ಬೆಂಗಳೂರು: 20 ಕೆ.ಜಿ ಭಾರದ ಲಂಬಾಣಿ ಉಡುಗೆಯಲ್ಲಿ ಮಿಂಚಲಿರುವ ಶುಭ ಪೂಂಜಾ

ಬೆಂಗಳೂರು ಸೆ.14(ಉಡುಪಿ ಟೈಮ್ಸ್ ವರದಿ): ಇತ್ತೀಚಿಗೆ ನಟಿ ಶುಭಾ ಪೂಂಜಾ ಅವರು 20 ಕೆ.ಜಿ ಭಾರದ ಲಂಬಾಣಿ ಉಡುಗೆ ತೊಟ್ಟು ಭಾರೀ ಸುದ್ದಿಯಾಗುವ ಮೂಲಕ ತಾವು ಹೊಸ ಚಿತ್ರವೊಂದರಲ್ಲಿ ನಟಿಸುತ್ತಿರುವ ಬಗ್ಗೆ ಸೂಚನೆ ಕೊಟ್ಟಿದ್ದರು.
ಬಹುದಿಗಳ ಬಳಿಕ ಶುಭಾ ಪೂಂಜಾ ಅವರು “ಅಂಬುಜ” ಎನ್ನುವ ಚಿತ್ರದಲ್ಲಿ ಲಂಬಾಣಿ ಹುಡುಗಿಯಾಗಿ ನಟಿಸುತ್ತಿದ್ದು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

2018 ರಲ್ಲಿ ತೆರೆಕಂಡ “ಕೆಲವು ದಿನಗಳ ನಂತರ” ಎನ್ನುವ ಸಿನೆಮಾದ ಮೂಲಕ ಪ್ರೇಕ್ಷಕರ ಮನ ಗೆದ್ದು ಚಂದನವನದಲ್ಲಿ ಭರವಸೆ ಹುಟ್ಟಿಸಿದ್ದ ನಿರ್ದೇಶಕ ಶ್ರೀನಿ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಹೊಸ ಆಲೋಚನೆಯ ಜೊತೆಗೆ ಭಿನ್ನತೆಯನ್ನು ಪ್ರೇಕ್ಷಕರಿಗೆ ನೀಡಬೇಕು ಎನ್ನುವ ಹಂಬಲ ಹೊತ್ತ ನಿರ್ದೇಶಕ ಶ್ರೀನಿ “ಅಂಬುಜ” ಎನ್ನುವ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ.

ಇದೀಗ ಚಿತ್ರತಂಡ “ಅಂಬುಜ” ದ ಪಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಶುಭಾಪುಂಜಾ ಅವರು ಒಂದು ವಿಶೇಷ ಗೆಟಪ್ ನಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಇವರ ಜೊತೆಗೆ ಪದ್ಮಜಾರಾವ್, ಕಾಮಿಡಿಕಿಲಾಡಿ ಗೋವಿಂದೇಗೌಡ, ಕಾಮಿಡಿಕಿಲಾಡಿ ನಿರ್ದೇಶಕ ಶರಣಯ್ಯ, ಸಂದೇಶ್ ಶೆಟ್ಟಿ ಅಜ್ರಿ, ಮಜಾಭಾರತದ ಪ್ರಿಯಾಂಕ ಕಾಮತ್, ಬೇಬಿ ಆಕಾಂಕ್ಷ ಹಾಗೂ ಇನ್ನಿತರರು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದು ಒಂದು ಮಹಿಳಾ ಪ್ರಧಾನ ಹಾಗೂ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಜ್ಞಾನ-ವಿಜ್ಞಾನ-ಅಜ್ಞಾನಗಳ ಒಟ್ಟು ಚಿತ್ರಣವೇ “ಅಂಬುಜ” ಸಿನಿಮಾದ ಹೈಲೆಟ್ಸ್. ಈ ಸಿನೆಮಾ ‘ಸಮಾಜದಲ್ಲಿ ಆಗುವ ಒಂದಷ್ಟು ಅವಘಡಗಳು ಹೇಗೆ ಸಾಮಾನ್ಯ ಜನರ ಬದುಕನ್ನ ಹಾಳು ಮಾಡುತ್ತದೆ. ಹಾಗೂ ಅವರು ಅನುಭವಿಸುವ ತೊಂದರೆಗಳೇನು…? ಅವರ ಅಸಹಾಯಕತೆಯನ್ನ ಸಮಾಜ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಕಥಾಹಂದರವನ್ನು ಒಳಗೊಂಡಿದೆ.

ಲಂಬಾಣಿ ವಸ್ತ್ರಾಲಂಕಾರದ ತೂಕ ಬರೋಬ್ಬರಿ – 20ಕೆ.ಜಿ .ಯಿದೆ ಇದನ್ನು ಇಡೀ ಸಿನಿಮಾದಲ್ಲಿ ಶುಭಾಪುಂಜಾ ಹಾಕಿಕೊಂಡು ಚಿತ್ರೀಕರಣ ಮಾಡುವುದೇ ದೊಡ್ಡ ಸಾಹಸ ಎಂದು ಚಿತ್ರತಂಡ ಅಭಿಪ್ರಾಯ ವ್ಯಕ್ತಪಡಿಸಿದೆ. ಇನ್ನು ಈ ಚಿತ್ರದಲ್ಲಿ ಬರುವ ಲಂಬಾಣಿ ಪಾತ್ರದ ವಸ್ತ್ರ ಹಾಗೂ ಆಭರಣಗಳನ್ನು ಸಿದ್ದಮಾಡಲು ಚಿತ್ರತಂಡ ನಾಲ್ಕು ತಿಂಗಳುಗಳು ತೆಗೆದುಕೊಂಡಿದೆ ಹಾಗೂ ಗದಗ ಜಿಲ್ಲೆಯ ಒಂದು ಲಂಬಾಣಿ ತಾಂಡಾದಲ್ಲಿ ಇದನ್ನು ಸಿದ್ದಪಡಿಸಲಾಗಿದೆ ಎಂದು ನಿರ್ದೇಶಕ ಶ್ರೀನಿ ಮತ್ತು ನಿರ್ಮಾಪಕ ಕಾಶೀನಾಥ್ ಮಡಿವಾಳರ್ ಹೇಳಿದ್ದಾರೆ.

ಇದೀಗ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಅಕ್ಟೋಬರ್ ತಿಂಗಳಲ್ಲಿ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ಶುರು ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಗದಗ, ಹಾಗೂ ಚಿಕ್ಕ ಮಂಗಳೂರು ಉಡುಪಿ ,ಕುಂದಾಪುರ ಭಾಗಗಳಲ್ಲಿ ನಡೆಯಲಿದೆಯಂತೆ.
ಈ ಚಿತ್ರಕ್ಕೆ ಕಾಶೀನಾಥ್ ಮಡಿವಾಳರ್ ರವರು ಕಥೆಯನ್ನು ಬರೆದು, ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ ಹಾಗೂ ಸಾಮಾಜಿಕ ಕಳ-ಕಳಿಯ ಚಿತ್ರ ನಿರ್ದೇಶಿಸಿದ್ದ ಶ್ರೀನಿ ಹನುಮಂತರಾಜು ಚಿತ್ರಕಥೆ-ನಿರ್ದೇಶನ ಮಾಡಲಿದ್ದಾರೆ. ಮುರಳೀಧರ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದ್ದು, ಪ್ರಸನ್ನ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದರೊಂದಿಗೆ ಎಂ.ಎಸ್ ತ್ಯಾಗರಾಜರವರು ಹಿನ್ನೆಲೆ ಸಂಗೀತ ನೀಡಲಿದ್ದಾರೆ. ಒಟ್ಟಿನಲ್ಲಿ ವಿಭಿನ್ನ ಕಥೆಯ ಮೂಲಕ ಹೊಸ ಪ್ರಯತ್ನವೊಂದಕ್ಕೆ ಕೈಹಾಕಿರುವ ಚಿತ್ರತಂಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿ.

Leave a Reply

Your email address will not be published. Required fields are marked *

error: Content is protected !!