ನಾಗಾರಾಧನೆ: ಪುರಾತನವಾದರೂ , ಬಲಗುಂದದ ಆರಾಧನೆ

ಬರಹ : ಕೆ.ಎಲ್ . ಕುಂಡಂತಾಯ

ನಿಸರ್ಗದ ರಮ್ಯಾದ್ಭುತ , ಅಷ್ಟೇ ಭಯ ಆತಂಕಕಾರಿ ಪರಿತಾಪ ಮತ್ತು ಸುಪ್ರಸನ್ನ‌ ಪರಿಣಾಮಗಳನ್ನು‌ ಗಮನಿಸುತ್ತಾ‌ ಬದುಕುಕಟ್ಟಿದ‌ ಮಾನವ ಪ್ರಕೃತಿಯೊಂದಿಗೆ ಪ್ರಕೃತಿ ಜನ್ಯ ಪ್ರತ್ಯಕ್ಚ – ಪರೋಕ್ಷ ಚೈತನ್ಯಗಳನ್ನು ಭಯದಿಂದ ಒಪ್ಪಿದರು . ಉಪಕೃತರಾದಾಗ ಪ್ರೀತಿಯಿಂದ ಸ್ವೀಕರಿಸಿದರು . ಇಲ್ಲಿ ವಿನೀತ ಭಾವದೊಂದಿಗೆ ಪ್ರಾಮಾಣಿಕ ಒಪ್ಪಂದಗಳಿವೆ . ಪ್ರಕೃತಿಯೊಂದಿಗೆ ಹೊಂದಿಕೊಂಡು ಬಾಳಿದ ಮನುಕುಲದ ಇತಿಹಾಸವಿದೆ . ಇಂತಹ ಪರಿಗ್ರಹಣ , ನಂಬಿಕೆ , ಆರಾಧನೆಗಳಲ್ಲಿ ನಾಗಾರಾಧನೆ ಪುರಾತನವಾದುದು . ಕರಾವಳಿ ಕರ್ನಾಟಕದ ಆರಾಧನಾ ಮಾರ್ಗದ ಚರಿತ್ರೆಯಲ್ಲಿ ನಾಗಲೋಕಪ್ರಿಯ ಆದಿಮೂಲ ಆರಾಧ್ಯ ದೈವ . ಈ ಸರ್ಪಪೂಜೆಯನ್ನು ಸ್ಥಳೀಯವಾಗಿ ಮತಾಚಾರವೆಂದು ತಿಳಿಯಬಹುದು . ಒಂದೆಡೆ ನೆಲೆಯೂರಿ ಜೀವನ ಆರಂಭಿಸುವ ವೇಳೆ ಎದುರಾದ ಭಯದ ಕಾರಣದಿಂದ ಎಲ್ಲೆಡೆ ಸಹಜವಾಗಿ ಮೊದಲಾಯಿತು ನಾಗಾರಾಧನೆ.


ನಾಗ ಉಪಾಸನೆ ನಂಬಿಕೆ – ಭಯದ ಮೂಲದಿಂದ ಹುಟ್ಟಿರಬಹುದಾದರೂ ನಾಗ – ಮಾನವ ಸಂಬಂಧ ಗಾಢವಾದುದು . ಇಲ್ಲಿ ಮೂಲ ಸ್ಪುಟವಾಗುತ್ತದೆ . ಮೂಲದನಾಗ ಎಂಬ ಪಾರಂಪರಿಕ ಮಾತಿದೆ . ಇಂತಹ ಕೆಲವು ನಡವಳಿಕೆಗಳು ಮಾನವ – ನಾಗ ಬಂಧುತ್ವವನ್ನು ದೃಢಗೊಳಿಸುತ್ತವೆ . ಎಲ್ಲಿಯವರೆಗೆ ಅವಿಭಾಜ್ಯವಾಗುತ್ತದೆ ಎಂದರೆ ಪೈತೃಕದ ಸಂಬಂಧವನ್ನು ಸ್ಥಾಪಿಸಿದೆ .ಮೂಲದವ ಮಾತ್ರವಲ್ಲ ಪೂರ್ವಜನೆಂದೂ ಸ್ಪಷ್ಟೀಕರಿಸಿ ಬಿಡುತ್ತದೆ .ಆದುದರಿಂದಲೇ ನಾಗ ಕಳೇವರ ಕಂಡಾಗ ಸಂಸ್ಕಾರಕ್ಕೆ ಮನಮಾಡುತ್ತೇವೆ .ಇಂತಹ ವಿಶಿಷ್ಟ ಅನುಸಂಧಾನವಿರುವ ಭಾವ ಪ್ರಧಾನವಾದ ಆರಾಧನಾ ವಿಧಾನ ನಾಗಾರಾಧನೆಯಲ್ಲಿ ಮಾತ್ರ ನಿಚ್ಚಳವಾಗುವುದು .ಇದು ಕರಾವಳಿಯಲ್ಲಿ ಮಾತ್ರ .ಬೇರೆಲ್ಲೆಡೆ ನಾಗ ಪೂಜಾರ್ಹನಾದರೂ “ದಿಟದ ನಾಗನ ಕಂಡರೆ …

” .ಆದುದರಿಂದ ಕರೆನಾಡಿನ ನಾಗ ನಂಬಿಕೆ , ಆರಾಧನಾ ಕ್ರಮಗಳ ರೂಪಾಂತರ , ಸ್ಥಿತ್ಯಂತರ ಎಷ್ಟು ಪ್ರಶಸ್ತ ಗೊತ್ತಿಲ್ಲ .
ತುಳುವರು ಹರಿದಾಡುವ ಉರಗಗಳನ್ನೆಲ್ಲ ಒಪ್ಪಲೇ ಇಲ್ಲ ನಾಗ ಸಂತತಿಯನ್ನು ಮಾತ್ರ “ಎಡ್ಡೆಂದಿನವು” ಎಂದು ಕರೆದರು . ಇದು ನಾಗ ಬಾಂಧವ್ಯದ , ಆರಾಧನಾ ಚಿಂತನೆಯ ವೈಶಿಷ್ಟ್ಯತೆ . ಕರಾವಳಿಯ ಮಂದಿಗೆ ನಾಗ ಪೂಜೆಯಲ್ಲಿ ಅವರ್ಣನೀಯ ಆನಂದವಿದೆ , ಕೃತಾರ್ಥತೆ ಇದೆ . “ಮೂಲ”ದೊಂದಿಗೆ ತಳಕುಹಾಕಿಕೊಳ್ಳುವ ಸ್ಪಂದನೆ ಇದೆ .
ಸರ್ವತ್ರ ನಾಗ ಆರಾಧನೆಗೆ ಪರ್ವದಿನವಾಗಿ ಶ್ರಾವಣ ಮಾಸದ ಶುದ್ಧ ಪಂಚಮಿಯನ್ನು ಒಪ್ಪಲಾಗಿದೆ .ಆದರೆ ಲೇಖಕ ಹದಿನೈದು ವರ್ಷಗಳಿಂದ ಕರೆನಾಡಿನಲ್ಲಿ ನಡೆಸಿದ ಕ್ಷೇತ್ರಕಾರ್ಯದಲ್ಲಿ ಗಮನಿಸಿದಂತೆ ನಾಗಪಂಚಮಿ ಪರ್ವದಿನವಾಗಿಲ್ಲದ ಹತ್ತಾರು ಬನಗಳನ್ನು ಗುರುತಿಸಲಾಗಿದೆ .ಇವು ಕರೆನಾಡಿನ ನಾಗಾರಾಧನೆಯ ಮೂಲ ಸ್ವರೂಪ ಹಾಗೂ ಆಶಯವನ್ನು ಹೊಂದಿದಂತೆ ಇವೆ .ಸಮೂಹ ಪೂಜೆಯ ಪುರಾತನ ಚಿಂತನೆಯನ್ನು ಈ ಬನಗಳಲ್ಲಿ ಕಾಣಬಹುದು . ಇವುಗಳಲ್ಲಿ ಪೂಜೆ ನೆರವೇರಿಸುವವರು ಇಲ್ಲಿಯ ಮೂಲನಿವಾಸಿಗಳೆನ್ನುವ ಜನವರ್ಗದವರು ( ಕರೆನಾಡಿಗೆ ಬಂದವರೆಲ್ಲರೂ ವಲಸಿಗರೆ , ಆದರೆ ಮೊದಲ ದಿನಗಳಲ್ಲಿ ಬಂದವರನ್ನು ಮೂಲದವರು ಎನ್ನುವುದು , ವಲಸೆ ಹಂತ ಹಂತವಾಗಿ ನಡೆದಿದೆ ).

ಆದರೆ ವೈದಿಕವು ಕರೆನಾಡಿಗೆ ಬಂದಮೇಲೆ( ಒಬ್ಬ ಜಾನಪದ ವಿದ್ವಾಂಸರು ಹೇಳುವಂತೆ ಎರಡೂವರೆ ಸಾವಿರ ವರ್ಷ , ಇನ್ನೊಬ್ಬರು ಅಭಿಪ್ರಾಯ ಪಡುವಂತೆ ಒಂದು ಸಾವಿರದ ಎಂಟುನೂರು ವರ್ಷ ಹಿಂದೆ) ನಾಗರಪಂಚಮಿ ನಮ್ಮಲ್ಲಿ ನಾಗಾರಾಧನೆಯ ಪರ್ವ ದಿನವಾದುದು ಸ್ಪಷ್ಟ . ನಮ್ಮಲ್ಲಿ ಚಾಲ್ತಿಯಲ್ಲಿರುವುದು ಬೇಶದ ತನು – ತಂಬಿಲ . ಅಲ್ಲದೆ ಮೂಲತಾನಕ್ಕೆ ನಾಗ ,ದೈವಗಳಿಗೆ ನಡೆದುಕೊಳ್ಳಲು ಹೋಗುವ ದಿನಗಳಲ್ಲಿ ನಾಗ ಮತ್ತು ದೈವಗಳಿಗೆ ತನು ,ತಂಬಿಲ ಸಮರ್ಪಿಸುವುದು ಸಂಪ್ರದಾಯ .ಲೇಖಕ ಗುರುತಿಸಿ ಪತ್ರಿಕೆಗಳಲ್ಲಿ ಲೇಖನ – ವರದಿ ಬರೆದಂತೆ ಮೇಷ ಸಂಕ್ರಮಣದಂದು ಈ ನಾಗಬನ ಅಥವಾ ಮೂಲ ಸ್ಥಾನಗಳಲ್ಲಿ ನಾಗ ಪೂಜೆ ನೆರವೇರುತ್ತವೆ . ಒಂದೊಂದು ಬನವೂ ಒಂದೊಂದು ಕುಟುಂಬ – ಸಂಸಾರಕ್ಕೆ ಸೇರಿದ್ದಾಗಿರುತ್ತದೆ . ಹತ್ತು ವರ್ಷಗಳಲ್ಲಿ ಈ ಬನಗಳ ಸಂಖ್ಯೆ ಕಡಿಮೆಯಾಗುತ್ತಿವೆ , ವೈದಿಕೀಕರಣಗೊಳ್ಳತ್ತಿವೆ . ಅಂದರೆ ನಮ್ಮ ಮೂಲದ ನಾಗನ ಮೂಲ ಆರಾಧನಾ ಸ್ವರೂಪ ಮರೆಯಾಗುತ್ತಿವೆ .

ನಾಗರ ಪಂಚಮಿಯನ್ನು ನಾವು ಸ್ವೀಕರಿಸಿದ ಕ್ರಮದಲ್ಲಿ ಜನಪದ – ಶಿಷ್ಟ ಸಂಸ್ಕೃತಿಗಳ ಸುಗಮ ಸಮಾಗಮವಾದಂತೆ ಕಾಣುತ್ತದೆಯೇ ಹೊರತು ವೈದಿಕದ ಅಭಿಯೋಗವಾದಂತೆ ಅನ್ನಿಸುವುದಿಲ್ಲ . ಆಟಿ – ಕರ್ಕಾಟಕ ಮಾಸದಲ್ಲಿ ಒದಗಿಬರುವ ಅಮಾವಾಸ್ಯೆಯಂದು ಬನಗಳಲ್ಲಿ‌ ಹೆಚ್ಚುವರಿ ಗೆಲ್ಲು , ಬೀಳಲು , ಅಪಾಯಕಾರಿ ಮರಗಳ ಗೆಲ್ಲುಗಳನ್ನು ಮಾತ್ರ ಕಡಿಯುವ ಸಂಪ್ರದಾಯ . ಮುಂದೆ ಐದನೇ ದಿನಕ್ಕೆ ಶ್ರಾವಣದ ಶುದ್ಧ ಪಂಚಮಿ ” ನಾಗರ ಪಂಚಮಿ” . ಈ ಆಚರಣೆಯಲ್ಲಿ ಸಂಸ್ಕೃತಿಗಳ ಸುಗಮ ಹಾಗೂ ಪರಸ್ಪರ ಒಪ್ಪಿತವಾದ ಹೊಕ್ಕುಬಳಕೆ ನಿಚ್ಚಳ.

ನಾಡಿಗೆ ದೊಡ್ಡ ಹಬ್ಬ: ವರ್ಷದ ಸಂಭ್ರಮಗಳೆಲ್ಲ ತೆರೆದುಕೊಳ್ಳುವ ಪ್ರಾರಂಭದ ಹಬ್ಬ . ಆದುದರಿಂದ ತುಳುನಾಡಿನಲ್ಲೂ ಆಚರಣೆ ಪ್ರಶಸ್ತವೇ .ಆಗಮಿಸಿದವುಗಳಲ್ಲಿ ಹಲವು ವಿಚಾರಧಾರೆಗಳು ಒಪ್ಪಿತವಾಗಿವೆ , ಕೆಲವು ತಿರಸ್ಕರಿಸಲ್ಪಟ್ಟಿವೆ . ಅದರಲ್ಲಿ ನಾಗರಪಂಚಮಿ ಒಪ್ಪಿತವಾದುದು .ಏಕೆಂದರೆ ನಾಗ ಲೋಕಪ್ರಿಯ , ಮಾನವನಿಂದ ಮೊತ್ತಮೊದಲು ದೈವತ್ವಕ್ಕೆ ಏರಿದವ . ತನು – ತಂಬಿಲದಂತಹ ಪುರಾತನ ಕ್ರಮವನ್ನು ನಾವು ಬಿಟ್ಟವರಲ್ಲ . ನಾಗರಪಂಚಮಿಗೂ ನಮ್ಮ ಆರಾಧನೆ ತನು – ತಂಬಿಲವೇ . ಇಷ್ಟಕ್ಕೆ ನಮ್ಮ ಶ್ರದ್ಧೆ . ನಮ್ಮ ಭರವಸೆ ಮತ್ತು ವಿಶ್ವಾಸಗಳ ಮೂರ್ತ ಸ್ವರೂಪವಾದ ನಂಬಿಕೆಯೇ ನಾಗ ಉಪಾಸನೆಯ ಮೂಲ .
ನಾಗ ಸಂತಾನ , ಸಂಪತ್ತು , ಕೃಷಿ ಸಮೃದ್ಧಿ ಅನುಗ್ರಹಿಸುವ ದೇವರು . ಹಾಗೆಯೇ ಚರ್ಮವ್ಯಾಧಿಗಳನ್ನು ನಿವಾರಿಸುವ ದೈವ .

ಬನ ಎಂದರೇನು..? : ಬನ ಎಂದರೆ ನಾಗಬನ , ನಾಗ ಪ್ರತೀಕಗಳಿರುವ ನಾಗ ಪೂಜಾಸ್ಥಾನ ,ನಮ್ಮ ಮೂಲಸ್ಥಾನ . “ನಾಗನ್ ಜರಿಪಾದ್ ಮೂಲ ತೆರಿಯೊಡು ” ಎಂಬ ಮಾತಿನಂತೆ ನಾಗ ಇರುವ ನೆಲೆಯ ಪಕ್ಕವೇ ನಮ್ಮ ಮೂಲ ಇದ್ದು , ಕಾಲಾಂತರದಲ್ಲಿ ವಲಸೆ ಕಾರಣವಾಗುತ್ತಾ ನಮ್ಮ ವಾಸ್ತವ್ಯ ಬದಲಾಗಿದ್ದಿರ ಬೇಕು . ನಾಗನ ನೆಲೆ ಎಂಬಷ್ಟಕ್ಕೆ ನಾಗಬನದ ನಿರೂಪಣೆ ನಿಲ್ಲುವುದಿಲ್ಲ ‌. ಮಾನವ ದೌರ್ಜನ್ಯಕ್ಕೊಳಗಾಗದ ನಾಗಬನ ಒಂದರಲ್ಲಿ ಕನಿಷ್ಠ 60-70 ವೃಕ್ಷ ಪ್ರಭೇದಗಳು , 20-30 ಔಷದೀಯ ಸಸ್ಯ – ಮರ – ಗಿಡ – ಬಳ್ಳಿಗಳು ಇರುತ್ತವೆ . ಬಹುಸಂಖ್ಯೆಯ ಪಕ್ಷಿಗಳು ವಾಸಿಸುವ , ಪ್ರಾಣಿಗಳಿಗೆ ಆಶ್ರಯ ಸ್ಥಾನ ಬನಗಳು, ಎನ್ನುತ್ತಾರೆ ಸಂಶೋಧಕರು . ‌ಇದನ್ನು ಅಧ್ಯಯನಕ್ಕೆ ಬೇಕಾಗಿ ಲೇಖಕನೂ ಕ್ಷೇತ್ರಕಾರ್ಯದಲ್ಲಿ ಗಮನಿಸಿದ್ದಿದೆ .
ನಾಗ ತಂಪನ್ನು ಆಶ್ರಯಿಸಿ ,ತಂಪನ್ನು ಬಯಸುವ ಪ್ರಾಣಿ ಬಳಿಕ ನಮಗೆ ಪ್ರತ್ಯಕ್ಷ ದೇವರು .ಆದುದರಿಂದ ನಾಗಬನಗಳನ್ನು ಉಳಿಸುವ , ಪುರಾತನ ಮರಗಳನ್ನು ಕಡಿಯದೆ ನಾಗಬನ ಜೀರ್ಣೋದ್ಧಾರ ಮಾಡೋಣ .ಇತ್ತೀಚೆಗೆ ಬನಗಳ ಮೇಲಿನ ದಾಳಿ ಸ್ವಲ್ಪ ಕಡಿಮೆಯಾದಂತಿದೆ .

ಬನ ಪುನಾರಚಿಸೋಣ: ನಾಗ ಬನಗಳು ನಾಶವಾಗುತ್ತಿವೆ . ಇದಕ್ಕೆ ಕಾರಣಗಳು ಹಲವು . ಆದರೆ ನಾಗಬನಗಳ ಪುನಾರಚನೆ ಈ ಕಾಲಘಟ್ಟದ ಅನಿವಾರ್ಯತೆ . ನಾಗನ ವಾಸಸ್ಥಾನವನ್ನು ಪುನಾರಚಿಸುವುದರಿಂದ ನಾಗ ಮಾತ್ರ ತೃಪ್ತಿಪಡುವುದಲ್ಲ ಆ ಮೂಲಕ ಪರಿಸರ ನಾಶವಾಗದೆ ವೃದ್ಧಿಯಾಗುತ್ತದೆ . ಮನುಕುಲಕ್ಕೆ , ಪಕ್ಷಿಸಂಕುಲಕ್ಕೆ ಶ್ರೇಯಸ್ಸಾಗುತ್ತದೆ . ಸ್ವಚ್ಛಗಾಳಿ ಲಭಿಸುತ್ತದೆ , ಅಂತರ್ಜಲ ಹೆಚ್ಚುತ್ತದೆ . ಅದಕ್ಕಾಗಿ ನಾಗರ ಪಂಚಮಿಯಂದು ಮೂಲದ ನಾಗನ ದರ್ಶನಕ್ಕೆ ಹಾಲು ,ಸೀಯಾಳ , ಹಣ್ಣುಕಾಯಿಗಳೊಂದಿಗೆ ಹೋಗುವಾಗ ಒಂದು ಗಿಡ ಕೊಂಡೊಯ್ಯುವ , ಆ ಮೂಲಕ ನಾಶವಾಗದಿದ್ದರೆ ಬನ ವೃದ್ಧಿಯಾಗಲಿ ,ನಾಶಗೊಂಡು ನಾಗವೇದಿಕೆ , ನಾಗಗುಡಿ , ನಾಗಮಂದಿರವಾಗಿದ್ದರೆ ಅದರ ಸುತ್ತಲೂ ಗಿಡ ನೆಡುವ ಕಾರ್ಯ ಮಾಡೋಣ ಬನದ ( ವನ) ಪುನಾರಚನೆಗೆ ಗಿಡ ನೆಡುವ .ಇದು ಖಂಡಿತ ನಾಗ ಪ್ರೀತ್ಯರ್ಥವಾಗಿಯೇ ಆಗಿರುತ್ತದೆ . ಇದಕ್ಕೆ ಜ್ಯೋತಿಷ್ಯದ ನಿರ್ದೇಶನ ಬೇಕಾ ಇದು ಪ್ರತ್ಯಕ್ಷ ಸತ್ಯ ತಾನೆ? .

ಬರಹ : ಕೆ.ಎಲ್ . ಕುಂಡಂತಾಯ

Leave a Reply

Your email address will not be published. Required fields are marked *

error: Content is protected !!