ಬ್ರಹ್ಮಾವರ :ಭ್ರಷ್ಟಾಚಾರದ ಕೂಪವಾದ ಕೋಡಿ ಪಂಚಾಯತ್ : ಕೋಡಿ ಹಿತರಕ್ಷಣಾ ವೇದಿಕೆ ಆರೋಪ

ಉಡುಪಿ ಜು.7(ಉಡುಪಿ ಟೈಮ್ಸ್ ವರದಿ): : ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯತ್ ನಲ್ಲಿ ಎಗ್ಗಿಲ್ಲದೆ ಅವ್ಯವಹಾರ ನಡೆಯುತ್ತಿದ್ದು ಇದರ ಬಗ್ಗೆ ದೂರು ನೀಡಿದರು ಯಾವುದೇ ಪರಿಣಾಮವಾಗಿಲ್ಲ, ಹಾಗು ಈ ಅವ್ಯವಹಾರಕ್ಕೆ ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್ ಮೂಲ ಕಾರಣ ಎಂದೂ ಕೋಡಿ ಹಿತರಕ್ಷಣಾ ವೇದಿಕೆ ಆರೋಪಿಸಿದೆ.

ಈ ಬಗ್ಗೆ ಉಡುಪಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಉದಯ್ ಕುಂದರ್ ಅವರು , ಕೋಡಿ ಕನ್ಯಾಣ ದಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟ 1,28,597ರೂ. ಮೊತ್ತದ ಅಂಗಡಿ ಕೋಣೆ ನಿರ್ಮಾಣದ ಬಿಲ್ ಮಂಜುರಾತಿ ಆಗಿದೆ ಆದರೆ ಇದುವರೆಗೆ ಅಂಗಡಿ ಕೋಣೆಯ ನಿರ್ಮಾಣ ಆಗಿಲ್ಲ. ಈ ಬಗ್ಗೆ ಕಂಟ್ರಕ್ಟರ್ ಬಳಿ ಕೇಳಿದರೆ ಅಧ್ಯಕ್ಷರ ಬಳಿ ಮಾತನಾಡಿ ಎಂಬ ಉಡಾಫೆ ಉತ್ತರ ನೀಡುತ್ತಾರೆ.

ಕೋಡಿ ಹೊಸಬೆಂಗ್ರೆಯಲ್ಲಿ 10-15 ಮೀ ಉದ್ದದ ಒಂದೇ ಪೈಪ್ ಲೈನ್ ಕಾಮಗಾರಿಗೆ ಎರಡು ಮೂರು ಬಿಸ್ ಪಾಸ್ ಮಾಡಿಕೊಂಡಿದ್ದಾರೆ. ಈ ಕಾಮಗಾರಿಗೆ ತಾಲ್ಲೂಕು ಪಂಚಾಯತ್ ಅನುದಾನದಲ್ಲಿ 1,90,000 ರೂ ಬಿಲ್ ಪಾಸ್ ಮಾಡಿಕೊಂಡಿದ್ದಾರೆ . ಇದೇ ಕಾಮಗಾರಿಗೆ ಗ್ರಾಮ ಪಂಚಾಯತ್ ಅನುದಾನದಲ್ಲಿ 1,43,000 ರೂ. ಬಿಲ್ ಪಾಸ್ ಆಗಿದೆ. ನಂತರ 6 ತಿಂಗಳ ಬಳಿಕ ಕೋಡಿ ಕನ್ಯಾನದ ಆಯ್ದ ಸ್ಥಳಗಳಲ್ಲಿ ಪೈಪ್ ಲೈನ್ ಅಭಿವೃದ್ಧಿ ಎಂದು ಇದೇ ಕಾಮಗಾರಿಗೆ ಮತ್ತೆ 75 ,000 ಬಿಲ್ ಪಾಸ್ ಮಾಡಿಕೊಂಡಿದ್ದಾರೆ. ಈ ಮೂರೂ ಕಾಮಗಾರಿಗಳ ಬಗ್ಗೆ ಕೇಳಿದರೆ ಒಂದೇ ಸ್ಥಳ ತೋರಿಸುತ್ತಾರೆ.

ಇನ್ನು ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿತಲೆ ಪ್ರದೇಶದಲ್ಲಿ ಸ್ಮಶಾನ ನಿರ್ಮಾಣಕ್ಕೆ 3,17,474 ರೂ ವೆಚ್ಚ ತೋರಿಸಿ ಬಿಲ್ ಮಂಜೂರು ಮಾಡಿಸಿಕೊಳ್ಳಲಾಗಿದ್ದು, ಇಲ್ಲಿ ಇದುವರೆಗೆ ಸ್ಮಶಾನ ಕಾಮಗಾರಿ ನಡೆದಿಲ್ಲ.

ಹಾಗೂ ಕೋಡಿ ಕನ್ಯಾಣದಲ್ಲಿ ಸೋಲಾರ್ ಖರೀದಿ ಹಾಗೂ ಅಳವಡಿಕೆಗೆ ಒಂದು ವರ್ಷದಲ್ಲಿ 7 ಲಕ್ಷಕ್ಕೂ ಅಧಿಕ ಹಣ ವ್ಯಯಿಸಲಾಗಿದೆ. ಆದರೆ ಇಲ್ಲಿ ಸೋಲಾರ್ ದೀಪಗಳು ಉರಿಯುವುದು ಕಾಣುತ್ತಿಲ್ಲ. ಇನ್ನು ಪಂಚಾಯತ್ ನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಮಾಹಿತಿ ಕೇಳಿದರೆ ಸುಳ್ಳು ಕೇಸು ದಾಖಲಿಸಿದ್ದಾರೆ. ಅಲ್ಲದೆ ಕರೆಗಳನ್ನು ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಈ ರೀತಿಯ ಅವ್ಯವಸ್ಥೆ ಯಿಂದ ಗ್ರಾಮ ಯಾವುದೇ ರೀತಿಯಲ್ಲೂ ಅಭಿವೃದ್ಧಿ ಕಾಣುತ್ತಿಲ್ಲ. ಸರಕಾರದ ಹಣ ದುರುಪಯೋಗ ಆಗಬಾರದು. ಸರಕಾರದಿಂದ ಗ್ರಾಮದ ಅಭಿವೃದ್ಧಿಗೆ ಬಂದ ಹಣ ಗ್ರಾಮಕ್ಕಾಗಿಯೇ ಬಳಕೆ ಆಗಬೇಕು. ಈ ಎಲ್ಲಾ ಅವ್ಯವಹಾರದ ಸಮಗ್ರ ತನಿಖೆ ಆಗಬೇಕು. ಹಾಗೂ ಪಂಚಾಯತ್ ಅಧ್ಯಕ್ಷರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾತು ಮುಂದುವರೆಸಿದ ಅವರು, ಈ ಅವ್ಯವಹಾರಗಳ ಬಗ್ಗೆ ನಡೆಯುವ ಸಮಗ್ರ ತನಿಖೆಯು ರಾಜ್ಯದ ಇತರ ಗ್ರಾಮ ಪಂಚಾಯತ್ ಗಳಲ್ಲಿ ಅವ್ಯವಹಾರ ನಡೆಸುವವರಿಗೆ ಭಯ ಹುಟ್ಟಿಸಬೇಕು. ಇದಕ್ಕೆಲ್ಲಾ ನೆರವು ನೀಡುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಈ ವೇಳೆ ಪತ್ರಿಕಾ ಗೋಷ್ಠಿಯಲ್ಲಿ ಕೋಡಿ ಹಿತರಕ್ಷಣಾ ವೇದಿಕೆಯ ಉಪಾಧ್ಯಕ್ಷ ಚೇತನ್ ಪುತ್ರನ್, ಪ್ರಧಾನ ಕಾರ್ಯದರ್ಶಿ ಮಣಿಕಂಠ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!