಗೆಗಳ ಸಾಮಥ್ರ್ಯ ಹೆಚ್ಚಾಗಿದೆ. ನಾಲ್ಕು ಸಾವಿರ ವೈದ್ಯಾಧಿಕಾರಿಗಳ ನೇಮಕ ಮಾಡಿಕೊಳ್ಳಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಕೂಡ ಆಕ್ಸಿಜನ್ ಬೆಡ್‍ಗಳ ಸೌಲಭ್ಯ ಸ್ಥಾಪನೆಯಾಗಿವೆ. ವೈದ್ಯಕೀಯ ಆಮ್ಲಜನಕ ಉತ್ಪಾದನೆ ಹಾಗೂ ಪೂರೈಕೆ ಸಮರ್ಪಕ ಮತ್ತು ಸಶಕ್ತವಾಗಿದೆ ಎಂದು ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!