ಬೊಂಬೆಯಾಟದ ಸೂತ್ರದಾರ, ಆದರ್ಶ ಶಿಕ್ಷಕನ ರಂಗಸ್ಥಳದ ಪಯಣದ ಕಥೆ
ಲೇಖಕಿ: ನಾಗರತ್ನ.ಜಿ.ಹೇರ್ಳೆ
“ದೀಪ ತಾನು ಉರಿಯದೆ ಇನ್ನೊಂದು ದೀಪವನ್ನು ಹೇಗೆ ಬೆಳಗಲಾರದೋ ಹಾಗೆಯೇ ಒಬ್ಬ ಶಿಕ್ಷಕ ತಾನು ಕಲಿಯದೆ ಇನ್ನೊಬ್ಬರಿಗೆ ಕಲಿಸಲಾರ.” ಶಿಕ್ಷಕನೊಬ್ಬ ಪ್ರತಿಭಾವಂತನಾಗಿದ್ದು, ಸೃಜನಶೀಲ ಚಿಂತಕನಾಗಿದ್ದರೆ ವಿದ್ಯಾರ್ಥಿಗಳ ಬಾಳನ್ನು ಬೆಳಗಬಲ್ಲ. ಆ ಮೂಲಕ ಸದೃಢ ಸಮಾಜ ನಿರ್ಮಾಣ ಕಾರ್ಯದಲ್ಲಿ ತನ್ನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬಲ್ಲ. ಅಂತಹ ಶ್ರೇಷ್ಠ ಹಾಗೂ ಆದರ್ಶ ಶಿಕ್ಷಕರ ಸಾಲಿನಲ್ಲಿ ಸೇರಬಲ್ಲವರು ವಿಠ್ಠಲ ಕಾಮತ್. ಮಹಾಬಲ ಕಾಮತ್ ಮತ್ತು ಉಮಾದೇವಿಯವರ ಮಗನಾಗಿ ಇವರು ಆಗಸ್ಟ್ 1, 1964 ರಂದು ಉಪ್ಪಿನಕುದ್ರು ಎಂಬಲ್ಲಿ ಜನಿಸಿದವರು. ತೀರಾ ಚಿಕ್ಕ ಪ್ರಾಯದಲ್ಲಿಯೇ ತಂದೆ ತಾಯಿಯಿಬ್ಬರನ್ನೂ ಕಳೆದುಕೊಂಡು ಇವರು ಹಾಗೂ ತಂಗಿ ವಿಜಯಾ ಕಾಮತ್ ಹೆತ್ತವರ ವಾತ್ಸಲ್ಯದಿಂದ ವಂಚಿತರಾದರು.
ತಮ್ಮ ಪಾಲಿಗಿನ್ನು ಹೆತ್ತವರು ಇಲ್ಲ ಎಂಬ ಕಲ್ಪನೆಯೇ ಇಲ್ಲದ ಕಾಲದಲ್ಲಿ ಇವರ ದೊಡ್ಡಪ್ಪ ದೇವರಂತೆ ಬಂದು ತಮ್ಮನ ಮಕ್ಕಳ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸಿಕೊಂಡರು. ಇವರೇ ಪ್ರಸಿದ್ಧ ಗೊಂಬೆಯಾಟದ ಕಲಾವಿದರಾದ ಕೊಗ್ಗ ಕಾಮತರು. ಇವರು ತನ್ನ ತಮ್ಮನ ಮಕ್ಕಳನ್ನು ತನ್ನ ಮಕ್ಕಳಂತೆಯೇ ಪ್ರೀತಿಸಿ ಉತ್ತಮ ಸಂಸ್ಕಾರ ನೀಡಿದ ಫಲವೇ ನಾವಿಂದು ಕಾಣುತ್ತಿರುವ ವಿಠ್ಠಲ ಕಾಮತ್ ರಂತಹ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಲು ಕಾರಣವಾಯಿತು.
ಇವರು ತಮ್ಮ ಪ್ರಾಥಮಿಕ ಶಿಕ್ಷಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಪ್ಪಿನಕುದ್ರು ಹಾಗೂ ಪ್ರೌಢ ಶಿಕ್ಷಣವನ್ನು ಜನತಾ ಹೈಸ್ಕೂಲ್ ಹೆಮ್ಮಾಡಿ ಇಲ್ಲಿ ಮುಗಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರತಿಭಾವಂತರಾಗಿದ್ದ ಇವರು ಉತ್ತಮ ವಾಲಿಬಾಲ್ ಆಟಗಾರರಾಗಿದ್ದು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಶಾಲೆಯನ್ನು ಪ್ರತಿನಿಧಿಸಿದ್ದರು. ಶಿಕ್ಷಣದ ಜೊತೆ ಜೊತೆಗೆ ತಮ್ಮ ಕುಟುಂದ ಹಿರಿಯರಿಂದ ಬಳುವಳಿಯಾಗಿ ಬಂದ ಯಕ್ಷಗಾನ, ಬೊಂಬೆಯಾಟ, ಸೂತ್ರಧಾರಿಕೆ ಇವೆಲ್ಲವನ್ನೂ ದೊಡ್ಡಪ್ಪ ಶ್ರೀ ಕೊಗ್ಗ ಕಾಮತರಿಂದ ಆಶೀರ್ವಾದ ರೂಪವಾಗಿ ಪಡೆದುಕೊಂಡರು.
ಯಕ್ಷಗಾನ ಗುರುಗಳಾದ ಹಳ್ಳಾಡಿ ಶ್ರೀ ಸುಬ್ರಾಯ ಮಲ್ಯ ಇವರಿಂದ ಭಾಗವತಿಕೆಯನ್ನು ಅಭ್ಯಸಿಸಿದರು. ದೊಡ್ಡಪ್ಪನ ಜೊತೆಗೆ ಗೊಂಬೆಯಾಟದ ಪ್ರದರ್ಶನಕ್ಕಾಗಿ ಗ್ರೀಸ್, ದೆಹಲಿ, ಕಲ್ಕತ್ತಾ, ಕೇರಳ, ತಮಿಳುನಾಡು, ಗುಜರಾತ್, ಮುಂಬೈ ಹೀಗೆ ದೇಶ ವಿದೇಶಗಳಿಗೆ ಹೋಗಿ ನಾಡಿನ ಕೀರ್ತಿಯನ್ನು ಪಸರಿಸುವುದರ ಮೂಲಕ ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂದು ತೋರಿಸಿಕೊಟ್ಟರು.
ತನ್ನ ದೊಡ್ಡಪ್ಪನಿಗೆ ತಾನಿನ್ನು ಹೊರೆಯಾಗಬಾರದು ಎಂಬ ಕಾರಣಕ್ಕೆ ಹತ್ತನೆಯ ತರಗತಿಯ ನಂತರ ತನ್ನ ವಿದ್ಯಾಭ್ಯಾಸವನ್ನು ನಿಲ್ಲಿಸಿ ಕಾಮತ್ ಹಂಚಿನ ಕಾರ್ಖಾನೆಯಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರುವುದರೊಂದಿಗೆ ಸ್ವಾವಲಂಬಿ ಜೀವನದತ್ತ ಹೆಜ್ಜೆ ಹಾಕಿದರು. ದರು. ಅಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿ ತನ್ನ ಕಾಲ ಮೇಲೆ ತಾನು ನಿಂತುಕೊಂಡರು. ನಂತರ ಕುಮುದಾ ಉಮಾಶಂಕರ್ ಶಿಕ್ಷಕರ ತರಬೇತಿ ಕೇಂದ್ರ ಕೊಕ್ಕರ್ಣೆ ಇಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದುಕೊಂಡರು. ಅದೇ ಸಂದರ್ಭದಲ್ಲಿ ಶಿಕ್ಷಕರಿಗೆ ಯಕ್ಷಗಾನ ತರಬೇತಿ ನೀಡಿ ಅವರಿಂದ ಕುಶಲವ ಕಾಳಗ ಎಂಬ ಯಕ್ಷಗಾನವನ್ನು ಮಾಡಿಸಿದ್ದಲ್ಲದೇ ತಾವೇ ಭಾಗವತಿಕೆಯನ್ನು ಮಾಡಿದರು. ಇದು ಇವರ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದು.
1995 ರಲ್ಲಿ ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಗಂಗೊಳ್ಳಿ ಇಲ್ಲಿ ಶಿಕ್ಷಕನಾಗಿ ನೇಮಕಗೊಳ್ಳುವ ಮೂಲಕ ಶಿಕ್ಷಕ ವೃತ್ತಿಯ ಜೀವನಕ್ಕೆ ಮುನ್ನುಡಿ ಬರೆದರು. ನಂತರ ಬೆಳ್ತಂಗಡಿಯ ಮಾಯಾ ಬೆಳಲ್‍ನಲ್ಲಿ 1 ವರ್ಷ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೊಯ್ಯಾಣದಲ್ಲಿ 4 ವರ್ಷ ಕರ್ತವ್ಯ ನಿರ್ವಹಿಸಿ ಅಲ್ಲಿ ಒಂದಷ್ಟು ಸುಧಾರಣೆ ತರುವುದರ ಮೂಲಕ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾವಿನಕಟ್ಟೆ ಇಲ್ಲಿಗೆ ವರ್ಗವಾಗಿ ಬಂದರು. ನಂತರ ನಡೆದದ್ದೆಲ್ಲಾ ಇತಿಹಾಸ.
ಶಿಥಿಲಗೊಂಡು ಹಾವುಗಳ ವಾಸಸ್ಥಾನವಾಗಿದ್ದ ಶಾಲೆಯಲ್ಲಿ ಹೊಸ ಹೊಸ ಪ್ರಯೋಗಗಳ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದರು. ಸ್ಥಳೀಯರು, ಜನಪ್ರತಿನಿಧಿಗಳು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು ಹಾಗೂ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೆಲ್ಲರ ಸಹಕಾರದಿಂದ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಶಾಲೆಯನ್ನು ಉನ್ನತ ದರ್ಜೆಗೇರಿಸಿದರು. ಗಣೇಶೋತ್ಸವ, ಶಾಲಾ ವಾರ್ಷಿಕೋತ್ಸವದಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಾಲಾ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತರಬೇತಿಗೊಳಿಸಿದರು.
ಇದರಿಂದ ಕೇವಲ 24 ಮಕ್ಕಳಿದ್ದಂತಹ ಶಾಲೆಯಲ್ಲಿ 285 ಮಕ್ಕಳು ದಾಖಲಾತಿ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದರು. ಇವರ ಈ ರೀತಿಯ ಕೆಲಸದ ರೀತಿಗೆ ಮಾರುಹೋದ ಶಿಕ್ಷಣ ಇಲಾಖೆ ಇವರ ಮೇಲೆ ಅಪಾರ ನಂಬಿಕೆಯನ್ನು ಇರಿಸಿ ಈಗಾಗಲೇ ಮುಚ್ಚಿ ಹೋಗಿದ್ದಂತಹ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕರ್ಕಿ ಶಾಲೆಯನ್ನು ಪುನರಾರಂಭಿಸಲು ಇವರನ್ನು ಆ ಶಾಲೆಗೆ ಪ್ರತಿ ನಿಯುಕ್ತಿಗೊಳಿಸಿತು.
ಅಲ್ಲಿಯೂ ತನ್ನ ಹೊಸ ಪ್ರಯೋಗವನ್ನು ಮುಂದುವರೆಸಿದ ಇವರು ಅಲ್ಲಿನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು, ಜನಪ್ರತಿನಿಧಿಗಳು, ಪೋಷಕರು, ಸ್ಥಳೀಯರ ಸಹಕಾರದಿಂದ ಶಾಲೆಯನ್ನು ಉನ್ನತ ದರ್ಜೆಗೇರಿಸಿ ಇಲಾಖೆ ತನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡರು. ಆ ಶಾಲೆಯಲ್ಲಿ ದೈನಂದಿನ ಕೆಲಸಕ್ಕೆ ಅತಿ ಅಗತ್ಯವಾದ ನೀರಿನ ವ್ಯವಸ್ಥೆಗಾಗಿ ಸುಮಾರು 3 ಲಕ್ಷ ರೂಪಾಯಿ ವೆಚ್ಚದಲ್ಲಿ ತೆರೆದ ಬಾವಿಯನ್ನು ನಿರ್ಮಿಸುವಲ್ಲಿ ಇವರ ಪಾತ್ರ ಕಡಿಮೆಯೇನಲ್ಲ. ನಂತರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೋಟೆಬಾಗಿಲು ಇಲ್ಲಿಗೆ ವರ್ಗಾವಣೆಗೊಂಡು ಅಲ್ಲಿ ಮತ್ತೆ ತನ್ನ ಕಾರ್ಯಗಳಿಂದ ತನ್ನ ಸಾಮಥ್ರ್ಯವೇನೆಂಬುದನ್ನು ಶ್ರುತಪಡಿಸಿದರು. ಅಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಕಂಪ್ಯೂಟರ್, ಟಿ.ವಿ. ಕುಡಿಯುವ ನೀರಿನ ಘಟಕ, ಹೊಸ ಕಟ್ಟಡ, ಶಾಲಾ ಆವರಣ ಗೋಡೆ ನಿರ್ಮಾಣ, ಶೂ, ಸಮವಸ್ತ್ರ ಹೀಗೆ ಶಾಲೆಗೆ ಅಗತ್ಯವಾದ ಎಲ್ಲವನ್ನೂ ದಾನಿಗಳ ನೆರವಿನಿಂದ ಪಡೆದುಕೊಂಡರು. ಅತ್ಯಂತ ಸಣ್ಣ ಊರಾದ ಕೋಟೆಬಾಗಿಲಿನಲ್ಲಿ 2 ಪ್ರತಿಭಾ ಕಾರಂಜಿ, ಶಾಲಾ ವಾರ್ಷಿಕೋತ್ಸವವನ್ನು ನಡೆಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅಲ್ಲದೇ ಪ್ರತಿಭಾ ಕಾರಂಜಿಯ ಜಿಲ್ಲಾ ಮಟ್ಟದ ಸ್ಪರ್ಧೆಗೆ ಮಕ್ಕಳಿಗೆ ಕೋಲಾಟ ಮತ್ತು ಇನ್ನಿತರ ಜನಪದ ಕಲೆಗೆ ತರಬೇತಿ ನೀಡಿದರು.
ಮೇ 18 1995 ರಂದು ಶಾಂತಿ ಕಾಮತ್ ರನ್ನು ವರಿಸಿದ ಇವರ ಪ್ರೇಮಮಯ ದಾಂಪತ್ಯ ದ್ಯೋತಕವಾಗಿ ಅರಳಿದ ಕುಸುಮಗಳೇ ಸಂಜನಾ ಕಾಮತ್ ಮತ್ತು ವಿಘ್ನೇಶ್ ಕಾಮತ್. ಇವರ ಮಕ್ಕಳು ಇದೀಗ ದೊಡ್ಡವರಾಗಿದ್ದು ಕೆಲಸಕ್ಕೆ ಹೋಗುತ್ತಿದ್ದು ಅಪ್ಪನಂತೆಯೇ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ಇವರ ಧರ್ಮಪತ್ನಿ ಶಾಂತಿ ಕಾಮತರು ಕಾಮತ್ ಹಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಎಳೆವೆಯಲ್ಲಿಯೇ ಯಕ್ಷಗಾನದ ಬಗ್ಗೆ ಅಪಾರ ಒಲವನ್ನು ಹೊಂದಿದ ಇವರು ಪ್ರಥಮ ಬಾರಿಗೆ ತನ್ನೂರಾದ ಉಪ್ಪಿನಕುದ್ರುವಿನಲ್ಲಿ ನಡೆದ ಲವಕುಶ ಕಾಳಗದ ಮಾಯಾಶೂರ್ಪನಖಿ ಪಾತ್ರಕ್ಕೆ ಬಣ್ಣ ಹಚ್ಚಿದ ನಂತರ ಒಬ್ಬ ಸಮರ್ಥ ಯಕ್ಷಗಾನ ವೇಷಧಾರಿಯಾಗಿ ಹಲವು ಕಡೆ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಚಂದ್ರಹಾಸದ ಮದನ, ಬನಶಂಕರಿಯ ಭದ್ರ, ದೇವಿ ಮಹಾತ್ಮೆಯ ದೇವೇಂದ್ರ, ಸುಪಾಶ್ರ್ವ ಮುನಿ ಇವರ ನೆಚ್ಚಿನ ಪಾತ್ರಗಳು. ತರುವಾಯ ಯಕ್ಷಗಾನದ ನಿರ್ದೇಶಕರಾಗಿ ತರಬೇತಿ ನೀಡುತ್ತಾ, ಜೊತೆಯಲ್ಲಿ ಭಾಗವತಿಕೆಯನ್ನೂ ಮಾಡುತ್ತಾ ಮಕ್ಕಳು ಹಾಗೂ ಶಿಕ್ಷಕರು ಜಿಲ್ಲೆಯ ಹಲವಾರು ಕಡೆ ಯಕ್ಷಗಾನ ಪ್ರದರ್ಶನ ನೀಡಲು ಕಾರಣೀಕರ್ತರಾಗಿದ್ದಾರೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಮ್ಮಾಡಿ ಇಲ್ಲಿ ನಡೆದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಇವರೇ ಪದ್ಯ ರಚಿಸಿ, ನಿರ್ದೇಶಿಸಿದ ವರದಿ ವಾಚನವು ಪ್ರಪಂಚದ ನಾನಾ ಕಡೆ ವೈರಲ್ ಆಗಿದ್ದು ಇವರ ಪ್ರತಿಭೆಗೆ ಹಿಡಿದ ಕೈಗನ್ನಡಿ. ಯಕ್ಷಗಾನದ ಜೊತೆಗೆ ನಾಟಕದ ಬಗ್ಗೆಯೂ ಅತಿಯಾದ ಆಸಕ್ತಿಯನ್ನು ಇವರು ಹೊಂದಿದ್ದಾರೆ. ಇವರು ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಗಂಗೊಳ್ಳಿ ಇಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಭರತಾಗಮನ ಎಂಬ ನಾಟಕವನ್ನು ನಿರ್ದೇಶಿಸಿ ನಿಜವಾದ ಪರ್ಣಕುಟೀರವನ್ನು ನಿರ್ಮಿಸಿ ನೂತನ ಪ್ರಯೋಗಕ್ಕೆ ತಮ್ಮನ್ನು ತೆರೆದುಕೊಂಡರು.
ಧನ್ವಂತರಿ ಮಹಿಮೆ ಎನ್ನುವ ಯಕ್ಷಗಾನ ಕೃತಿಯನ್ನು ರಚಿಸಿ ಲೋಕಾರ್ಪಣೆ ಮಾಡಿದ ಕೀರ್ತಿ ಇವರದು. ಜಿ.ಎಸ್.ಬಿ ಸಮಾಜದ ಗುರುಗಳಾದ ಶ್ರೀ ಸುಧೀಂದ್ರ ತೀರ್ಥ ಸ್ವಾಮಿಗಳ ಪುಣ್ಯ ತಿಥಿಯಂದು ಹರಿದ್ವಾರದಲ್ಲಿ ಧನ್ವಂತರಿ ಮಹಿಮೆ ಯಕ್ಷಗಾನವು ಇವರ ಸಮರ್ಥ ನಿರ್ದೇಶನದಲ್ಲಿ ಪ್ರದರ್ಶನಗೊಂಡು ಭರ್ಜರಿ ಜಯಭೇರಿ ಬಾರಿಸಿತು. ಬಳಿಕ ದೆಹಲಿ ಕನ್ನಡ ಸಂಘದಲ್ಲಿಯೂ ಇದೇ ಪ್ರಸಂಗದ ಪ್ರದರ್ಶನ ಏರ್ಪಡಿಸುವಲ್ಲಿ ಪ್ರಮುಖ ಪಾತ್ರ ಇವರದು.
ಹೀಗೆ ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ತಮ್ಮನ್ನು ಶ್ರದ್ಧೆಯಿಂದ ತೊಡಗಿಸಿಕೊಂಡು ಒಂದಾದ ಮೇಲೊಂದು ಉತ್ತಮ ಕೆಲಸವನ್ನು ಮಾಡುತ್ತಾ ಸಾಗಿದರು. ಇವರ ನಿಸ್ವಾರ್ಥ ಕಾರ್ಯವನ್ನು ಗಮನಿಸಿದ ಶಿಕ್ಷಣ ಇಲಾಖೆ 2016 ರಲ್ಲಿ “ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿ ನೀಡಿ ಗೌರವಿಸಿದೆ.
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ, ಉಪ್ಪಿನಕುದ್ರು ಹಾಗೂ ಗಣೇಶ ಯಕ್ಷಗಾನ ಮಂಡಳಿ, ಉಪ್ಪಿನಕುದ್ರು ಎಂಬ ಎರಡು ಸಂಸ್ಥೆಗಳನ್ನು ಸ್ಥಾಪಿಸಿ ಅದರ ಮೂಲಕ ಮಕ್ಕಳು ಹಾಗೂ ದೊಡ್ಡವರಿಗೆ ಯಕ್ಷಗಾನ ತರಬೇತಿ ನೀಡುತ್ತಾ ಪ್ರತಿ ವರ್ಷ ಅವರಿಂದಲೇ ಯಕ್ಷಗಾನ ಪ್ರದರ್ಶನಕ್ಕೂ ಏರ್ಪಾಟು ಮಾಡಿದರು.
ಶ್ರೀ ಕಾಳಿಕಾಂಬಾ ಮಹಿಳಾ ಸಂಘ, ತಲ್ಲೂರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಟೆಬಾಗಿಲು ಹಳೆ ವಿದ್ಯಾರ್ಥಿ ಸಂಘ, ಪರ್ಯಾಯ ಫಲಿಮಾರು ಮಠ, ಉಡುಪಿ, ಕೆ.ಕೆ.ವೈ ಸ್ಟಾರ್, ತಲ್ಲೂರು, ನಂದಿಕೇಶ್ವರ ಯುವಕ ಸಂಘ, ಹೊಯ್ಯಾಣ, ಆಲೂರು, ನಿನಾದ ಸಂಘ ಗಂಗೊಳ್ಳಿ, ರಂಗಸ್ಥಳ ಫೌಂಡೇಶನ್ ಉಳ್ಳೂರು 74, ಬ್ರಹ್ಮಶ್ರೀ ನಾರಾಯಣ ಗುರು ಸಂಘ, ಕುಂದಾಪುರ, ಸರಕಾರಿ ಪದವಿ ಪೂರ್ವ ಕಾಲೇಜು ನೆಂಪು, ವಂಡ್ಸೆ, ಕಮಿಟಿ ಫ್ರೆಂಡ್ಸ್ ಉಪ್ಪಿನಕುದ್ರು ಮುಂತಾದ ಸಂಘ ಸಂಸ್ಥೆಗಳು ಇವರ ಕಾರ್ಯವನ್ನು ಗುರುತಿಸಿ, ಗೌರವಿಸಿ ಸಂಮಾನಿಸಿದೆ.
ಪ್ರಸಿದ್ಧ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರ ಜೊತೆ ಗಾನ, ಕುಂಚ, ನೃತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ತನ್ನ ಅದೃಷ್ಟ ಎಂದು ಸಂತೋಷದಿಂದ ಹೇಳುತ್ತಾರೆ. ಪುಸ್ತಕ ಓದುವುದು, ಕೃಷಿ, ಹೂದೋಟ ಮಾಡುವುದು ಇವರ ವಿಶೇಷ ಆಸಕ್ತಿಗಳು.
ಹೀಗೆ ಯಾವುದೇ ಪ್ರಚಾರವನ್ನು ಬಯಸದೇ ನಿಸ್ವಾರ್ಥವಾಗಿ ಕಲಾಮಾತೆಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡವರು. ತನ್ನ ಬದುಕಿನುದ್ದಕ್ಕೂ ಸಹಾಯ ಸಹಕಾರ ನೀಡಿ ತನ್ನನ್ನು ಇಲ್ಲಿವರೆಗೆ ಕೈಹಿಡಿದು ನಡೆಸಿದ ಪ್ರತಿಯೊಬ್ಬರ ಸಹೃದಯತೆಯ ಬಗ್ಗೆ ವಿಠ್ಠಲ ಕಾಮತರು ಕೃತಜ್ಞತೆಯಿಂದ ನೆನೆಯುತ್ತಾರೆ.
ಅಳಿಲು ಬೀಜವನ್ನು ಸಂಗ್ರಹಿಸತ್ತದೆ, ಮರೆತು ಬಿಡುತ್ತದೆ. ಹೀಗೆ ಸಂಗ್ರಹಿಸಿದ ಬೀಜ ಮೊಳಕೆಯೊಡೆದು ಹೆಮ್ಮರವಾಗಿ ತಂಪನ್ನೀಯುತ್ತದೆ. ಹಾಗೆಯೇ ನಾವು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಮರೆತು ಬಿಡಬೇಕು. ಮತ್ತೆ ಮತ್ತೆ ಒಳ್ಳೆಯ ಕೆಲಸಗಳನ್ನು ಮಾಡುತ್ತಲೇ ಇರಬೇಕು. ಅದೇ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ರಹದಾರಿ. ಅಂತೆಯೇ ಸತ್ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ವಿಠ್ಠಲ ಕಾಮತರಿಂದ ಇನ್ನಷ್ಟು ಇಂತಹ ಉತ್ತಮ ಕೆಲಸಗಳು ಮೂಡಿಬರಲಿ, ಅವರ ಕಾರ್ಯದ ಕಂಪು ನಾಡಿನಾದ್ಯಂತ ಪಸರಿಸಲಿ, ದೇವರು ಅವರಿಗೆ ಆಯುರಾರೋಗ್ಯ ಭಾಗ್ಯ ಕರುಣಿಸಲಿ ಎಂಬ ಶುಭ ಹಾರೈಕೆ.