ಚೌಕಿಯಿಂದ ರಂಗಸ್ಥಳದವರೆಗೆ ಉರಾಳರ ಬಣ್ಣದ ಪಯಣ

ಲೇಖಕಿ: ನಾಗರತ್ನ ಜಿ

ಸಾಧನೆ ಸುಮ್ಮನೆ ಸಾಧಿಸಲು ಸಾಧ್ಯವಿಲ್ಲ, ಅದು ಏಳು, ಬೀಳುಗಳ ,ಕಲ್ಲು ,ಮುಳ್ಳುಗಳ ರಹದಾರಿ. ಆ ದಾರಿಯಲ್ಲಿ ನಡೆಯಲು ಕಾಲುಗಳು ಗಟ್ಟಿ ಇದ್ದರೆ ಸಾಲದು ಸಾಗುವ ಮನಸ್ಸಿರಬೇಕು. ಅಂತಹ ದಾರಿಯಲ್ಲಿ ಸಾಗಿದ ಯಶಸ್ವಿ ಸಾಧಕನೊಬ್ಬನ ಸಾಧನೆಯ ಹಾದಿಯ ಅನಾವರಣ ಇದು. ಸುಮಾರು 30-40 ವರ್ಷಗಳ ಹಿಂದಿನ ಕಥೆಯಿದು. ಶಾಲಾ ವಾರ್ಷಿಕೋತ್ಸವಗಳು ಇಡೀ ರಾತ್ರಿ ನಡೆಯುತ್ತಿದ್ದ ಕಾಲವದು. ಅಂದು ಯಕ್ಷಗಾನ, ನಾಟಕಗಳು ಶಾಲಾ ವಾರ್ಷಿಕೋತ್ಸವದ ಅವಿಭಾಜ್ಯ ಅಂಗವಾಗಿತ್ತು. ಅಂತಹ ಸಂದರ್ಭದಲ್ಲಿ ಬಹು ಬೇಡಿಕೆಯ ಯಕ್ಷಗಾನ ನಿರ್ದೇಶಕರಾಗಿ, ತರಬೇತುದಾರರಾಗಿ, ಭಾಗವತರಾಗಿ, ವಾರ್ಷಿಕೋತ್ಸವಕ್ಕೆ ಅಗತ್ಯವಾದ ವೇಷಭೂಷಣ ವನ್ನೊದಗಿಸುವವರಾಗಿ ಗುರುತಿಸಿಕೊಂಡವರು ಇವರೇ ಹಂದಟ್ಟು ಗೋವಿಂದ ಉರಾಳರು.

ಉರಾಳರ ವ್ಯಕ್ತಿತ್ವವೇ ಹೀಗೆ ಹೋಲಿಕೆಗೆ ನಿಲುಕದ್ದು ಬಡತನದಲ್ಲಿ ಕಾಣಿಸಿದ ಇವರು ಎಂದಿಗೂ ಬಡತನ ಎನ್ನುವುದು ಶಾಪವಲ್ಲ ಅದೊಂದು ವರ ಎಂದು ಭಾವಿಸಿ ಅದನ್ನು ಮೆಟ್ಟಿನಿಂತು ಪ್ರಾಮಾಣಿಕವಾಗಿ ತಮ್ಮನ್ನು ದುಡಿಮೆಯಲ್ಲಿ ತೊಡಗಿಸಿಕೊಂಡವರು. ಎಂದಿಗೂ ದುಡ್ಡಿಗಾಗಿ ಹಪಹಪಿಸಿದವರಲ್ಲ. ಸಂಘ ಸಂಸ್ಥೆಗಳೋ, ಶಾಲೆಯವರೋ ಇವರ ನಿರೀಕ್ಷೆಗೆ ಮೀರಿದ ಮೊತ್ತ ನೀಡಿದರೆ ತನಗಿಷ್ಟು ಬೇಡವೇ ಬೇಡ ಎಂದು ಹಿಂದಿರುಗಿಸುತ್ತಿದ್ದವರು. ಅಲ್ಲದೇ ಅವರಲ್ಲಿ ಹಣ ಕಮ್ಮಿ ಇದ್ದರೆ ತಮ್ಮಲ್ಲಿರುವ ಹಣವನ್ನೇ ದೇಣಿಗೆಯಾಗಿ ನೀಡುವ ಅಥವಾ ಅವರಿಂದ ಕಡಿಮೆ ಹಣ ಪಡೆಯುವ ಉದಾರ ಮನಸ್ಸಿನವರು.

ಒಮ್ಮೆ ಹೀಗೆ ಒಂದು ವಾರ್ಷಿಕೋತ್ಸವದ ಸಂದರ್ಭ ಕಲಾವಿದರೊಬ್ಬರು ಯಕ್ಷಗಾನದ ಆಭರಣಗಳನ್ನು ಕಳಚುವಾಗ ತಮಗರಿವಿಲ್ಲದೆಯೇ ತಮ್ಮ ಚಿನ್ನದ ಸರವನ್ನೂ ಕಳಚಿಕೊಟ್ಟಿದ್ದರು. ಮರುದಿನ ಆಭರಣಗಳನ್ನು ಒಪ್ಪವಾಗಿ ಜೋಡಿಸುತ್ತಿದ್ದಾಗ ಚಿನ್ನದ ಸರ ಸಿಕ್ಕಾಗ ಅದನ್ನು ಜೋಪಾನವಾಗಿ ಎತ್ತಿಟ್ಟು ಅವರಿಗೆ ಹಿಂದಿರುಗಿಸಿದವರು. ಯಕ್ಷಗಾನದ ವೇಷಭೂಷಣಗಳಿಗೆ ಹೋಲಿಸಿದಾಗ ನಾಟಕದ ವೇಷಭೂಷಣಗಳಿಂದ ಲಾಭ ಹೆಚ್ಚು ಎಂದು ತಿಳಿದರೂ ಅವರಿಗೆ ಯಕ್ಷಗಾನ ಡ್ರೆಸ್ ಮಾಡುವುದೇ ಬಲು ಪ್ರೀತಿ. ಗ್ರೀನ್ ರೂಮಿನಲ್ಲಿ ಮಕ್ಕಳಿಗೆ ಮೇಕಪ್ ಮಾಡುತ್ತಿರುವಾಗ ಯಕ್ಷಗಾನದ ಹಾಡು ಸಂಭಾಷಣೆ ಕಿವಿಗೆ ಬೀಳುತ್ತಿದ್ದರೆ ಅದೇನೋ ಹಿತ ಎನ್ನುತ್ತಾರೆ ಉರಾಳರು .

ಇವರು ಎಚ್ ಮಾಧವ ಉರಾಳರು ಮತ್ತು ಇಂದಿರಮ್ಮ ಇವರ ಮಗನಾಗಿ ಹಂದಟ್ಟು ಎಂಬಲ್ಲಿ ಜುಲಾಯಿ 9 , 1950 ರಲ್ಲಿ ಜನಿಸಿದರು. ಇವರು 1 ರಿಂದ 6 ನೇ ತರಗತಿಯನ್ನು ಮನೆಯ ಸಮೀಪದ ತೋಡ್ಕಟ್ಟು ಶಾಲೆಯಲ್ಲಿ ಮುಗಿಸಿದರು. ಆದರೆ ಬಾಲ್ಯದಲ್ಲಿ ಕಾಡುತ್ತಿದ್ದ ಬಡತನದಿಂದಾಗಿ ಊರಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಲಾಗಲಿಲ್ಲ. ಆಗ ಇವರ ಸೋದರ ಮಾವ ತನ್ನ ಅಳಿಯನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡರು. ಅವರ ಜೊತೆ ಅವರ ಮನೆಯಾದ ಮಂಡ್ಯ ಜಿಲ್ಲೆಯ ಪಾಂಡವಪುರಕ್ಕೆ ಹೋದರು. ಅಲ್ಲಿ ಹೊಟೆಲ್ ಕೆಲಸ ಮಾಡುತ್ತಾ, ಮಾವನಿಗೆ ಸಹಕರಿಸುತ್ತಾ ವಿದ್ಯಾಭ್ಯಾಸ ಮುಂದುವರೆಸಿದರು. ಅಲ್ಲಿ ಹತ್ತನೆಯ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ ನಂತರ ಮೈಸೂರಿಗೆ ಹೋಗಿ ಅಲ್ಲಿಯೂ ಹೊಟೆಲ್ ಕೆಲಸ ಮಾಡುತ್ತಾ, ಪೇಪರ್ ಹಾಕುತ್ತಾ ಸಂಜೆ ಕಾಲೇಜಿನಲ್ಲಿ ಪಿ.ಯು.ಸಿ ಮುಗಿಸಿದರು. ಹಾಗೆಯೇ ಪದವಿ ಶಿಕ್ಷಣವನ್ನು ಪಡೆಯುವ ಉದ್ದೇಶದಿಂದ ಸಂಜೆ ಕಾಲೇಜಿನಲ್ಲಿಯೇ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಆದರೆ ದುರದೃಷ್ಟವಶಾತ್ ಪದವಿ ಕೊನೆಯ ವರ್ಷದಲ್ಲಿರುವಾಗ ಇವರ ತಂದೆ ತೀರಿಕೊಂಡಿದ್ದರಿಂದ ಅನಿವಾರ್ಯವಾಗಿ ಊರಿಗೆ ಬರಲೇಬೇಕಾಯಿತು. ಇಲ್ಲಿನ ಪರಿಸ್ಥಿತಿಗಳು ತೀರಾ ಅನನುಕೂಲವಾಗಿದ್ದರಿಂದ ಮತ್ತೆ ಅವರಿಗೆ ಮೈಸೂರಿಗೆ ಹೋಗಿ ತಮ್ಮ ವಿದ್ಯಾಭ್ಯಾಸ ಮುಂದುವರೆಸಲಾಗಲಿಲ್ಲ. ಹಾಗಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಬೇಕಾಯಿತು. ಅಂತಹ ಸಂದರ್ಭ ಮೈಸೂರಿನ ಹೊಟೆಲಿನ ಸಾಹುಕಾರರು ಅವರ ಸಂಬಂಧಿಯಾದ ಕುಂದಾಪರದ ಪಾರಿಜಾತ ಹೊಟೆಲಿನ ಸಾಹುಕಾರರನ್ನು ಸಂಪರ್ಕಿಸಿ ಇಲ್ಲಿಯೇ ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟರು. ನಂತರ ತಮ್ಮನಿಗೊಂದು ಸ್ವಾವಲಂಬಿ ಬದುಕನ್ನು ಕಲ್ಪಿಸಬೇಕೆಂಬ ಉದ್ದೇಶದಿಂದ ಇವರ ಅಣ್ಣ ರಸ್ತೆಯ ಬದಿ ಒಂದು ಜಾಗ ಖರೀದಿಸಿ ಸೈಕಲ್ ಶಾಪ್ ಅನ್ನು ಇಟ್ಟುಕೊಟ್ಟರು. ಜೊತೆಗೆ ಕೃಷಿ ಕೆಲಸದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು.

ಅಲ್ಲಿ ಕೆಲಸ ಮಾಡುತ್ತಿದ್ದಾಗ ಯಕ್ಷಗಾನ ಕ್ಷೇತ್ರ ಇವರನ್ನು ಕೈಬೀಸಿ ಕರೆಯಿತು. ಆಗ ಕಸ್ತೂರಿ ಕನ್ನಡ ಕೂಟದವರು ಸಾಲಿಗ್ರಾಮದಲ್ಲಿ ಯಕ್ಷಗಾನ ತರಗತಿ ನಡೆಸುತ್ತಿದ್ದರು. ಆಗ ಅಲ್ಲಿ ಗೋರ್ಪಾಡಿ ವಿಠಲ ಪಾಟೀಲರು ಯಕ್ಷಗಾನ ಗುರುಗಳಾಗಿದ್ದು ಅವರ ಬಳಿ 2 ವರ್ಷಗಳ ಕಾಲ ಭಾಗವತಿಕೆಯನ್ನು ಅಭ್ಯಾಸ ಮಾಡಿದರು. ನಂತರ ಮಣೂರು ಮಹಾಬಲ ಕಾರಂತರಲ್ಲಿ 3 ವರ್ಷಗಳ ಕಾಲ ಭಾಗವತಿಕೆಯನ್ನು ಕಲಿತರು. ಅದೇ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಯಕ್ಷಗಾನ ಕಲಿಸುವ ಅವಕಾಶ ಒದಗಿಬಂತು. ವಿಪರ್ಯಾಸವೆಂದರೆ ಯಾವ ಗುರುಗಳಿಂದಲೂ ಯಕ್ಷಗಾನದ ಹೆಜ್ಜೆಯನ್ನು ಇವರು ಸಾಂಪ್ರದಾಯಿಕವಾಗಿ ಕಲಿತವರಲ್ಲ. ತನ್ನೂರಿನಲ್ಲಿ ನಡೆಯುತ್ತಿದ್ದ ಆಟಗಳನ್ನು ನೋಡುತ್ತಾ ಅದೇ ಹೆಜ್ಜೆಯನ್ನು ಅಭ್ಯಾಸ ಮಾಡುತ್ತಾ ಕಲಿತ ಏಕಲವ್ಯ.
ಆದರೆ ಭಾಗವತಿಕೆ ಚೆನ್ನಾಗಿ ಗೊತ್ತಿದ್ದುದರಿಂದ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಲು ಸಹಕಾರಿಯಾಯಿತು. ಅಲ್ಲದೇ ಇವರ ನಿರ್ದೇಶನದ ಮಕ್ಕಳ ಯಕ್ಷಗಾನ ನೋಡಿದವರು ಉರಾಳರ ಹೆಜ್ಜೆಯೆಂದರೆ ಪರಿಪೂರ್ಣವಾಗಿರುತ್ತೆ ಎಂದು ಶಹಬ್ಬಾಸ್‌ಗಿರಿ ನೀಡಿದರು.

ಯಕ್ಷಗಾನಕ್ಕೆ ಮುಖ್ಯವಾಗಿ ಲಯ ಬೇಕು. ಮಕ್ಕಳಿಗೆ ಯಕ್ಷಗಾನ ಕಲಿಸುವಾಗ ಲಯ ಇಲ್ಲದ ಮಕ್ಕಳನ್ನು ಯಕ್ಷಗಾನದಿಂದ ತೆಗೆದಾಗ ಆ ಮಕ್ಕಳು ಬಹಳ ಬೇಸರಪಟ್ಟುಕೊಳ್ಳುತ್ತಿದ್ದರು. ಆಗ ಆ ಮಕ್ಕಳು ತಾವೂ ಯಕ್ಷಗಾನ ಕಲಿಯಬೇಕೆಂಬ ಆಸಕ್ತಿಯನ್ನು ತೋರಿಸುವುದನ್ನು ನೋಡಿ ಅವರನ್ನು ನಿರಾಸೆಗೊಳಿಸಬಾರದೆಂದು ಕಿರಾತ ಪಡೆಯಲ್ಲಿ ಪಾತ್ರ ಮಾಡಲು ಅವಕಾಶ ನೀಡಿದರು. ಅಲ್ಲದೇ ಮಕ್ಕಳಿಗಾಗಿ ಸ್ವಂತ ಯಕ್ಷಗಾನ ವೇಷಭೂಷಣಗಳನ್ನು ಹೊಲಿಸಿದರು. ನಂತರದ ದಿನಗಳಲ್ಲಿ ನಾಟಕದ ವೇಷಭೂಷಣಗಳನ್ನು ಹೊಲಿಸಿಕೊಂಡರು. ಉಡುಪಿ ಜಿಲ್ಲೆಯಾದ್ಯಂತ ಹೆಚ್ಚಿನ ಶಾಲೆಗಳು ತಮ್ಮ ವಾರ್ಷಿಕೋತ್ಸದ ವೇಷಭೂಷಣಕ್ಕಾಗಿ ಇವರನ್ನೇ ಕರೆಯುತ್ತಿದ್ದರು. ಹೀಗೆ ವೇಷಭೂಷಣಕ್ಕಾಗಿ ಶಾಲೆಗಳ ಬೇಡಿಕೆ ಹೆಚ್ಚಾದಾಗ ಇವರ ಸಮಸ್ಯೆಯನ್ನು ಅರ್ಥೈಸಿಕೊಂಡ ಶಾಲೆಯವರು ಇವರು ನೀಡುವ ದಿನಾಂಕದಂದೇ ವಾರ್ಷಿಕೋತ್ಸವಗಳನ್ನು ನಡೆಸುತ್ತಿದ್ದರು.

ಗೆಳೆಯರಾದ ಕೃಷ್ಣಮೂರ್ತಿ ಉರಾಳರ ಜೊತೆ ಸೇರಿ ಗಜಾನನ ಪ್ರಸಾಧನ, ಉರಾಳ ಬಳಗ ಕೋಟ, ಎಂಬ ಸಂಸ್ಥೆಯನ್ನು ಸ್ಥಾಪಿಸಿದ ಮೇಲೆ ಇವರಿಗೆ ಮತ್ತಷ್ಟು ಪ್ರಖ್ಯಾತಿ ಬಂತು. ಮಕ್ಕಳು ಭಾರವಾದ ಕೇದಗೆ ಮುಂದಲೆಯನ್ನು ಹಾಕಿ ರಂಗಸ್ಥಳದಲ್ಲಿ ಕುಣಿಯುವುದು ಕಷ್ಟ ಎಂಬುದನ್ನರಿತ ಇವರ ಬಳಗ ಥರ್ಮಾಕೋಲ್‌ನಲ್ಲಿ ಹಗುರವಾದ ಕೇದಗೆ ಮುಂದಲೆಯನ್ನು ಪ್ರಯೋಗಾತ್ಮಕವಾಗಿ ಪರಿಚಯಿಸಿತು. ಈಗ ಅದೇ ಕೇದಗೆ ಮುಂದಲೆಯೇ ಚಾಲ್ತಿಯಲ್ಲಿದೆ. ಇಂತಹ ನೂತನ ಪ್ರಯೋಗವೊಂದನ್ನು ಮಾಡಿ ಅದರಲ್ಲಿ ಯಶಸ್ವಿಯಾಗಿ ಯಕ್ಷಗಾನ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದ ಕೀರ್ತಿ ಇವರ ಬಳಗಕ್ಕೆ ಸಲ್ಲುತ್ತದೆ.

ಮರೆಯಾಗುತ್ತಿದ್ದ ಅಟ್ಟಣಿಗೆ ಆಟವನ್ನು ರಾಘವ ನಂಬಿಯಾರ್ ಅವರೊಂದಿಗೆ ಸೇರಿ ಮತ್ತೆ ರಂಗಕ್ಕೆ ಪರಿಚಯಿಸಿದರು. ಮಕ್ಕಳಿಗೆ ಹೂವಿನ ಕೋಲು ಎಂಬ ವಿಶಿಷ್ಟ ಕಲೆಯ ಬಗ್ಗೆ ತರಬೇತಿ ನೀಡಿ ಅದನ್ನು ಪುನರುಜ್ಜೀವನಗೊಳಿಸುವಲ್ಲಿ ಇವರದು ಪ್ರಮುಖ ಪಾತ್ರ.

ಇವರು ಬೆಂಗಳೂರು, ಮಂಗಳೂರು, ಶಿವಮೊಗ್ಗ, ಉಡುಪಿ ಮುಂತಾದ ಕಡೆ ಯಕ್ಷಗಾನಕ್ಕೆ ಸಂಬಂಧಿಸಿದಂತೆ ನಡೆದ ವಿವಿಧ ರೀತಿಯ ಕಮ್ಮಟ, ಕಾರ್ಯಾಗಾರ, ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಮ್ಮ ತಮ್ಮ ವಿದ್ಯೆಯನ್ನು ನಿಸ್ವಾರ್ಥವಾಗಿ ಧಾರೆಯೆರೆದಿದ್ದಾರೆ. ಕೇರಳ ಸಂಗೀತ ನಾಟಕ ಅಕಾಡೆಮಿ, ಚಿಲ್ಡ್ರನ್ಸ್ ನ್ಯಾಷನಲ್ ಥಿಯೇಟರ್ ಫೆಸ್ಟಿವಲ್‌ನಲ್ಲಿಯೂ ಕೂಡಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹೆಮ್ಮೆ ಇವರದು.

ನಾಗರತ್ನ ಎನ್ನುವವರನ್ನು ವರಿಸಿ ಅವರೊಂದಿಗಿನ ಸಾಂಸಾರಿಕ ಜೀವನದಲ್ಲಿ ಎಚ್. ಜಿ ಗಣೇಶ ಉರಾಳ ಮತ್ತು ಎಚ್ ಜಿ ವಿಷ್ಣುಮೂರ್ತಿ ಉರಾಳ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದಾರೆ. ಇವರ ಹಿರಿಯ ಮಗ ಎಚ್. ಜಿ ಗಣೇಶ ಉರಾಳ ಪ್ರಸ್ತುತ ಎಂ.ಐ.ಟಿ ಮಣಿಪಾಲ ಇಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಅದರಲ್ಲಿ ಚಿನ್ನದ ಪದಕವನ್ನು ತಮ್ಮ ಕೊರಳಿಗೇರಿಸಿಕೊಂಡಿದ್ದಾರೆ. ಈಗ ಇವರು ಡಾಕ್ಟರೇಟ್ ಕೂಡಾ ಮಾಡುತ್ತಿದ್ದಾರೆ. ಕಿರಿಯ ಮಗ ಎಚ್ ಜಿ ವಿಷ್ಣುಮೂರ್ತಿ ಉರಾಳ ಲ್ಯಾಬ್ ಟೆಕ್ನೀಶಿಯನ್ ಆಗಿ ತಮ್ಮದೇ ಸ್ವಂತ ಲ್ಯಾಬ್ ನ್ನು ನಡೆಸುತ್ತಿದ್ದಾರೆ. ಮಕ್ಕಳಿಬ್ಬರೂ ಮೇಕಪ್‌ನಲ್ಲಿ ಬಹಳ ಆಸಕ್ತಿ ಹೊಂದಿದುದರಿಂದ ಅಪ್ಪನ ಕೆಲಸದಲ್ಲಿ ಸಂತೋಷದಿಂದ ಸಹಕರಿಸುತ್ತಾರೆ. ಜೊತೆಗೆ ಸೊಸೆಯಂದಿರೂ ಕೂಡಾ ಮಾವನ ಗರಡಿಯಲ್ಲಿ ಪಳಗಿದ್ದು ವಾರ್ಷಿಕೋತ್ಸವ ಸಂದರ್ಭದಲ್ಲಿ ಮೇಕಪ್ ಮಾಡಲು ಮಾವನಿಗೆ ಸಹಕರಿಸುತ್ತಾರೆ.
ಈಗ ಇವರ ಮೊಮ್ಮಕ್ಕಳೂ ಕೂಡಾ ಅಜ್ಜನಿಂದ ಹೆಜ್ಜೆ ಕಲಿತು ಯಕ್ಷಗಾನ ರಂಗದಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಿದ್ದಾರೆ. ಈಗ ಇವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಹಂದಟ್ಟು ಎಂಬಲ್ಲಿ ವಾಸವಿದ್ದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಯಕ್ಷಗಾನ ಕ್ಷೇತ್ರಕ್ಕೆ ಇವರು ನೀಡಿರುವ ಅಮೋಘ ಕೊಡುಗೆಗಾಗಿ ಕಾಳಿಂಗ ನಾವಡ ಪ್ರಶಸ್ತಿ ಮತ್ತು ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದವರ ಸದಾನಂದ ಪ್ರಶಸ್ತಿಗಳು ಒಲಿದು ಬಂದಿದೆ. ಅಲ್ಲದೇ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸಂಮಾನಿಸಿವೆ.

71 ರ ಈ ಇಳಿ ವಯಸ್ಸಿನಲ್ಲಿಯೂ ಬತ್ತದ ಉತ್ಸಾಹದಿಂದ ಇವರು ಯಕ್ಷಗಾನ ಮೇಕಪ್ ಮಾಡುವುದನ್ನು ನೋಡಿದರೆ ಯುವಕರು ನಾಚಿ ನೀರಾಗಬೇಕು. ವಯೋ ಸಹಜ ಖಾಯಿಲೆಗಳು ಇವರನ್ನು ಕಾಡುತ್ತಿದ್ದರೂ ಅದಾವುದಕ್ಕೂ ಜಗ್ಗದೆ ಈಗಲೂ ಇಡೀ ದಿನ ತಮ್ಮ ಅಂಗಡಿಯಲ್ಲಿ ಕುಳಿತುಕೊಂಡಿರುತ್ತಾರೆ. ಇನ್ನಾದರೂ ಇದನ್ನೆಲ್ಲಾ ಬಿಟ್ಟು ಆರಾಮವಾಗಿರಬಾರದೇ? ಎಂದು ಕೇಳಿದಾಗ ನನಗೆ ನನ್ನ ಅಂಗಡಿಯಲ್ಲಿ ಬಂದು ಕುಳಿತರೆ ಏನೋ ಒಂದು ಹಿತ, ಮಾನಸಿಕ ನೆಮ್ಮದಿ ಸಿಗುತ್ತದೆ. ನಾನು ಇಷ್ಟು ಲವಲವಿಕೆಯಿಂದ ಇರಲು ನನ್ನ ವೃತ್ತಿಯೇ ಕಾರಣ ಎಂದು ಉಲ್ಲಾಸದಿಂದ ನುಡಿಯುತ್ತಾರೆ.

ನಿಮ್ಮ ಪ್ರಯತ್ನವಿಲ್ಲದೆ ನೀವು ಯಶಸ್ವಿಗಳಾಗಲು ಸಾಧ್ಯವಿಲ್ಲ. ನಿಮ್ಮ ಸಂಪೂರ್ಣ ಪ್ರಯತ್ನ ನಿಮ್ಮ ಕೆಲಸದಲ್ಲಿದ್ದರೆ ನೀವು ವಿಫಲರಾಗಲು ಸಾಧ್ಯವಿಲ್ಲ ಎಂಬ ಮಾತಿಗೆ ಪೂರಕವಾಗಿ ಸಾಧನೆಯ ಹಾದಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿ ನಮಗೆಲ್ಲ ಮಾದರಿಯಾಗಿರುವ ಇವರ ಬದುಕು ಹಸನಾಗಲಿ ಎಂಬ ಶುಭ ಹಾರೈಕೆ.

ಲೇಖಕಿ: ನಾಗರತ್ನ ಜಿ
ಯಕ್ಷಗಾನ ಕಲಾವಿದೆ ,ಶಿಕ್ಷಕಿ

Leave a Reply

Your email address will not be published. Required fields are marked *

error: Content is protected !!