ಬಲ್ಲಿರೇನಯ್ಯ ಇವರ ? ಯಕ್ಷರಂಗದಲ್ಲಿ ಮಿಂಚುತ್ತಿರುವ ಸಮನ್ವಯಾಧಿಕಾರಿ ಅಬ್ದುಲ್ ರವೂಫ್
ಲೇಖಕಿ : ನಾಗರತ್ನ ಜಿ ಹೇರ್ಳೆ
ವಿವಿಧತೆಯಲ್ಲಿ ಏಕತೆಯನ್ನು ಸಾರಿದ ನಾಡು, ಕಲೆ ಸಂಸ್ಕೃತಿಗಳ ನೆಲೆಬೀಡು ಭಾರತ. ತನ್ನ ಧರ್ಮವನ್ನು ಪ್ರೀತಿಸುತ್ತಾ ಅನ್ಯ ಧರ್ಮವನ್ನು ಗೌರವಿಸುತ್ತಾ ಬಾಳಿ ಬದುಕುವುದೇ ಇಲ್ಲಿನ ಜನರ ವಿಶೇಷತೆ. ಹಾಗಾಗಿ ಇಲ್ಲಿನ ಕಲೆ, ಸಂಸ್ಕೃತಿಗಳು ಜಾತಿ, ಮತ, ಪಂಥಗಳ ಎಲ್ಲೆಯನ್ನು ಮೀರಿ ಬೆಳೆಯಿತು. ಅವುಗಳಲ್ಲೊಂದು ಯಕ್ಷಗಾನ. ಯಕ್ಷಗಾನ ವಿಶ್ವಗಾನವಾದಾಗ ಇದರಿಂದ ಪ್ರೇರಣೆಗೊಂಡ ವಿದೇಶಿಯರು ಭಾರತಕ್ಕೆ ಬಂದು ಯಕ್ಷಗಾನವನ್ನು ಕಲಿತುಕೊಂಡು ಅದರ ಕಂಪನ್ನು ತಮ್ಮ ನಾಡಿನಲ್ಲಿ ಹರಡಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಹಾಗಿರುವಾಗ ಯಕ್ಷಗಾನದ ತವರೂರಾದ ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರನ್ನು ಇದು ಆಕರ್ಷಿಸದೆ ಇರಲು ಸಾಧ್ಯವುಂಟೇ? ಹೀಗೆ ಯಕ್ಷಗಾನದ ಚಂಡೆ ಸದ್ದಿನಿಂದ ಪ್ರೇರಿತರಾಗಿ ತಾನೂ ಒಬ್ಬ ಯಕ್ಷಗಾನ ಕಲಾವಿದ ಆಗಬೇಕು ಎಂಬ ಉತ್ಕಟ ಬಯಕೆಯಿಂದ ಮನೆಯವರಿಗೆ ಹೇಳದೆಯೇ ಬಾಲ್ಯದಲ್ಲಿ ಉಡುಪಿಯ ಯಕ್ಷಗಾನ ಕೇಂದ್ರ ಸೇರಿದ ವ್ಯಕ್ತಿಯೊಬ್ಬನ ಜೀವನ ಪಯಣದ ಯಶೋಗಾಥೆಯಿದು. ಅವರೇ ಬಡತನದ ಬೇಗೆಯಲ್ಲಿ ಅರಳಿದ ಕುಸುಮ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ, ಇದೀಗ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರ ಸಮನ್ವಯಾಧಿಕಾರಿ ಅಬ್ದುಲ್ ರವೂಫ್.
ಇವರು ಅಹಮದ್ ಸಾಹೇಬ್ ಮತ್ತು ಸೈಬಿನ್ ಅವರ ಮಗನಾಗಿ ಉಡುಪಿ ಜಿಲ್ಲೆಯ ಕೆಮ್ಮಣ್ಣು ಎಂಬಲ್ಲಿ 1977 ರ ಎ.16 ರಂದು ಜನಿಸಿದರು. ತನ್ನ ಐದನೆಯ ವಯಸ್ಸಿಗೇ ತಂದೆಯನ್ನು ಕಳೆದುಕೊಂಡಾಗ ತಂದೆಯ ಅನುಪಸ್ಥಿತಿಯ ಕೊರತೆಯೇ ಕಾಡದಂತೆ ಬೆಳೆಸಿದವರು ಸೋದರತ್ತೆ ಹಾಗೂ ತಾಯಿ. ತಂದೆಯ ಮರಣಾನಂತರ ತಾಯಿ ತನ್ನ ಕುಟುಂಬದವರೊಂದಿಗೆ ಶಿರೂರಿಗೆ ಹೋಗಿ ನೆಲೆಸಿದರೂ ಇವರು ಮಾತ್ರ ಸೋದರತ್ತೆಯ ಮನೆಯಲ್ಲಿದ್ದು ಅವರ ಆಶ್ರಯದಲ್ಲಿ ಬೆಳೆದರು. ಇವರು ಹಿಂದೂ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಣ್ಣು ಇಲ್ಲಿ 5 ನೇ ತರಗತಿ ತನಕ ವಿದ್ಯಾಭ್ಯಾಸ ಮಾಡಿದರು. 6 ನೇ ತರಗತಿಗೆ ಯು.ಬಿ.ಎಂ.ಸಿ ಶಾಲೆ ಕುಂದಾಪುರ ಇಲ್ಲಿ ಸೇರಿದರೂ ಅನಿವಾರ್ಯ ಕಾರಣದಿಂದ ಕೆಲ ಕಾಲದವರೆಗೆ ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ನಂತರ ಶಿರೂರಿಗೆ ಹೋಗಿ ತಾಯಿಯೊಂದಿಗೆ ನೆಲೆಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಡವಿನಕೋಣೆಯಲ್ಲಿ 6 ಮತ್ತು 7ನೇ ತರಗತಿಯನ್ನು ಮುಗಿಸಿದರು. ಸರಕಾರಿ ಪ್ರೌಢಶಾಲೆ ಶಿರೂರು ಇಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ, ಸರಕಾರಿ ಪದವಿಪೂರ್ವ ಜೂನಿಯರ್ ಕಾಲೇಜು ಬೈಂದೂರು ಇಲ್ಲಿ ಪದವಿಪೂರ್ವ ಶಿಕ್ಷಣ ಹಾಗೂ ಗುರು ಸುಧೀಂದ್ರ ಕಾಲೇಜು ಭಟ್ಕಳ, ಇಲ್ಲಿ ಪದವಿ ಶಿಕ್ಷಣವನ್ನು ಉತ್ತಮ ಅಂಕಗಳೊಂದಿಗೆ ಮುಗಿಸಿದರು. ಪದವಿಯ ನಂತರ ಅದೇ ಮೊದಲ ಬಾರಿಗೆ ನಡೆಸಲಾದ ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅದರಲ್ಲಿ ಆಯ್ಕೆಯಾದರು. ನಂತರ ಉಡುಪಿ ಹಾಗೂ ಬೆಂಗಳೂರಿನಲ್ಲಿ ಒಂದು ವರ್ಷ ತರಬೇತಿ ಪಡೆದುಕೊಂಡು ಹಿರಿಯಡ್ಕ ಪೆÇೀಲಿಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾದರು. ಅಲ್ಲಿ 6 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಗಂಗೊಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಅಲ್ಲಿ 3 ವರ್ಷಗಳ ಕಾಲ ನಿಷ್ಠೆಯಿಂದ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡರು.
ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಇಲಾಖೆಯ ಅನುಮತಿ ಪಡೆದು ಉಡುಪಿಯ ಟಿ.ಎಂ.ಎ ಪೈ ಕಾಲೇಜಿನಲ್ಲಿ ಬಿ.ಎಡ್ ಶಿಕ್ಷಣವನ್ನು ಪಡೆದು ಮತ್ತೆ ಪೊಲೀಸ್ ಕೆಲಸಕ್ಕೆ ಮರಳಿದರು. ನಂತರ ಕರ್ನಾಟಕ ಲೋಕ ಸೇವಾ ಆಯೋಗ ನಡೆಸುವ ಕೆ.ಇ.ಎಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅದರಲ್ಲಿ ಉತ್ತೀರ್ಣರಾದರು. ಅಲ್ಲದೇ ಕನ್ನಡದಲ್ಲಿ ಎಂ. ಎ ಪದವಿಯನ್ನೂ ಪಡೆದುಕೊಂಡರು. ತದನಂತರ ಪೊಲೀಸ್ ಇಲಾಖೆಯಿಂದ ಶಿಕ್ಷಣ ಇಲಾಖೆಗೆ ಸೇರ್ಪಡೆಗೊಂಡರು. ಪುತ್ತೂರು ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು, ಕಾಣಿಯೂರು ಇಲ್ಲಿ ಉಪಪ್ರಾಂಶುಪಾಲರಾಗಿ 2 ವರ್ಷಗಳ ಕಾಲ ಕೆಲಸ ಮಾಡಿ, ಸರಕಾರಿ ಪ್ರೌಢಶಾಲೆ ಬಿಜೂರು ಇಲ್ಲಿಗೆ ವರ್ಗಾವಣೆಗೊಂಡು 2.5 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಇಲಾಖೆಯಿಂದ ಕ್ಷೇತ್ರ ಸಮನ್ವಯಾಧಿಕಾರಿಗಳ ಹುದ್ದೆಗೆ ನಡೆಸಲಾದ ಪರೀಕ್ಷೆ ಬರೆದು ಅದರಲ್ಲಿ ಉತ್ತೀರ್ಣರಾಗಿ ಕೇತ್ರ ಸಂಪನ್ಮೂಲ ಕೇಂದ್ರ ಬೈಂದೂರು, ಇಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಸೇರ್ಪಡೆಗೊಂಡರು.
ಸಾಂಪ್ರದಾಯಿಕ ಕುಟುಂಬವಾದರೂ ಕೂಡಾ ಇವರ ಅಜ್ಜನಿಗೆ ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಇತ್ತು. ಆಗಿನ ಕಾಲದಲ್ಲಿ ಕೊಕ್ಕರ್ಣೆಯಲ್ಲಿ ನಡೆಯುತ್ತಿರುವ ಮಂದಾರ್ತಿ ಹಾಗೂ ಇತರ ಮೇಳಗಳ ಯಕ್ಷಗಾನವನ್ನು ನೋಡಲು ಹೋಗುತ್ತಿದ್ದರು. ಹೀಗೆ ಅಜ್ಜ ಯಕ್ಷಗಾನ ನೋಡಲು ಹೋಗುವಾಗ ಜೊತೆಗೆ ಚಿಕ್ಕವಳಾಗಿದ್ದ ತನ್ನ ಅಮ್ಮನನ್ನೂ ಕರೆದುಕೊಂಡು ಹೋಗುತ್ತಿದ್ದರು. ಹಾಗಾಗಿಯೇ ತನಗೂ ಯಕ್ಷಗಾನದಲ್ಲಿ ಅವ್ಯಕ್ತ ಒಲವು ಮೂಡಿರಬೇಕು ಎನ್ನುತ್ತಾರೆ. ಅಲ್ಲದೇ ಇವರು ಕೆಮ್ಮಣ್ಣಿನ ಸೋದರತ್ತೆಯ ಮನೆಯಲ್ಲಿ ಕಲಿಯುತ್ತಿರುವಾಗ ಇವರ ಹೊಟೆಲ್ ಎದರು ಚಂಡೆ ಆನಂದರು ಮಕ್ಕಳಿಗಾಗಿ ಯಕ್ಷಗಾನ ತರಗತಿ ನಡೆಸುತ್ತಿದ್ದರು. ಅದರಿಂದ ಆಕರ್ಷಿತರಾಗಿ ಇವರು ಆ ತರಗತಿಗಳನ್ನು ಬಹಳ ಆಸಕ್ತಿಯಿಂದ ನೋಡುತ್ತಿದ್ದರು. ಹೀಗೆ ಯಕ್ಷಗಾನದ ಮೇಲಿನ ಒಲವು ಅತಿಯಾದಾಗ 7 ನೇ ತರಗತಿ ನಂತರ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರಿದರು. ಅಲ್ಲಿ ಆಗ ನೀಲಾವರ ಲಕ್ಷ್ಮೀ ನಾರಾಯಣ ಇವರು ಪ್ರಾಂಶುಪಾಲರಾಗಿದ್ದು, ಬನ್ನಂಜೆ ಸಂಜೀವ ಸುವರ್ಣರು ನೃತ್ಯ ಗುರುವಾಗಿದ್ದರು. ಅವರಲ್ಲಿ ಅಭ್ಯಾಸ ಮಾಡುತ್ತಿರುವಾಗ ಮನೆಯವರು ಬಂದು ಇವರ ಮನವೊಲಿಸಿ ಮತ್ತೆ ವಿದ್ಯಾಭ್ಯಾಸ ಮುಂದುವರೆಸುವಂತೆ ಪ್ರೋತ್ಸಹ ನೀಡಿದರು. ಆಗ ಇವರ ಅದೃಷ್ಟವೋ ಎಂಬಂತೆ ಐರೋಡಿ ಸದಾನಂದ ಹೆಬ್ಬಾರರು ತಮ್ಮ ಕುಟುಂಬದವರೊಂದಿಗೆ ಅಲ್ಲಿಯೇ ನೆಲೆಸಿದ್ದರು. ಅವರ ಮಗ ರಾಜಶೇಖರ ಹೆಬ್ಬಾರ ಹಾಗೂ ಚಿಕ್ಕು ಪೂಜಾರಿಯವರ ಸಹಕಾರದಿಂದ ಇವರು ಮತ್ತೆ ಯಕ್ಷಗಾನ ಕಲಿಯುವಂತಾಯಿತು.
ಅಲ್ಲಿ ಏಳನೆಯ ತರಗತಿಯಲ್ಲಿ ಕಲಿಯುತ್ತಿರುವಾಗ ಅಬ್ದುಲ್ ರವೂಫ್ ಅವರು ಹೇರಂಜಾಲು ಸುಬ್ಬಣ್ಣ ಗಾಣಿಗರ ನಿರ್ದೇಶನದಲ್ಲಿ ಶಿರೂರಿನ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಭಸ್ಮಾಸುರ ಮೋಹಿನಿ ಪ್ರಸಂಗದಲ್ಲಿ ವಿಷ್ಣುವಾಗಿ ಪ್ರಥಮ ಬಾರಿಗೆ ರಂಗವನ್ನೇರಿದರು. ನಂತರ ಬಭ್ರುವಾಹನ ಕಾಳಗದ ಅರ್ಜುನ, ಕುಶ ಲವದ ರಾಮ, ವೀರಮಣಿ ಕಾಳಗದ ವೀರಮಣಿ ಹೀಗೆ ಅನೇಕ ವೇಷಗಳಿಗೆ ಬಣ್ಣ ಹಚ್ಚಿದ್ದಾರೆ. ಇವರದ್ದು ಯಕ್ಷಗಾನ ವೇಷಕ್ಕೆ ಹೇಳಿ ಮಾಡಿಸಿದಂತಹ ದೇಹ, ಹೆಜ್ಜೆಯ ಗತ್ತು, ಮಾತಿನ ಶೈಲಿ ಇವೆಲ್ಲವೂ ಇವರ ವಿಶೇಷತೆ. ಉತ್ತಮವಾದ ಪೌರಾಣಿಕ ಜ್ಞಾನವನ್ನು ಹೊಂದಿರುವ ಇವರು ತನ್ನ ಪ್ರತಿ ಪಾತ್ರಗಳಿಗೂ ಆಳವಾದ ಅಧ್ಯಯನವನ್ನು ನಡೆಸುತ್ತಾರೆ. ಇತ್ತೀಚೆಗೆ ಗುಂಡಬಾಳ ಮೇಳದಲ್ಲಿ ಅತಿಥಿ ಕಲಾವಿದರಾಗಿ ಧರ್ಮಂಗದ ದಿಗ್ವಿಜಯದ ಧರ್ಮಂಗದ ನಾಗಿ ಪಾತ್ರ ಮಾಡಿದ್ದು ಇವರಿಗೆ ಮರೆಯಲಾರದ ಅವಿಸ್ಮರಣೀಯ ಕ್ಷಣ ಎನ್ನುತ್ತಾರೆ ಅವರು. ಆ ಸಂದರ್ಭ ಕಪ್ಪೆಕೆರೆ ಸುಬ್ರಾಯ ಭಾಗವತರಿಂದ ಒಂದಷ್ಟು ಕಲಿಯಲು ಸಹಾಯಕವಾಯಿತು ಎಂದು ವಿನೀತರಾಗಿ ನುಡಿಯುತ್ತಾರೆ. ಮಡಾಮಕ್ಕಿ ಮೇಳ, ಚೋನಮನೆ ಮೇಳ, ಶನೀಶ್ವರ ಮೇಳ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ವೇಷ ತೊಟ್ಟಿರುವ ಇವರು ಟೆಂಟ್ ಮೇಳದಲ್ಲಿ ಒಮ್ಮೆಯಾದರೂ ಗೆಜ್ಜೆ ಕಟ್ಟಬೇಕು ಎನ್ನುವ ಮಹದಾಸೆಯನ್ನು ಹೊಂದಿದ್ದಾರೆ.
ಇತ್ತೀಚೆಗೆ ಇವರ ಮುಂದಾಳತ್ವದಲ್ಲಿ, ವಿಠಲ ಕಾಮತರ ನಿರ್ದೇಶನದಲ್ಲಿ ಬೈಂದೂರು ಶಿಕ್ಷಕರ ಯಕ್ಷಗಾನ ತಂಡವು ಆರಂಭವಾಗಿದ್ದು ವಿವಿಧ ಕಡೆಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಿದೆ. ಗೋರ್ಪಾಡಿ ವಿಠಲ ಪಾಟೀಲ್, ಸತೀಶ ಕೆದ್ಲಾಯ, ಐರೋಡಿ ಮಂಜುನಾಥ ಕುಲಾಲ್, ಪ್ರಸಾದ ಕುಮಾರ್ ಮೊಗೆಬೆಟ್ಟು, ನಗರ ಸುಬ್ರಹ್ಮಣ್ಯ ಆಚಾರ್, ಕೃಷ್ಣಮೂರ್ತಿ ಭಟ್ ಇವರೆಲ್ಲ ರವೂಫರ ಯಕ್ಷಗಾನ ಗುರುಗಳು. ಮೈಸೂರು, ಹಂಪಿ, ಬೆಂಗಳೂರು ಒಳಗೊಂಡಂತೆ ನಾಡಿನ ವಿವಿಧ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿರುತ್ತಾರೆ. ಅಲ್ಲದೇ ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿ ಮಣಿಪಾಲದ ಮೂಳೆ ತಜ್ಞರಾದ ಭಾಸ್ಕರಾನಂದ ಕುಮಾರ್ ಇವರ ಜೊತೆ ಪಾತ್ರ ಮಾಡಿದ ಬಗ್ಗೆ ಇವರಿಗೆ ಹೆಮ್ಮೆಯಿದೆ. ಇವರು ಬಿ.ಎಡ್ ಕಲಿಯುತ್ತಿರುವಾಗ ಸಹಪಾಠಿಯಾದ ಪಿ.ವಿ.ಆನಂದ ಸಾಲಿಗ್ರಾಮ ಇವರ ನಿರ್ದೇಶನ ಮತ್ತು ಭಾಗವತಿಕೆಯಲ್ಲಿ ತಾಳಮದ್ದಲೆಯಲ್ಲಿಯೂ ಪಾತ್ರ ನಿರ್ವಹಿಸಿದ್ದರು.
ಯಕ್ಷಗಾನವಲ್ಲದೆ ಪೊಲೀಸ್ ಕೆಲಸಕ್ಕೆ ಸೇರುವ ಮೊದಲು 6 ತಿಂಗಳುಗಳ ಕಾಲ ಭರತನಾಟ್ಯವನ್ನೂ ಕಲಿತಿದ್ದರು. ಪುಸ್ತಕ ಓದುವುದು, ವಿವಿಧ ಲಲಿತ ಕಲೆಗಳು, ನಾಟಕ, ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡುವುದು ಇವರ ನೆಚ್ಚಿನ ಹವ್ಯಾಸಗಳು. ಸುರಭಿ ಬೈಂದೂರು ಇದರ ಕಲಾವಿದರಾಗಿ ಗುರುತಿಸಿಕೊಂಡ ಇವರು ಒಂದು ಚೂರಿಯ ಕಥೆ, ಕಂಬನಿ, ನಮ್ಮ ನಿಮ್ಮೊಳಗೊಬ್ಬ, ಗೆದ್ದ ಅಳಿಯ ಬಿದ್ದ ಮಾವ, ಅಣ್ಣ ಮುಡಿಸಿದ ಮಲ್ಲಿಗೆ, ಬಸ್ ಹಮಾಲ ಮುಂತಾದ ನಾಟಕಗಳಲ್ಲಿ ಪಾತ್ರ ಮಾಡಿರುತ್ತಾರೆ. ಇವರು ಅಭಿನಯಿಸಿದ ನಾಟಕಗಳು ಆಕಾಶವಾಣಿ ಮಂಗಳೂರು, ಚಂದನವಾಹಿನಿ ಬೆಂಗಳೂರಿನಲ್ಲಿ ಪ್ರಸಾರಗೊಂಡಿರುತ್ತದೆ.
ಇವರ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ ವಿವೇಕಾನಂದ ಯುವ ವೇದಿಕೆ ಶಿರೂರು ಇವರು “ಶಿರೂರ್ದ ಸಿರಿ” ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ. ಹಲವಾರು ಸ್ಥಳೀಯ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.
ಉಮ್ಮೆ ಸಲ್ಮಾ ಇದ್ರೂಸಿಯಾ ಇವರನ್ನು ವರಿಸಿದ ಅಬ್ದುಲ್ ರವೂಫ್ ಅವರು ತಮ್ಮ ದಾಂಪತ್ಯದ ಪ್ರೀತಿಯ ದ್ಯೋತಕವಾಗಿ ನೂರ್ ಮಾಝಿನ್, ಬದಿಉಝ್ ಝಮನ್ಎಂಬ ಮಕ್ಕಳನ್ನು ಪಡೆದಿದ್ದಾರೆ. ಇದೀಗ ನಾವುಂದದಲ್ಲಿ ತಮ್ಮ ಸಂಸಾರದೊಂದಿಗೆ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. ಇವರ ಧರ್ಮಪತ್ನಿಯೂ ಶಿಕ್ಷಕಿಯಾಗಿದ್ದು ತನ್ನ ಪತಿಯ ವೃತ್ತಿ ಹಾಗೂ ಪ್ರವೃತ್ತಿಗೆ ಸದಾ ಬೆಂಬಲವನ್ನು ನೀಡುತ್ತಿದ್ದಾರೆ. ಇವರ ಮಕ್ಕಳಾದ ನೂರ್ ಮಾಝಿನ್ (7 ನೇ ತರಗತಿ), ಬದಿಉಝ್ ಝಮನ್ (3 ನೇ ತರಗತಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವುಂದ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಇವರ ಸರಳ ಜೀವನ ಶೈಲಿಯ ಪ್ರತೀಕ.
ನಡುಮನೆ ಹಣತೆಯ ಬೆಳಕು ಕತ್ತಲೆಯ ಜೊತೆ ಹರಟೆಗಿಳಿದಾಗ ಬದುಕು ಬವಣೆಯಾಗುತ್ತದೆ. ಆ ಬವಣೆಯನ್ನು ಸವಾಲಾಗಿ ಸ್ವೀಕರಿಸಿ ತನ್ನಿಷ್ಟದ ಬದುಕನ್ನು ರೂಪಿಸಿಕೊಂಡು ಭಾವ ಬಣ್ಣಗಳ ಭಾಷೆಯಲ್ಲಿ ಬದುಕ ಹೊತ್ತಗೆಯ ತುಂಬಿಸಿಕೊಳ್ಳುವುದು ಸಾಮಾನ್ಯದ ಮಾತಲ್ಲ. ನೋವು, ನಲಿವಿನ ಹಾದಿಯಲ್ಲಿ ಸಮನ್ವಯ ಸಾಧಿಸಿ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ದಣಿವರಿಯದೆ ದುಡಿದು ಬೆಳಕಾಗಿಸಿಕೊಂಡ ಪರಿಗೆ, ಆ ಸಿಹಿ ಅಚ್ಚರಿಗೆ ಶಿರಬಾಗಿ ನಮಿಸುತ್ತಾ ಅವರು ನಂಬಿದ ಕಲಾಮಾತೆ ಶಾರದೆ ಹಾಗೂ ವಿದ್ಯಾಧಾತೆ ಸರಸ್ವತಿ ಅನುಗ್ರಹಿಸಲಿ ಎಂಬ ಶುಭ ಹಾರೈಕೆ.
ತುಂಬಾ ಚೆನ್ನಾಗಿದೆ. ನನ್ನ ಆತ್ಮೀಯ ಗೆಳೆಯನಾದರೂ ಎಷ್ಟೋ ವಿಚಾರ ನನಗೂ ತಿಳಿದಿರಲಿಲ್ಲ. ರವೂಫ್ ಓರ್ವ ಸ್ನೇಹಜೀವಿ. ಉತ್ತಮ ವ್ಯಕ್ತಿತ್ವದ ಇವರನ್ನು ಪದಗಳಲ್ಲಿ ಕಟ್ಟಿ ಹಾಕಿದ ನಿಮ್ಮ ಲೇಖನಕ್ಕೊಂದು ಸಲಾಮ್.
ನಿಜಕ್ಕೂ ವ್ಯಕ್ತಿಯೊಬ್ಬ ಶಕ್ತಿಯಾಗಬಲ್ಲ..ಕಲೆಗೆ ಕುಲವಿಲ್ಲ ಶ್ರಧ್ಧೆಯಿದ್ದವರಿಗೆ ಕಲಾದೇವಿ ಒಲಿಯುತ್ತಾಳೆ ಎಂಬುದಕ್ಕೆ ರವೂಫ್ ಸರ್ ಸಾಕ್ಷಿ.ಅವರ ಬಗೆಗಿನ ಅಭಿಮಾನ,ಗೌರವ ಮತ್ತಷ್ಟು ಹೆಚ್ಚಾಯಿತು..ಶುಭವಾಗಲಿ
ಪ್ರಾಮಾಣಿಕ ವ್ಯಕ್ತಿತ್ವ ನಿಷ್ಠಾವಂತ ಅಧಿಕಾರಿ,ಸರಳಜೀವಿ, ಸಹಕಾರ ನೀಡುವ ಮನಸ್ಸು ಉಳ್ಳವರು ಶುದ್ಧ ಮಾತುಕತೆ, ಮುಂದೆ ಉನ್ನತ ಹುದ್ದೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ
ನಮ್ಮ ಮನೆಯಲ್ಲಿ ಇದ್ದಾಗ ನನ್ನನ್ನು ಹಾಗೂ ರವೂಫ್ ರನ್ನು ಜೊತೆಯಲ್ಲಿ ಶಾಲೆಗೆ ದಾಖಲು ಮಾಡಲಾಯಿತು…ಸಹೋದರನಾಗಿರುವುದಕ್ಕೆ ನನಗೆ ಹೆಮ್ಮೆ ಯಿದೆ..
ಯಕ್ಷಗಾನವು ಜಾತಿಮತ ಪಂಥಗಳನ್ನು ಮೀರಿ ಬೆಳೆದ ಕಲೆ. ನಾನು ಕಡಿಕೆ-ನಾಡ ದಲ್ಲಿ ಮುಖ್ಯ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ದಿನಗಳಿಂದಲೂ ಶ್ರೀ ರವೂಫ್ ರವರನ್ನು ಬಲ್ಲೆ. ಸರಳಸ್ನೇಹ ಜೀವಿಯಾದ ಅವರ ಕಲಾಭಿಮಾನವು ಅವರನ್ನು ಮತ್ತಷ್ಟು ಉನ್ನತಿಗೇರಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.– ಇತೀ, ಅಶೋಕ್ ಕುಮಾರ್, ನಿವೃತ್ತ ಮುಖ್ಯ ಶಿಕ್ಷಕ.