ಕ್ಲಿಷ್ಟಕರ ಸಂದರ್ಭದಲ್ಲಿ ಕಾರ್ಯ ಪ್ರವೃತ್ತರಾಗುವ ಪೊಲೀಸರ ತ್ಯಾಗ ಮತ್ತು ಬಲಿದಾನ ಅವಿಸ್ಮರಣೀಯ: ಜಿಲ್ಲಾಧಿಕಾರಿ ಕೂರ್ಮಾ ರಾವ್

  ಉಡುಪಿ ಅ.21(ಉಡುಪಿ ಟೈಮ್ಸ್ ವರದಿ): ರಾಷ್ಟ್ರೀಯ ಪೊಲೀಸ್ ಹುತಾತ್ಮರ ಸ್ಮರಣೀಯ ದಿನದ ಅಂಗವಾಗಿ ಇಂದು ಉಡುಪಿಯ ಚಂದು ಮೈದಾನದ  ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕೇಂದ್ರಸ್ಥಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಹುತಾತ್ಮ ಪೊಲೀಸರ ಪ್ರತಿಮೆಗೆ ಚಕ್ರ ಪುಷ್ಪ ಗುಚ್ಚ ಸಮರ್ಪಿಸಿ ಗೌರವಾರ್ಪಣೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಯಾವುದೇ ತುರ್ತು ಹಾಗೂ ಕ್ಲಿಷ್ಟಕರ ಸಂದರ್ಭದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗುವ ಪೊಲೀಸರ ತ್ಯಾಗ ಮತ್ತು ಬಲಿದಾನ ಅವಿಸ್ಮರಣೀಯವಾದದ್ದು. ಪೊಲೀಸರು ಸಾಧಾರಣ  ಮತ್ತು ಅಸಾಧರಣ ಸಂದರ್ಭದಲ್ಲಿ ವಿಶೇಷವಾದ ಸೇವೆ ನೀಡಿದ್ದಾರೆ. ಅತೀ ತುರ್ತು, ಅತೀ ಕ್ಲಿಷ್ಟಕರ ಮತ್ತು ಅತೀ ಪ್ರಮಾದಕರವಾದ ಪರಿಸ್ಥಿತಿಯಲ್ಲೂ ಮೊದಲು ಸೇವೆ ನೀಡುವುದು ಪೊಲೀಸರೆ. ಅತೀ ಎಚ್ಚರಿಕೆಯಿಂದ ಇರಬೇಕಾದ ಸಂದರ್ಭದಲ್ಲೂ ಜಾಗೃತರಾಗಿ ಕಾರ್ಯಪ್ರವೃತ್ತರಾಗುವುದೂ ಕೂಡಾ ಪೊಲೀಸರೆ ಎಂದು ಪೊಲೀಸರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪೊಲೀಸರು ಮೊದಲು ಸಮಾಜ ರಕ್ಷಣೆಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ, ನಂತರ ನಮ್ಮವರು ಬಳಿಕ ಸ್ವರಕ್ಷಣೆ ಬಗ್ಗೆ ಆಲೋಚನೆ ಮಾಡುತ್ತಾರೆ. ಇಂದು ಜಿಲ್ಲೆಯಲ್ಲಿ ಜನತೆ ಶಾಂತಿ ಸುವ್ಯವಸ್ಥೆಯಿಂದ ಆರಾಮದಾಯಕವಾಗಿ ಜೀವನವನ್ನು ಸಾಗಿಸುತ್ತಿದ್ದಾರೆಂದರೆ ಅದಕ್ಕೆ ಪೊಲೀಸರ ಸೇವೆಯೇ ಕಾರಣ. ಇಂತಹ ಪೊಲೀಸರಿಗೆ ಬೇಕಾದ ವಿಸೇಷವಾದ ಸೌಲಭ್ಯಗಳನ್ನು ನೀಡಬೇಕಾಗಿದೆ. ಈ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಹಾಗೂ ಪೊಲೀಸರಿಗೆ ಅಗತ್ಯ ಸಂದರ್ಭದಲ್ಲಿ ಸಹಕಾರ ನೀಡಲು ಜಿಲ್ಲಾಡಳಿತ ಸದಾ ಸಿದ್ದರಿರುವುದಾಗಿ ಭರವಸೆ ನೀಡಿದರು.

ಈ ವೇಳೆ ಪರೇಡ್ ಕಮಾಂಡರ್‍ರವರಿಂದ ವಂದನೆ ಸಲ್ಲಿಸಲಾಯಿತು. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಸಧಾಶಿವ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!