ವಿಶಾಲ್ ಗಾಣಿಗ ಕೊಲೆ ಪ್ರಕರಣ ಬೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಗದು ಪುರಸ್ಕಾರ ನೀಡಿ ಅಭಿನಂದನೆ

ಉಡುಪಿ ಸೆ.24( ಉಡುಪಿ ಟೈಮ್ಸ್ ವರದಿ): ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಬ್ರಹ್ಮಾವರದ ಉಪ್ಪಿನಕೋಟೆಯ ವಿಶಾಲ್ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವಾಗಿ ಪ್ರಕರಣವನ್ನು ಭೇದಿಸುವಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಲಾಯಿತು.

ಇಂದು ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿದ ಪಶ್ಚಿಮ ವಲಯದ ಐ.ಜಿ.ಪಿ ದೇವಜ್ಯೋತಿ ರೇ ರವರು ತಂಡದ ಸದಸ್ಯರಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಿದರು.

ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಡಿ.ವೈ.ಎಸ್ಪಿ ಸುಧಾಕರ ನಾಯಕ್, ಅನಂತ ಪದ್ಮನಾಭ ಸಿ.ಪಿ.ಐ ಬ್ರಹ್ಮಾವರ, ಮಂಜುನಾಥ ಗೌಡ ಪಿ.ಐ ಮಣಿಪಾಲ, ಶರಣ್ ಗೌಡ ಸಿ.ಪಿ.ಐ ಮಲ್ಪೆ, ಸಂಪತ್ ಕುಮಾರ್ ಸಿ.ಪಿ.ಐ ಕಾರ್ಕಳ, ಪಿ.ಎಸ್.ಐ ಗಳಾದ ರಾಜಶೇಖರ ವಂದಲಿ, ಗುರುನಾಥ ಹಾದಿಮನಿ, ಮಧು, ಶ್ರೀಧರ ನಾಯಕ್, ರಾಘವೇಂದ್ರ, ಸಿ.ಡಿ.ಅರ್ ವಿಭಾಗದ ಸಿಬ್ಬಂದಿಯವರಾದ ಶಿವಾನಂದ, ದಿನೇಶ್, ನಿತಿನ್ ರವರನ್ನು ಅಭಿನಂದಿಸಲಾಯಿತು.
ಜುಲೈ 12 ರಂದು ವಿಶಾಲಗಾಣಿಗ ರವರನ್ನು ಉಪ್ಪಿನಕೋಟೆಯ ಮಿಲನ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ ನ ಅವರ ವಾಸದ ಫ್ಲ್ಯಾಟ್‌ನಲ್ಲಿಯೇ ಸುಫಾರಿ ಕಿಲ್ಲರುಗಳು ಹತ್ಯೆ ಮಾಡಿದ್ದರು. ಆರೋಪಿ ತುಂಬಾ ಚಾಕಚತ್ಯೆಯನ್ನು ಉಪಯೋಗಿಸಿ ಕೊಲೆ ಮಾಡಿದ್ದರಿಂದ ಪ್ರಕರಣವನ್ನು ಭೇದಿಸುವುದು ಕ್ಲಿಷ್ಟಕರವಾಗಿ, ಸಾರ್ವಜನಿಕರ ವಲಯದಲ್ಲಿ ಸಂಚಲನ ಉಂಟು ಮಾಡಿತ್ತು.
ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್. ವಿಷ್ಣುವರ್ಧನ ರವರ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡದ ಸದಸ್ಯರು ಉತ್ತರ ಪ್ರದೇಶದ ಗೋರಕಪುರದಲ್ಲಿ ಸುಪಾರಿ ಕಿಲ್ಲರ್ ಗಳ ಪೈಕಿ ಸ್ವಾಮಿನಾಥನ್ ನಿಶಾದ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವಿಶಾಲ ಗಾಣಿಗರವರ ಪತಿ ರಾಮಕೃಷ್ಣ ಗಾಣಿಗನೇ ಈ ಕೊಲೆ ಮಾಡಲು ಸುಫಾರಿ ನೀಡಿದ್ದನೆಂದು ತಿಳಿದು ಬಂದಿತ್ತು.
ಈ ಪ್ರಕರಣವನ್ನು ಭೇದಿಸಿದ ಅಧಿಕಾರಿ ಸಿಬ್ಬಂದಿಗಳ ತಂಡಕ್ಕೆ ಕರ್ನಾಟಕ ರಾಜ್ಯ ಡಿ.ಜಿ ಮತ್ತು ಐ.ಜಿ.ಪಿ ರವರಾದ ಪ್ರವೀಣ್ ಸೂದ್ ರವರು 50 ಸಾವಿರ ನಗದು ಪುರಸ್ಕಾರ ಘೋಷಿಸಿದ್ದರು.

Leave a Reply

Your email address will not be published. Required fields are marked *

error: Content is protected !!