ಜನರ ಧ್ವನಿ ಅಡಗಿಸಲು ಅಸಾಧ್ಯ: ಡಿ.ಕೆ. ಶಿವಕುಮಾರ್

ಉಡುಪಿ: ಕೋವಿಡ್ ಸೋಂಕಿನಿಂದ ಜನರನ್ನು ರಕ್ಷಿಸಲು ಲಸಿಕೆಯೊಂದೇ ಪರಿಹಾರ. ಉಚಿತ ಲಸಿಕೆ ವಿತರಣೆಗೆ ಸರಕಾರ ಆಸಸ್ತಿ ತೋರದಿದ್ದಾಗ ಪಕ್ಷದ ನೆಲೆಯಲ್ಲಿ ಲಸಿಕೆಗಾಗಿ 100 ಕೋಟಿ ನೀಡುವುದಾಗಿ ಹೇಳಿ ಉಚಿತ ಲಸಿಕೆ ಅಭಿಯಾನಕ್ಕೆ ಅವಕಾಶ ನೀಡಬೇಕೆಂದು ಸರಕಾರಕ್ಕೆ ಬೇಡಿಕೆ ಮಂಡಿಸಿದ ನಂತರ ಸರಕಾರ ತಾನೆ ಲಸಿಕೆಯನ್ನು ಉಚಿತವಾಗಿ ನೀಡುವ ಘೋಷಣೆ ಮಾಡಿತು.

ಪಕ್ಷದ ಈ ಹೊಕ್ಕೊತ್ತಾಯದಿಂದ ಜನತೆ ಇಂದು ಉಚಿತ ಲಸಿಕೆ ಪಡೆಯುವಂತಾಗಿದೆ ಎಂದು ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್‌ರವರು ಕೋವಿಡ್ ಸಹಾಯ ಹಸ್ತದ ಮಾಹಿತಿ ನೀಡುತ್ತಾ ಹೇಳಿದರು. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆ ಕಾಣುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿರುತ್ತದೆ. ಜನ ಹಣ ಪಾವತಿಸಿ ಲಸಿಕೆ ಖರೀದಿಸುವ ಸನ್ನಿವೇಶ ಸೃಷ್ಟಿಸಲಾಗುತ್ತಿದೆ.

ಕೋವಿಡ್ ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸರ್ಕಾರ ಘೋಷಿಸಿದ ಆರ್ಥಿಕ ನೆರವು ಅರ್ಹರಿಗೆ ತಲುಪಿಲ್ಲ. ಕಷ್ಟದಲ್ಲಿರುವವರಿಗೆ ಸಹಾಯ ನೀಡಿದರೆ ಜನ ಮರೆಯುವುದಿಲ್ಲ. ಆದರೆ ಅಧಿಕಾರದಲ್ಲಿರುವ ಸರಕಾರ ಅದರಲ್ಲಿ ವೈಫಲ್ಯ ಕಂಡಿದೆ. ಆಡಳಿತ ಪಕ್ಷದ ಪದಾಧಿಕಾರಿಗಳಿಗಿಂತ ನಮ್ಮ ಪಕ್ಷದ ಕಾರ್ಯಕರ್ತರು ಕೋವಿಡ್ ಸಂಕಷ್ಟ ಸಮಯದಲ್ಲಿ ಹೆಚ್ಚಿನ ಸಹಾಯ ಮಾಡಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಕಾಂಗ್ರೆಸ್ ಪಕ್ಷ ಪಕ್ಷಾತೀತವಾಗಿ ಸಹಾಯ ಹಸ್ತ ನೀಡಿದೆ ಎಂದರು.

ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರಾದ ದ್ರುವ ನಾರಾಯಣ್‌ ಮಾತನಾಡುತ್ತಾ ಕೊರೊನಾ ಸಂಕಷ್ಟ ಕಾಲದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ತಂಡ ಕಟ್ಟಿಕೊಂಡು ಅಖಾಡಕ್ಕೆ ಇಳಿದಿತ್ತು. ಅಸಂಘಟಿತ ಬಡವರ ಬೆನ್ನಿಗೆ ನಿಂತಿತ್ತು.ರೈತರಿಗೆ ಬೆಂಬಲ ಬೆಲೆ ಕೊಟ್ಟು ಖರೀದಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಿತ್ತು. ಉಚಿತ ಔಷಧಿ, ಆಹಾರ ಕಿಟ್ ವಿತರಿಸಿ, ಸಾರಿಗೆ ನೌಕರರ ಬೆನ್ನಿಗೆ ನಿಂತಿತ್ತು ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಸ್ವಾಗತಿಸಿ ಪ್ರಸ್ತಾವನೆಗೈದರು. ಸಭೆಯಲ್ಲಿ ಎ.ಐ.ಸಿ.ಸಿ. ಕಾರ್ಯದರ್ಶಿಗಳಾದ ಪಿ.ವಿ. ಮೋಹನ್, ಮಾಜಿ ಸಚಿವರುಗಳಾದ ವಿನಯ ಕುಮಾರ್ ಸೊರಕೆ ಮತ್ತು ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಗೋಪಾಲ ಪೂಜಾರಿ, ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೋ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಜು ಪೂಜಾರಿಯವರು ಕಾರ್ಯಕ್ರಮ ನಿರ್ವಹಿಸಿ, ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಧನ್ಯವಾದವಿತ್ತರು.

Leave a Reply

Your email address will not be published. Required fields are marked *

error: Content is protected !!