ರಂಗಸ್ಥಳದ ಆರಾಧಕ, ಹೆಜ್ಜೆ ಗೆಜ್ಜೆಯ ಮೋಡಿಗಾರ ಸೀತಾರಾಮ ಸೋಮಯಾಜಿ.
ಸಂದರ್ಶನ /ಲೇಖನ: ನಾಗರತ್ನ ಜಿ
ಶಿಕ್ಷಕಿ,ಯಕ್ಷಗಾನ ಕಲಾವಿದೆ
ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ ಮನುಷ್ಯನಿಗೆ ಬೇಕು. ತಾನು ಹಿಡಿದ ಕಾರ್ಯದಲ್ಲಿ ದೃಢವಾದ ನಂಬಿಕೆ, ಅಚಲವಾದ ಮನಸ್ಸು, ನಿರಂತರ ಪರಿಶ್ರಮದಿಂದ ಗುರಿ ಮುಟ್ಟಬಹುದು. ಅದಕ್ಕೆ ವಯಸ್ಸೂ ಕೂಡಾ ಅಡ್ಡಿಯಾಗುವುದಿಲ್ಲ ಎಂಬ ಮಾತಿಗೆ ಸೂಕ್ತ ಉದಾಹರಣೆ ಕೆ ಸೀತಾರಾಮ ಸೋಮಯಾಜಿ.
ಇವರು ಕಾರ್ಕಡ ರಾಮಣ್ಣ ಸೋಮಯಾಜಿ ಮತ್ತು ಪದ್ಮಾವತಿ ಅವರ ಮಗನಾಗಿ ಜುಲೈ 19, 1963 ರಂದು ಜನಿಸಿದರು. ಇವರ ತಂದೆ ಪುರೋಹಿತರು. ತಾಯಿ ಗೃಹಿಣಿ. ಒಬ್ಬರು ಅಕ್ಕ ಹಾಗೂ ಒಬ್ಬರು ತಂಗಿ ಇವರಿಗಿದ್ದಾರೆ. ಇವರದ್ದು ಮಧ್ಯಮ ವರ್ಗದ ಕೂಡು ಕುಟುಂಬದ ಪುರೋಹಿತರ ಮನೆಯಾಗಿದ್ದರಿಂದ ಮಕ್ಕಳಿಗೆ ಉತ್ತಮ ಸಂಸ್ಕಾರಗಳ ಬಗ್ಗೆ ಬಾಲ್ಯದಲ್ಲಿಯೇ ತಿಳುವಳಿಕೆ ನೀಡಲಾಗಿತ್ತು. ಸಾಂಪ್ರದಾಯಿಕ ಕುಟುಂಬದಿಂದ ಬಂದ ಇವರು ತಾವು ಬಾಲ್ಯದಲ್ಲಿ ಕಲಿತ ಮತ್ತು ರೂಢಿಸಿಕೊಂಡು ಬಂದ ಪದ್ಧತಿಗಳನ್ನು ಇವತ್ತಿಗೂ ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿರುವ ಸನ್ನಡತೆಯುಳ್ಳ ಸಾತ್ವಿಕರು.
ಇವರು ಹೊಸ ಹಿರಿಯ ಪ್ರಾಥಮಿಕ ಶಾಲೆ, ಕಾರ್ಕಡ ಇಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಕೋಟ ವಿವೇಕ ವಿದ್ಯಾ ಸಂಸ್ಥೆಯಲ್ಲಿ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಪಡೆದರು. ನಂತರ ಬೆಂಗಳೂರಿಗೆ ತೆರಳಿ ಆಚಾರ್ಯ ಪಾಠಶಾಲೆ ಇಲ್ಲಿ ಬಿ.ಕಾಂ ಪದವಿಯನ್ನು ಮುಗಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಕಾಂ ಶಿಕ್ಷಣವನ್ನೂ ಪೂರೈಸಿದರು. ಚಿಕ್ಕಂದಿನಲ್ಲಿರುವಾಗಲೇ ಯಕ್ಷಗಾನದಲ್ಲಿ ಆಸಕ್ತಿಯನ್ನು ಇವರು ಬೆಳೆಸಿಕೊಂಡವರು. ಇವರ ಮನೆಯಲ್ಲಿ ಯಕ್ಷಗಾನದ ಬಗ್ಗೆ ಅತಿಯಾದ ಆಸಕ್ತಿವುಳ್ಳವರು ಯಾರೂ ಇರಲಿಲ್ಲ.
ಆದರೆ ಇವರ ತಾಯಿಯ ತಂದೆ ಅಂದರೆ ಅಜ್ಜ ಶೆಟ್ಟಿಕೆರೆ ಸೀತಾರಾಮ ಹೊಳ್ಳರು ದೊಡ್ಡ ಹುಟ್ಟುವಳಿದಾರರಾಗಿದ್ದು ಪಕ್ಕಾ ಯಕ್ಷಾಭಿಮಾನಿಯಾಗಿದ್ದರು. ಯಕ್ಷಗಾನ ಕಲಾವಿದರ ಬಗ್ಗೆ ಅಪಾರ ಅಭಿಮಾನ ಹಾಗೂ ಪ್ರೀತಿಯನ್ನು ಹೊಂದಿದ ಇವರು ಕಲಾವಿದರಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ಕೊಡುತ್ತಿದ್ದರು. ಅಲ್ಲದೇ ಅವರ ಕಷ್ಟಕ್ಕೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು.
ಪ್ರತಿವರ್ಷವೂ ಕೂಡಾ ತಮ್ಮ ಮನೆಯ ವಠಾರದಲ್ಲಿ ಅಮೃತೇಶ್ವರಿ ಮೇಳದ ಆಟವನ್ನು ಆಡಿಸುತ್ತಿದ್ದರು. ಬಾಲ್ಯದಲ್ಲಿ ರಜಾ ಸಮಯದಲ್ಲಿ ಅಜ್ಜನ ಮನೆಗೆ ಹೋಗುತ್ತಿದ್ದ ಇವರು ಅಜ್ಜನ ಜೊತೆಗೆ ಒಂದಷ್ಟು ಆಟಗಳನ್ನು ನೋಡುತ್ತಿದ್ದರು. ಹೀಗೆ ಆಟಗಳನ್ನು ನೋಡುವಾಗ ಸಹಜವಾಗಿ ಎಲ್ಲಾ ಮಕ್ಕಳಂತೆಯೇ ಇವರು ಯಕ್ಷಗಾನದತ್ತ ಆಕರ್ಷಿತರಾದರು. ತಾನೂ ಕೂಡಾ ಯಕ್ಷಗಾನ ಕಲಿಯಬೇಕು ಎಂಬ ಆಸೆ ಇವರ ಮನದಲ್ಲಿ ಚಿಗುರೊಡೆಯಿತು. ಆದರೆ ಆಗ ಮಾತ್ರ ಕಾರಣಾಂತರಗಳಿಂದ ಅವರ ಆಸೆ ನೇರವೇರಲಿಲ್ಲ. ಅದಕ್ಕಾಗಿ ಅವರಿಗೆ ತುಂಬಾ ಬೇಸರವಾಗಿತ್ತು. ಮುಂದೊಂದು ದಿನ ತಾನು ಯಕ್ಷಗಾನ ಮಾಡಬಲ್ಲೆ ಎನ್ನುವ ನಂಬಿಕೆಯಿಲ್ಲದಿದ್ದರೂ ಕನಸು ಕಾಣುವುದಕ್ಕೇನೂ ಬರವಿಲ್ಲವಲ್ಲ. ಹಾಗಾಗಿ ಕನಸಿನಲ್ಲಿ ತನ್ನಾಸೆಯನ್ನು ತೃಪ್ತಿಪಡಿಸಿಕೊಂಡರು.
ಇವರು 1986 ರಲ್ಲಿ ಸಿಂಡಿಕೇಟ್ ಬ್ಯಾಂಕ್, ಮಣಿಪಾಲ ಇಲ್ಲಿ ಉದ್ಯೋಗಕ್ಕೆ ಸೇರಿದರು. ಅಲ್ಲಿ 15 ಕ್ಕೂ ಹೆಚ್ಚು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಂತರ ಶೃಂಗೇರಿಯಲ್ಲಿ 3 ವರ್ಷ, ಸಾಲಿಗ್ರಾಮದಲ್ಲಿ 8 ವರ್ಷಗಳ ಕಾಲ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಬ್ರಹ್ಮಾವರದಲ್ಲಿ 3 ವರ್ಷಗಳಿಂದ ಬ್ಯಾಂಕ್ ಅಧಿಕಾರಿಯಾಗಿ ಬಹಳ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬ್ಯಾಂಕಿನ ಎಲ್ಲಾ ಕೆಲಸಗಳ ಬಗ್ಗೆ ಅಪಾರ ಅನುಭವ ಹೊಂದಿರುವ ಇವರು ಗ್ರಾಹಕ ಸ್ನೇಹಿಯಾಗಿದ್ದು ಅವರಿಗೆ ನಗುಮೊಗದ ಸೇವೆಯನ್ನು ಒದಗಿಸುತ್ತಾರೆ. ತಾನೆಂಬ ಅಹಂಭಾವ ಇಲ್ಲದೇ ಎಲ್ಲರನ್ನೂ ಸರಿಸಮಾನವಾಗಿ ನೋಡಿ, ಎಲ್ಲಾ ಕೆಲಸಗಳನ್ನು ಮಾಡಲು ಉದ್ಯುಕ್ತರಾಗಿರುವುದರಿಂದ ಗ್ರಾಹಕರು ಬ್ಯಾಂಕಿಗೆ ಹೋದಾಗ ಇವರ ಬಳಿಯೇ ಸೇವೆ ಪಡೆಯಲು ಬಯಸುತ್ತಾರೆ. ಆದರೆ ಇವರು ಯಾವತ್ತೂ ಕೂಡಾ ತನ್ನ ಸಹೋದ್ಯೋಗಿಗಳಿಗೆ ಸಿಗಬೇಕಾದ ಗೌರವವನ್ನು ಅವರಿಗೇ ಸಲ್ಲುವಂತೆ ಮಾಡುತ್ತಾರೆ. ಗ್ರಾಹಕರ ಸಮಸ್ಯೆಗಳಿಗೆ ಶೀಘ್ರ ಹಾಗೂ ತೃಪ್ತಿಕರ ಪರಿಹಾರವನ್ನೊದಗಿಸುವುದರಲ್ಲಿ ಇವರು ಸಿದ್ಧಹಸ್ತರು.
ಮನುಷ್ಯ ಯಾವತ್ತೂ ಸ್ವಾಭಿಮಾನಿಯಾಗಿರಬೇಕು. ಅದರಲ್ಲೂ ಗಂಡಸರು ತಮ್ಮ ಕೆಲಸಗಳಿಗೆ ಮಡದಿಯನ್ನೋ, ತಾಯಿಯನ್ನೋ ಅಥವಾ ಇನ್ಯಾರನ್ನೋ ಆಶ್ರಯಿಸಿ ಅವರಿಗೆ ತೊಂದರೆಕೊಡಬಾರದು. ಅವರವರ ಕೆಲಸವನ್ನು ಅವರವರೇ ಮಾಡಿಕೊಳ್ಳಬೇಕು ಎನ್ನುವ ಮನೋಭಾವ ಹೊಂದಿದ ಇವರು ಮನೆಗೆಲಸದಲ್ಲಿ ಮಡದಿಗೆ ಸಂತಸದಿಂದ ಸಹಕರಿಸುತ್ತಾರೆ. ರಜಾ ದಿನಗಳಲ್ಲಿ ದೇವಸ್ಥಾನಗಳಿಗೆ ಹೋಗಿ ಅಲ್ಲಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವ ಇಚ್ಛೆಯಿಂದ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಾರೆ. ಕೆಲಸದ ವಿಚಾರದಲ್ಲಿ ಸಮಯದ ಪರಿವೆಯೇ ಇಲ್ಲದಂತೆ ಶ್ರದ್ಧೆಯಿಂದ ದುಡಿಯುವ ಇವರು ತನ್ನ ಮಿತಿಯ ವ್ಯಾಪ್ತಿಯ ಹೊರಗಿನ ಕೆಲಸಗಳಲ್ಲೂ ತಮ್ಮಿಂದಾದ ಸಹಕಾರ ನೀಡುತ್ತಾರೆ. ಸಾಮಾಜಿಕ ಬದುಕನ್ನು ಬಹಳ ಇಷ್ಟಪಡುವ ಇವರು ಹಲವಾರು ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಆಸಕ್ತಿಯಿಂದ ಮಾಡುತ್ತಾರೆ. ಇವರಂತಹ ವ್ಯಕ್ತಿತ್ವವುಳ್ಳ ಸದ್ಗುಣಿಗಳು ವಿರಳವಾಗಿರುವುದರಿಂದ ಇವರ ಬದುಕು ನಮಗೆಲ್ಲ ಅನುಕರಣೀಯ, ಅನುಸರಣೀಯ.
ಇವರು ಸಿಂಡಿಕೇಟ್ ಬ್ಯಾಂಕ್, ಮಣಿಪಾಲದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅಲ್ಲಿನ ಸಿಬಂದಿಗಳೆಲ್ಲ ಸೇರಿಕೊಂಡು ತಮ್ಮ ಬಿಡುವಿನ ವೇಳೆಯ ಸದುಪಯೋಗಕ್ಕಾಗಿ ರಿಕ್ರಿಯೇಶನ್ ಕ್ಲಬ್ ಒಂದನ್ನು ರಚಿಸಿಕೊಂಡರು. ಈ ಕ್ಲಬ್ ಹೆಸರಿಗೆ ಮಾತ್ರ ಇರಬಾರದು, ಇದರಿಂದ ಏನಾದರೂ ಹೊಸತನ್ನು ಪಡೆದುಕೊಳ್ಳಬೇಕು, ಕ್ರಿಯಾಶೀಲವಾದ ಚಟುವಟಿಕೆಗಳನ್ನು ಮಾಡುತ್ತಿರಬೇಕು ಎಂಬ ಸದಾಶಯದಿಂದ ಸಮಾನ ಮನಸ್ಕರೆಲ್ಲ ಸೇರಿ ಯಕ್ಷಗಾನ ಕಲಿಯಲು ಮನಸ್ಸು ಮಾಡಿದರು. ಆಗ ಯಕ್ಷಗಾನ ಗುರುಗಳಾದ ಬನ್ನಂಜೆ ನಾರಾಯಣ ಮದ್ದಲೆಗಾರರು ಬಂದು ತಾಳ ಹಾಗೂ ಹೆಜ್ಜೆ ಕಲಿಸಿದರು.
ಎಲ್ಲರಿಗೂ ಆಸಕ್ತಿ ಇರುವ ಕಾರಣ ಕಲಿಕೆಗೆ ವಯಸ್ಸು ತೊಡಕಾಗಲಿಲ್ಲ. ಎಲ್ಲರೂ ಚೆನ್ನಾಗಿ ಹೆಜ್ಜೆಯನ್ನು ಅಭ್ಯಸಿಸಿ ಒಂದೊಂದೇ ತಾಳದ ಮೇಲೆ ಹಿಡಿದ ಸಾಧಿಸಿದರು. ಯಾವಾಗ ಇವರಿಗೆಲ್ಲ ತಮ್ಮ ಕಲಿಕೆಯ ಮೇಲೆ ವಿಶ್ವಾಸ ಮೂಡಿತೋ ಆಗ ಒಂದು ಯಕ್ಷಗಾನವನ್ನು ಮಾಡಬೇಕೆಂಬ ಬಯಕೆ ಮೂಡಿತು. ಸರಿ ಎಲ್ಲರೂ ಸೇರಿ ಪ್ರದರ್ಶನಕ್ಕೆ ತಯಾರಿ ನಡೆಸಿದರು. ನಿಗದಿತ ದಿನದಂದು ಜಾಂಬವತಿ ಕಲ್ಯಾಣ ಎಂಬ ಆಖ್ಯಾನವನ್ನು ಆಡುವುದೆಂದು ನಿಶ್ಚಯಿಸಿದರು. ಇವರ ರೂಪ ಸ್ತ್ರೀ ವೇಷಕ್ಕೆ ಹೇಳಿ ಮಾಡಿಸಿದಂತಿದ್ದ ಕಾರಣ ಮೊದಲ ಬಾರಿಗೆ ಜಾಂಬವತಿಯಾಗಿ ಬಣ್ಣ ಹಚ್ಚಿದರು. ಇವರ ಮೊದಲ ಪ್ರಯತ್ನ ಅತ್ಯಂತ ಯಶಸ್ವಿಯಾಯಿತು. ಅಲ್ಲಿಂದ ಇವರ ಯಕ್ಷಪಯಣದ ಯಶೋಗಾಥೆ ಆರಂಭವಾಯಿತು.
ಯಾವುದೇ ಒಂದು ಕೆಲಸಕ್ಕೆ ಉತ್ತಮ ಆರಂಭ ಸಿಕ್ಕರೆ ಹಿಡಿದ ಕೆಲಸವನ್ನು ಅರ್ಧ ಮಾಡಿದಂತಾಗುತ್ತದೆ. ಅಂತೆಯೇ ಪ್ರಥಮ ಪ್ರದರ್ಶನದಿಂದ ಉತ್ತೇಜಿತರಾದ ಇವರು ಅಷ್ಟಕ್ಕೇ ತೃಪ್ತರಾಗದೆ ಯಕ್ಷಗಾನದಲ್ಲಿ ತಾನು ಏನಾದರೂ ಹೆಚ್ಚಿನದನ್ನು ಸಾಧಿಸಬೇಕು ಎಂದು ನಿರ್ಧರಿಸಿದರು. ಅದೇ ಸಮಯದಲ್ಲಿ ಇವರ ಊರಾದ ಕಾರ್ಕಡದಲ್ಲಿ ಗೆಳೆಯರ ಬಳಗ ಕಾರ್ಕಡ ಇದರ ವತಿಯಿಂದ ಯಕ್ಷ ಗುರುಗಳಾದ ಸುಬ್ರಾಯ ಮಲ್ಯರಿಂದ ಹವ್ಯಾಸಿಗಳಿಗೆ ಯಕ್ಷಗಾನ ತರಬೇತಿ ಆರಂಭವಾಗಿತ್ತು. ಈ ವಿಚಾರ ತಿಳಿದುಕೊಂಡ ಇವರಿಗೆ ತಾನು ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಯಿತು. ಮತ್ತೆ ತಡ ಮಾಡಲಿಲ್ಲ. ಸಂಬಂಧ ಪಟ್ಟವರನ್ನು ಸಂಪರ್ಕಿಸಿ ಅಲ್ಲಿ ತರಗತಿಗೆ ಸೇರಿಕೊಂಡು ಯಕ್ಷಗಾನ ಕಲಿಕೆಯನ್ನು ಮುಂದುವರಿಸಿದರು. ಇದು ಅವರಿಗೆ ಯಕ್ಷಗಾನದ ಮೇಲಿರುವ ನಿಜವಾದ ಪ್ರೀತಿಯನ್ನು ತೋರಿಸುತ್ತದೆ.
ಅಲ್ಲಿ ಸ್ನೇಹಿತರಾದ ರುದ್ರಯ್ಯ ಆಚಾರ್ ಅವರೊಂದಿಗೆ ಜೋಡಿವೇಷ ಮಾಡುತ್ತಾ ಹಲವಾರು ಯಕ್ಷಗಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದರು. ಜೊತೆಗೆ ಸ್ಥಳೀಯವಾದ ಹಲವಾರು ಸಂಘ ಸಂಸ್ಥೆಗಳಲ್ಲಿ ವಿವಿಧ ರೀತಿಯ ವೇಷ ಮಾಡುವ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಾ ತಮ್ಮ ಅನುಭವವನ್ನು ಇನ್ನಷ್ಟು ಹೆಚ್ಚಿಸಿಕೊಂಡು ಹೆಜ್ಜೆಗಾರಿಕೆಯಲ್ಲಿ ಪಕ್ವತೆ ಸಾಧಿಸಿದರು. ಯಕ್ಷಗಾನ ಗುರುಗಳಾದ ಗೋವಿಂದ ಉರಾಳರ ಮಾರ್ಗದರ್ಶನದಲ್ಲಿಯೂ ಇವರು ಹಲವಾರು ವೇಷಗಳನ್ನು ಮಾಡಿದ್ದಾರೆ. ಹೆಚ್ಚಿನ ಪ್ರಸಂಗಗಳಲ್ಲಿ ಇವರದು ಪ್ರಮುಖ ಸ್ತ್ರೀ ವೇಷ ಹಾಗೂ ಸಾತ್ವಿಕವಾದ ಕೃಷ್ಣನ ವೇಷ. ಭೀಷ್ಮ ವಿಜಯದ ಅಂಬೆ, ದ್ರೌಪದಿ ಪ್ರತಾಪದ ದ್ರೌಪದಿ, ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ, ದಮಯಂತಿ ಸ್ವಯಂವರದ ದಮಯಂತಿ, ಸುಧನ್ವಾರ್ಜುನದ ಪ್ರಭಾವತಿ, ಕೃಷ್ಣಾರ್ಜುನದ ಕೃಷ್ಣ, ಜಾಂಬವತಿಯ ಕೃಷ್ಣ ಇವರ ನೆಚ್ಚಿನ ವೇಷಗಳು.
ಇವರು ತಮ್ಮ ಗೆಳೆಯರೊಂದಿಗೆ ಕೂಡಿಕೊಂಡು ಹೊರರಾಜ್ಯಗಳಾದ ಗೋವಾ, ಹೈದರಾಬಾದ್, ತೀರ್ಥಹಳ್ಳಿ, ಬೆಂಗಳೂರು, ಮಂಗಳೂರು, ಉತ್ತರಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯ ಹಲವಾರು ಕಡೆ 400 ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನವನ್ನು ನೀಡಿದ್ದಾರೆ. ಅಲ್ಲದೇ ಬೆಂಗಳೂರಿನ ದೂರದರ್ಶನದ ಚಂದನ ವಾಹಿನಿಯಲ್ಲಿಯೂ ಕೂಡಾ ಇವರ ಯಕ್ಷಗಾನ ಪ್ರದರ್ಶನವಾಗಿದೆ. ಪ್ರಸ್ತುತ ಇವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇಲ್ಲಿನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಇವರ ಸಾಧನೆಯನ್ನು ಗುರುತಿಸಿ ಗೆಳೆಯರ ಬಳಗ, ಕಾರ್ಕಡ ಮತ್ತು ಯಕ್ಷ ಸೌರಭ ಹಿರೇ ಮಹಾಲಿಂಗೇಶ್ವರ ಕಲಾರಂಗ, ಕೋಟ ಈ ಎರಡು ಸಂಸ್ಥೆಗಳು ಸಂಮಾನಿಸಿವೆ. ಸುಕನ್ಯಾ ಎನ್ನುವವರೊಂದಿಗಿನ ಸುಖೀ ದಾಂಪತ್ಯ ಜೀವನದಲ್ಲಿ ಸೌಜನ್ಯ, ಸಿಂಧು ಎಂಬ 2 ಜನ ಪ್ರತಿಭಾವಂತ ಹೆಣ್ಣು ಮಕ್ಕಳನ್ನು ಪಡೆದಿದ್ದಾರೆ. ಇವರ ಹಿರಿಯ ಮಗಳು ಇಂಜಿನಿಯರಿಂಗ್ ಪದವೀಧರೆ. ಈಗ ಆಕೆಗೆ ಮದುವೆಯಾಗಿದ್ದು ಪತಿಯೊಂದಿಗೆ ಜರ್ಮನಿಯಲ್ಲಿ ವಾಸವಾಗಿದ್ದಾರೆ. ಎರಡನೆಯ ಮಗಳು ಜರ್ನಲಿಸಂ ಅಭ್ಯಾಸ ಮಾಡಿದ್ದು ಪ್ರತಿಷ್ಠಿತ ಟಿ.ವಿ ಚಾನಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪತ್ನಿ ಉತ್ತಮ ಹಾಡುಗಾರರಾಗಿದ್ದು ಸ್ಥಳೀಯ ಭಜನಾ ತಂಡದ ಸದಸ್ಯರೊಂದಿಗೆ ಸೇರಿಕೊಂಡು ವಿವಿಧ ಕಡೆಗಳಲ್ಲಿ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಕಲೆಯ ಬಗ್ಗೆ ಅಪಾರ ಒಲವನ್ನು ಹೊಂದಿರುವ ಇವರು ಗಂಡನಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಇವರ ತಂದೆ ಈಗಾಗಲೇ ತೀರಿಕೊಂಡಿದ್ದು ಜೀವನದ ಸಂಧ್ಯಾ ಕಾಲದಲ್ಲಿರುವ ಅಮ್ಮನನ್ನು ಇವರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಯಕ್ಷಗಾನ ನೋಡುವುದು, ಸಂಗೀತ ಕೇಳುವುದು ಇವರ ನೆಚ್ಚಿನ ಹವ್ಯಾಸಗಳು.
ಮರದಿಂದ ಕೆಳಗೆ ಬಿದ್ದ ಹೂವುಗಳು ಮತ್ತೆ ಅರಳುವುದಿಲ್ಲ. ಆದರೆ ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂವುಗಳು ಹುಟ್ಟುತ್ತದೆ. ಹಾಗೆಯೇ ನಮ್ಮ ಜೀವನದಲ್ಲಿ ಕಳೆದು ಹೋದ ದಿನಗಳು ಮತ್ತೆ ಬರುವುದಿಲ್ಲ. ಆದರೆ ಬದುಕಿನಲ್ಲಿ ಭರವಸೆ ಇದ್ದರೆ ಮಾತ್ರ ನಮ್ಮ ಕನಸುಗಳನ್ನು ನನಸಾಗಿಸಲು ಸಾಧ್ಯ ಎಂಬ ಮಾತಿಗೆ ಪೂರಕವಾಗಿ ಕೆಲಸಕ್ಕೆ ಸೇರಿದ ಮೆಲೆ ಯಕ್ಷಗಾನ ಕಲಿತು ತಮ್ಮ ಕನಸನ್ನು ನನಸಾಗಿಸಿಕೊಂಡ ನಿಮ್ಮ ಬದುಕು ಹಸನಾಗಲಿ ಎಂಬ ಶುಭ ಹಾರೈಕೆ.
ಸಂದರ್ಶನ /ಲೇಖನ: ನಾಗರತ್ನ ಜಿ
ಶಿಕ್ಷಕಿ,ಯಕ್ಷಗಾನ ಕಲಾವಿದೆ
ಲೇಖನದಲ್ಲಿ ಪ್ರಸ್ತುತವಾದ ವಿಷಯಗಳು ನೂರಕ್ಕೆ ನೂರರಷ್ಟು ಸತ್ಯವಾಗಿದೆ.ಸೋಮಾಯಾಜೆಯವರು ಅಜಾತ ಶತ್ರು.ತಾಳ್ಮೆಯ ಪ್ರತಿರೂಪ.
ALL THE BEST Mr.SITARAMA .GOD BELSS YOU
Yes. He was a very nice gentleman. We were colleagues at Syndicate Bank Head Office, Manipal.
ಲೇಖನ ಚೆನ್ನಾಗಿ ಮೂಡಿ ಬಂದಿದೆ. ಸೀತಾರಾಮ ನಮ್ಮ ಸಮಾಜಕ್ಕೆ ಒಂದು ಮಿನುಗು ತಾರೆ.. ತಾಳ್ಮೆಯ ಪ್ರತಿಮೂರ್ತಿ. ಸೇವೆಯ ಅದ್ವಿತೀಯ ಸರದಾರ. ಪರಿವಾರಕ್ಕೊಂಡು ಧ್ರುವ ತಾರೆ. ಸದಾ ಕ್ರಿಯಾಶೀಲ ವ್ಯಕ್ತಿತ್ವ.. ನಮ್ಮ ವಿವೇಕ ಪದವಿಪೂರ್ವ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿ. ಆತನನ್ನು ಲೇಖನದ ಮೂಲಕ ವಿಸ್ತ್ರತವಾಗಿ ಪರಿಚಯಿಸಿದ ಉಡಾಯೋಣ್ಮುಖ ಕಲಾವಿದೆ ನಾಗರತ್ನಳಿಗೆ ಧನ್ಯವಾದಗಳು.