ಯಕ್ಷ ರಂಗದಲ್ಲೊಂದು ಅಮೂಲ್ಯ ರತ್ನ “ನಾಗರತ್ನ”: ಉಡುಪಿ ಟೈಮ್ಸ್ ವಾರದ ವ್ಯಕ್ತಿ
ಸಂದರ್ಶಕಿ/ ಬರಹ : ದಿವ್ಯ
ಉಡುಪಿ( ಉಡುಪಿ ಟೈಮ್ಸ್ ವರದಿ): ಪುರುಷ ಪ್ರಧಾನ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯುವತಿಯರೂ ಸಮಾಜದ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಗೃಹಿಣಿ ಯೊಬ್ಬರು, ಗಂಡುಕಲೆ ಎಂದೇ ಪ್ರಸಿದ್ದಿ ಪಡೆದಿರುವ ಕರಾವಳಿಯ ಯಕ್ಷಗಾನ ರಂಗವನ್ನು ಪ್ರವೇಶಿಸಿದ್ದು ಮಾತ್ರವಲ್ಲದೆ ಪ್ರಶಸ್ತಿಯ ಗರಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ.ವೃತ್ತಿಯಲ್ಲಿ ಶಿಕ್ಷಕಿಯಾದ ನಾಗರತ್ನ ಜಿ.ಹೇರ್ಳೆ ಪ್ರವೃತ್ತಿಯಲ್ಲಿ ಕವಯತ್ರಿ ,ಕಲಾವಿದೆ, ನಿರೂಪಕಿ. ಸಂಪನ್ಯೂಲ ವ್ಯಕ್ತಿ ಹೀಗೆ ಅಸಾಮಾನ್ಯ ಪ್ರತಿಭೆಯಾದ ಇವರೇ ಉಡುಪಿ ಟೈಮ್ಸ್ ವಾರದ ವ್ಯಕ್ತಿ
ಇಂದಿನ ನಮ್ಮ ವಾರದ ವ್ಯಕ್ತಿಯ ಯಕ್ಷಗಾನ ಕಲಾವಿದೆ ನಾಗರತ್ನ ಜಿ.ಹೇರ್ಳೆ. ಇವರ ತಂದೆ ಸುಬ್ರಾಯ ಮಯ್ಯ ಶಿಕ್ಷಕರಾಗಿದ್ದು ತಾಯಿ ಭಾಗೀರಥಿ ಗೃಹಿಣಿ ಯಾಗಿದ್ದಾರೆ. ಸದಾ ತನ್ನ ಪತ್ನಿಯ ಸಾಧನೆಗೆ ಬೆನ್ನು ತಟ್ಟುವ ಇವರ ಪತಿ ವಿಶ್ವನಾಥ ಹೇರ್ಳೆ , ಮಕ್ಕಳಾದ ವಿಶ್ರುತಾ ಹಾಗೂ ವಿಖ್ಯಾತ್ ರನ್ನು ಒಳಗೊಂಡ ಟೀಚರ್ ದು ಸುಂದರ ಸಂಸಾರ. ಅತ್ತ ಬಡತನವೂ ಅಲ್ಲದ ಇತ್ತ ಸಿರಿತನವೂ ಇಲ್ಲದ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ನಾಗರತ್ನ ಅವರು ಪ್ರಾಥಮಿಕ ಶಿಕ್ಷಣ ಸೊರಬ ತಾಲೂಕಿನ ಹರೀಶಿ ಮತ್ತು ಮಣೂರು ಶಾಲೆಯಲ್ಲಿ, ಪ್ರೌಢ ಶಿಕ್ಷಣ ಪುತ್ತೂರಿನಲ್ಲಿ ಹಾಗೂ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜು ಹಾಗೂ ಮೈಸೂರಿನ ಕಾಲೇಜಿನಲ್ಲಿ ಪದವಿ ಶಿಕ್ಷಣ, ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಶಿಕ್ಷಣ ಮುಗಿಸಿದ್ದಾರೆ ಹಾಗೂ ಬಿಎಡ್, ಡಿಎಡ್ ಶಿಕ್ಷಣ ವನ್ನೂ ಮುಗಿಸಿದ್ದಾರೆ. ಯಕ್ಷಗಾನ ರಂಗದಲ್ಲಿನ ಇವರ ಸಾಧನೆ,ಅನುಭವಗಳ ಕುರಿತ ಮತ್ತಿಷ್ಟು ಮಾಹಿತಿಗಾಗಿ ಈ ಸಂದರ್ಶನ ನಿಮಗಾಗಿ
ಉ. ಟೈಮ್ಸ್: ನಿಮಗೆ ಯಕ್ಷಗಾನದಲ್ಲಿ ಆಸಕ್ತಿ ಬೆಳೆದದ್ದು ಹೇಗೆ ?
ಅತಿಥಿ: ಕರಾವಳಿ ಯಕ್ಷಗಾನಕ್ಕೆ ಪ್ರಸಿದ್ಧವಾದದ್ದು. ಮನೆಯ ಸಮೀಪದಲ್ಲಿ ಎಲ್ಲೇ ಯಕ್ಷಗಾನ ನಡೆದರೂ ಮನೆಯ ಸದಸ್ಯರೊಂದಿಗೆ ಯಕ್ಷಗಾನ ನೋಡಲು ಹೋಗುತ್ತಿದ್ದೆ. ಹಾಗಾಗಿ ಬಾಲ್ಯದಿಂದಲೇ ನನಗೆ ಯಕ್ಷಗಾನದ ಕ್ಷೇತ್ರದಲ್ಲಿ ಆಸಕ್ತಿ ಬೆಳೆದಿತ್ತು. ನಂತರ ನಾನು ಹೈಸ್ಕೂಲ್ ನಲ್ಲಿ ಇರುವಾಗ ತೆಂಕುತಿಟ್ಟಿನ ಮಹಿಳೆಯರ ಯಕ್ಷಗಾನ ನೋಡಿದ್ದೆ. ಆಗ ಮಹಿಳೆಯರೂ ಯಕ್ಷಗಾನ ಮಾಡಬಹುದು ಅಂದುಕೊಂಡೆ. ಆದರೆ ಆ ಸಮಯದಲ್ಲಿ ಆಸಕ್ತಿ ಇದ್ದರೂ ಯಕ್ಷಗಾನ ರಂಗದ ಪ್ರವೇಶ ಆಗಿರಲಿಲ್ಲ.
ಉ. ಟೈಮ್ಸ್. ಯಕ್ಷಗಾನ ರಂಗ ಪ್ರವೇಶ ಆದ್ದದ್ದು ಹೇಗೆ ?
ಅತಿಥಿ: ನಮ್ಮ ಮನೆಯಲ್ಲಿ ಯುವತಿಯರಿಗೆ ಯಕ್ಷಗಾನ ನೋಡಲು ಅನುಮತಿ ನೀಡುವುದೇ ದೊಡ್ಡ ವಿಷಯವಾಗಿತ್ತು. ಹೀಗಿರುವಾಗ ಯಕ್ಷಗಾನದ ವೇಷ ತೊಟ್ಟು ಕುಣಿಯುವುದು ಕನಸಿನ ಮಾತೇ ಆಗಿತ್ತು. ಆದರೆ, ಅದು ಸಾಧ್ಯವಾದದ್ದು ನಾನು ಶಿಕ್ಷಕಿಯಾದ ಬಳಿಕ. ವಿದ್ಯಾರ್ಥಿಯೊಬ್ಬರ ಪಾಲಕರೋರ್ವರು ಮಹಿಳಾ ಯಕ್ಷಗಾನದ ತಂಡ ಕಟ್ಟಿಕೊಂಡಿದ್ದರು. ಅವರು ನನ್ನನ್ನು ಯಕ್ಷಗಾನದಲ್ಲಿ ಭಾಗವಹಿಸುವಂತೆ ಕೇಳಿ ಕೊಳ್ಳುತ್ತಿದ್ದರು. ಮೊದ ಮೊದಲು ನನಗೇನು ಗೊತ್ತಿಲ್ಲ ಎಂದು ಹಿಂಜರಿದೆ. ಆದರೆ ಬಳಿಕ ಅವರ ಪ್ರೋತ್ಸಾಹ ದಿಂದ ನಾನು ನನ್ನ 32 ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರ ಪ್ರವೇಶ ಮಾಡಿದೆ. ತೆಕ್ಕಟ್ಟೆಯ ವೆಂಕಟೇಶ್ ವೈದ್ಯ ಅವರು ನನ್ನನ್ನು ಯಕ್ಷಗಾನಕ್ಕೆ ಪರಿಚಯಿಸಿದರು.
ಉ. ಟೈಮ್ಸ್: ಯಕ್ಷಗಾನ ರಂಗದಲ್ಲಿ ಮಹಿಳೆಯರ ತೊಡಗಿಸಿಕೊಳ್ಳುವಿಕೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಅತಿಥಿ: ಖಂಡಿತವಾಗಿಯೂ ಇದು ಖುಷಿಯ ವಿಚಾರ. ನಮ್ಮ ಊರಿನ ಪಾರಂಪರಿಕ ಜನಪದ ಕಲೆಯ ಬಗ್ಗೆ ನಮಗೆ ಅರಿವಿರಬೇಕು. ದೊಡ್ಡ ಮಟ್ಟದಲ್ಲಿ ಸಾಧನೆ ಮಾಡದಿದ್ದರೂ ಕೂಡಾ ನಮ್ಮೂರಿನ ವಿಶೇಷತೆ ತಿಳಿದುಕೊಂಡು ಸಣ್ಣ ಮಟ್ಟಿನ ಜ್ಞಾನ ಹೊಂದಿರುವುದು ಉತ್ತಮವೇ.
ಉ. ಟೈಮ್ಸ್ : ಯಕ್ಷಗಾನದಲ್ಲಿ ಭಾಗವಹಿಸಲು ಹೆಚ್ಚಾಗಿ ಸ್ತ್ರೀ ಯರಿಗೆ ಅನುಮತಿ ನೀಡುವುದಿಲ್ಲ ಇದು ಯಾಕಿರಬಹುದು ?
ಅತಿಥಿ: ಯಾವುದೇ ಕ್ಷೇತ್ರದಲ್ಲಿನ ಕಷ್ಟ ನಮಗೆ ಅರ್ಥ ಆಗುವುದು ಅದರ ಒಳ ಹೊಕ್ಕಾಗ ಮಾತ್ರ. ನನಗೂ ಈ ಬಗ್ಗೆ ನನಗೆ ಅರಿವಾಗಿದ್ದು ಯಕ್ಷಗಾನ ರಂಗಪ್ರವೇಶ ಮಾಡಿದ ಮೇಲೆಯೇ. ಮಹಿಳೆಯರು ಯಕ್ಷಗಾನ ಕ್ಕೆ ಬಂದಾಗ ಪ್ರೋತ್ಸಾಹ ಮಾಡುವುದಕ್ಕಿಂತ ಅವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡುವುದೇ ಹೆಚ್ಚು. ಕೆಲವೊಮ್ಮೆ ನಾವು ಆಸೆಗಳಿಗೆ ಬಲಿಯಾಗುತ್ತೇವೆ. ಯಾರೋ ಅವಕಾಶ ಕೊಡುತ್ತೇವೆ ಎಂದು ಹೇಳಿ ನಮ್ಮನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಭಯದಿಂದ ಹೆಣ್ಣು ಮಕ್ಕಳಿಗೆ ಯಕ್ಷಗಾನ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಅವಕಾಶ ಬಂದಾಗ ಅನುಮತಿ ನೀಡಲು ಪಾಲಕರು ಹಿಂಜರಿಯುತ್ತಾರೆ.
ಉ. ಟೈಮ್ಸ್: ನಿಮ್ಮ ಯಕ್ಷಗಾನದ ಆರಂಭಿಕ ದಿನಗಳು ಹೇಗಿದ್ದವು?
ಅತಿಥಿ: ಯಕ್ಷಗಾನ ನೋಡುವಷ್ಟು ಸುಲಭವಲ್ಲ. ಯಾವುದೇ ಹಿನ್ನಲೆ ಇಲ್ಲದೆ ಯಕ್ಷಗಾನ ಪ್ರವೇಶ ಮಾಡಿದ್ದರಿಂದ ಆರಂಭದ ದಿನಗಳಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಬೇಕಾಯಿತು. ಆರಂಭದಲ್ಲಿ ಹೆಜ್ಜೆಗಳ ಬಗ್ಗೆ ಯಾವುದೇ ಮಾಹಿತಿ ಇರದ ನನಗೆ ಸೀತರಾಮ ಶೆಟ್ಟಿ ಕೊಯ್ಕೂರು ಯಕ್ಷಗಾನದ ಹೆಜ್ಜೆಗಳನ್ನು ಕಲಿಸಿಕೊಟ್ಟರು. ಆರಂಭದಲ್ಲಿ ಒಂದು ಎಂಟತ್ತು ಪ್ರಸಂಗಗಳು ಆಗುವವರೆಗೂ ಕುಣಿತಗಳ ಬಗ್ಗೆ ಸರಿಯಾದ ಹಿಡಿತ ಸಿಕ್ಕಿರಲಿಲ್ಲ.
ಅಲ್ಲದೆ, ಆರಂಭದಲ್ಲಿ ನನ್ನನ್ನೂ ಯಕ್ಷಗಾನ ಕಲಾವಿದೆಯಾಗಿ ಯಾರೂ ಸ್ವೀಕರಿಸಿರಲಿಲ್ಲ. ಹೊಗಳುವುದಕ್ಕಿಂತ ತೆಗಳಿದ್ದೇ ಹೆಚ್ಚಾಗಿದ್ದವು. ನಂತರದ ದಿನಗಳಲ್ಲಿ ನನಗೆ ಸಮಾಜದಲ್ಲಿ ಹೆಸರು ಬಂದ ಮೇಲೆ ನಿಧಾನವಾಗಿ ಒಪ್ಪಿಕೊಳ್ಳಲಾರಂಭಿಸಿದರು.
ಉ. ಟೈಮ್ಸ್: ಯಕ್ಷಗಾನ ಕಲಿಕೆಯಲ್ಲಿ ನೀವು ಎದುರಿಸಿದ ಸವಾಲುಗಳೇನು ?
ಅತಿಥಿ: ಯಕ್ಷಗಾನದಲ್ಲಿ ಲಯ ಬಹಳ ಪ್ರಮುಖ ವಾಗಿರುತ್ತದೆ. ಲಯ ಗಟ್ಟಿಯಾಗಿರಬೇಕಾಗುತ್ತದೆ. ಹಾಗೆಯೇ ಯಕ್ಷಗಾನದ ಒಂದು ಪದ್ಯದಲ್ಲಿ ಅನೇಕ ಚಾಲುಗಳು ಇರುತ್ತದೆ. ಯಕ್ಷಗಾನದ ಮೂಲ ಮತ್ತು ಸಾಮಾನ್ಯ ಶಿಕ್ಷಣ ಕಲಿತು ರಂಗವಪ್ರವೇಶ ಮಾಡುವವರಿಗೆ ಹೆಜ್ಜೆ ಮತ್ತು ತಾಳಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಹಾಗೂ ಯಕ್ಷಗಾನದ ಕುರಿತು ಸಾಮಾನ್ಯ ಶಿಕ್ಷಣ ಹಾಗೂ ತರಬೇತಿ ಹೊಂದಿದವರಿಗೆ ಸ್ವತಂತ್ರತೆ ಇರುತ್ತದೆ.
ಆದರೆ ನಾನು ಪ್ರಸಂಗಗಳಿಲ್ಲಿನ ಪಾತ್ರಗಳಿಗೆ ಬೇಕಾದ ಹೆಜ್ಜೆಗಳನ್ನು ಮಾತ್ರ ಕಲಿತಿದ್ದರಿಂದ ನನ್ನ ಪಾತ್ರದ ಹೆಜ್ಜೆ ಹೊರತು ಪಡಿಸಿ ಇತರ ತಾಳ ಹೆಜ್ಜೆಗಳಿಗೆ ಸಂಬಂಧಿಸಿ ಯಾವುದೇ ಮಾಹಿತಿ ಇರುತ್ತಿರಲಿಲ್ಲ. ಆರಂಭದಲ್ಲಿ ಇದು ಕಷ್ಟ ಎನಿಸಿತ್ತು ನಂತರದ ದಿನಗಳಲ್ಲಿ ಸಮಸ್ಯೆ ಉಂಟಾಗಲಿಲ್ಲ.
ಉ. ಟೈಮ್ಸ್: ನಿಮ್ಮ ಯಕ್ಷಗಾನ ಕ್ಷೇತ್ರದ ಪಾಲ್ಗೊಳ್ಳುವಿಕೆಗೆ ಮನೆಯಲ್ಲಿ ಪ್ರೋತ್ಸಾಹ ಹೇಗಿತ್ತು.?
ಅತಿಥಿ: ಮನೆಯವರ ಪ್ರೋತ್ಸಾಹ ತುಂಬಾ ಇದೆ. ಆದರೆ ಆರಂಭದಲ್ಲಿ ಮನೆಯಲ್ಲಿ ಒಪ್ಪುತ್ತಾರೋ ಇಲ್ಲವೋ ಎಂಬ ಭಯದಿಂದ ಮನೆಯಲ್ಲಿ ನನ್ನ ಯಕ್ಷಗಾನ ಪ್ರವೇಶ ಹಾಗೂ ಪ್ರದರ್ಶನವನ್ನು ಎಲ್ಲರಿಂದಲೂ ಮುಚ್ಚಿಟ್ಟಿದ್ದೆ. ನಂತರ ಪ್ರದರ್ಶನದ ದಿನವೇ ಅಂಜಿಕೆಯಿಂದಲೇ ನಾನು ಮನೆಯವರ ಬಳಿ ಹೇಳಿದ್ದೆ. ನಮ್ಮ ಪ್ರದರ್ಶನ ನೋಡಿದ ಬಳಿಕ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಉ. ಟೈಮ್ಸ್: ನೀವು ನೀಡಿದ ಪ್ರದರ್ಶನ ಹಾಗೂ ನಿಮಗೆ ಇಷ್ಟವಾದ ಪಾತ್ರ ಯಾವುದು ?
ಅತಿಥಿ: ಇದುವರೆಗೂ 150 ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ್ದೇನೆ . ಅದರಲ್ಲೂ ಮುಂಬೈ ಮತ್ತು ಗೋವಾದಲ್ಲಿ ಮಾಡಿದ ಪ್ರದರ್ಶನ ಮರೆಯುವಂತಿಲ್ಲ. ಅದರ ಜೊತೆಗೆ ರಾಜ್ಯದ ಅಂಕೋಲಾ ಶಿವಮೊಗ್ಗ, ಶಿರಸಿ, ಮಂಡ್ಯ, ಬೆಂಗಳೂರು, ತುಮಕೂರು, ಧರ್ಮಸ್ಥಳ ಹೀಗೆ ಬಹುತೇಕ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದೇನೆ. ನಾನು ಮಾಡಿದ ಪಾತ್ರಗಳಲ್ಲಿ ಕೃಷ್ಣ ನ ಪಾತ್ರ ತುಂಬಾ ಇಷ್ಟವಾಗುತ್ತದೆ. ಹಾಗೂ ಕೃಷ್ಣ ಸಂಧಾನದ ವಿದುರನ ಪಾತ್ರ ತುಂಬಾ ಖುಷಿ ಕೊಟ್ಟಿದೆ.
ಉ. ಟೈಮ್ಸ್: ಪ್ರೇಕ್ಷಕಿಯಾಗಿ ಇಷ್ಟಪಡುವ ಪಾತ್ರ ಯಾವುದು?
ಅತಿಥಿ: ಯಕ್ಷಗಾನ ದಲ್ಲಿ ಗಂಭೀರ ಪಾತ್ರಗಳಿಗಿಂತ ಪುಂಡು ವೇಷಗಳೆಂದರೆ ತುಂಬಾ ಇಷ್ಟ.
ಉ. ಟೈಮ್ಸ್: ಯಕ್ಷಗಾನ ರಂಗದಲ್ಲಿ ಮುಂದಿನ ಕನಸು ?
ಅತಿಥಿ: ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಪ್ರಸಂಗಗಳನ್ನು ಮಾಡುವ ಆಸೆ ಹಾಗೂ ಚಾಲ್ತಿಯಲ್ಲಿಲ್ಲದ ಪ್ರಸಂಗಗಳನ್ನು, ಪಾತ್ರಗಳನ್ನು ಮಾಡುವಾಸೆ ಹೊಂದಿದ್ದೇನೆ.
ಉ. ಟೈಮ್ಸ್: ಯಕ್ಷಗಾನದಲ್ಲಿ ಆಧುನಿಕತೆಯ ಬಳಕೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಅತಿಥಿ: ಯಾವುದೇ ಕಲೆಯನ್ನು ಹಾಗೂ ಕಲೆಯಲ್ಲಿನ ಪರಂಪರೆಯನ್ನು ಉಳಿಸುವಂತಹ ಹೊಣೆ ನಮ್ಮ ಮೇಲಿದೆ. ಯಕ್ಷಗಾನ ಕಲೆ ಸಮೃದ್ಧವಾಗಿದೆ. ಇಲ್ಲಿ ಎರವಲು ಪಡೆಯುವ ಅಗತ್ಯವೇ ಇಲ್ಲ. ರಕ್ಷಗಾನದಲ್ಲಿ ರಂಗಸ್ಥಳವೇ ಎಲ್ಲಾ ಆಗುತ್ತದೆ. ಅದೇ ಕಾಡು,ಅರಮನೆ,ಸಮುದ್ರ, ಕೊಳ,ನದಿ ಎಲ್ಲವೂ ಆಗುತ್ತದೆ. ಇಲ್ಲಿ ಎಲ್ಲವೂ ಸಾಂಕೇತಿಕವಾಗಿ ಆಗುವುದರಿಂದ ಅದನ್ನು ಮತ್ತೆ ಚಿತ್ರೀಸುವ ಅಗತ್ಯ ಇಲ್ಲ.
ಉ. ಟೈಮ್ಸ್ : ಸಾಧಕಿ ಮಹಿಳೆ, ಮನೆ ಹಾಗೂ ಸಮಾಜ ಎರಡು ಜವಾಬ್ದಾರಿಯನ್ನ ಏಕ ರೂಪದಲ್ಲಿ ನಿಭಾಯಿಸುವ ಅವಶ್ಯಕತೆ ಬಗ್ಗೆ ನಿಮ್ಮ ಅಭಿಪ್ರಾಯ?
ಅತಿಥಿ: ಮಹಿಳೆಯರು ಮನೆಯ ಜವಾಬ್ದಾರಿ ಜೊತೆಗೆ ಅವರ ಕನಸು , ಪ್ರತಿಭೆಯ ಜೊತೆಗೆ ಬೆಳೆಯ ಬೇಕೆಂದರೆ ಮನೆಯವರ ಸಹಕಾರ ತುಂಬಾ . ಜೊತೆಗೆ ಮಹಿಳೆ ಮನೆಗೆ ಪ್ರಮುಖ ಪ್ರಾಧಾನ್ಯತೆ ನೀಡಿ ಇತರ ಅಭಿರುಚಿಗಳ ಕಡೆಗೆ ಗಮನ ಹರಿಸಬೇಕು
ಉ. ಟೈಮ್ಸ್: ಕಲಾ ಕ್ಷೇತ್ರದಲ್ಲಿ ಮುಂದುವರೆಯಬೇಕು ಎನ್ನುವ ಯುವ ಪೀಳಿಗೆಗಳಿಗೆ ನೀವು ನೀಡುವ ಸಲಹೆ …?
ಅತಿಥಿ: ತುಂಬಾ ಖುಷಿಯ ವಿಚಾರ, ನಮಗಿರುವುದು ಒಂದೇ ಜನ್ಮ ಆದ್ದರಿಂದ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು. ಆಸಕ್ತಿ ಹೊಂದಿರಬೇಕು. ಆದರೆ ಕಲಾವಿದರು ಯಾವತ್ತು ಆನೆ ನಡೆದದ್ದೇ ದಾರಿ ಎಂಬ ಅಭಿಪ್ರಾಯ ಹೊಂದಿರಬಾರದು.
ಉ. ಟೈಮ್ಸ್ : ಪ್ರಶಸ್ತಿ ಬಗ್ಗೆ ಏನು ಹೇಳುತ್ತೀರಾ?
ಅತಿಥಿ: ಸಾಧನೆಯ ಹಂತದಲ್ಲಿ ಇರುವಾಗಲೇ ಪ್ರಶಸ್ತಿ ನನ್ನನ್ನು ಅರಸಿಕೊಂಡು ಬಂದಾಗ ಒಂದೆಡೆ ಹೆಮ್ಮೆಯಾಯಿತು ಮತ್ತೊಂದೆಡೆ ತುಂಬಾ ಸಂಕೋಚವಾಗಿತ್ತು. ಪ್ರಶಸ್ತಿಗಳು ನನ್ನ ಜವಾಬ್ದಾರಿಯನ್ನ ಹೆಚ್ಚಿಸಿದೆ. ಇನ್ನಷ್ಟು ಸಾಧಿಸು ಎಂದು ಆಶೀರ್ವದಿಸಿದೆ.
ಉ. ಟೈಮ್ಸ್: ಕಾರ್ಯಕ್ರಮ ಸಂಘಟಕಿಯಾಗಿ ನಿಮ್ಮ ಅನುಭವ?
ಸಂಘಟನೆ ತುಂಬಾ ಕಷ್ಟದ ಕೆಲಸ , ಯಾವುದೇ ಕಾರ್ಯಕ್ರಮ ಆಯೋಜಿಸುವವರು ಕ್ರಿಯಾ ಶೀಲರಾಗಿರಬೇಕು. ಹೊಸ ಹೊಸ ಕಾರ್ಯಕ್ರಮ ಗಳನ್ನು ಆಯೋಜಿಸುವ ಮೂಲಕ ಈ ಕ್ಷೇತ್ರ ಖುಷಿ ಕೊಟ್ಟಿದೆ.
ಉ. ಟೈಮ್ಸ್: ಕವಯತ್ರಿ ಬದುಕಿನ ಆರಂಭ ?
ಅತಿಥಿ: ಪಾರಂಪಳ್ಳಿ ನರಸಿಂಹ ಐತಾಳ್ ಮತ್ತು ಎಂ ಎನ್ ಮಧ್ಯಸ್ತ ಅವರು ಮಕ್ಕಳ ವಾಚಕರ ಕೂಟ ಎಂಬ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ರಜಾದಿನಗಳಲ್ಲಿ ಓದಲು ಪುಸ್ತಕಗಳನ್ನು ನೀಡಿ ಸ್ಪರ್ದೆ ಮಾಡುತ್ತಿದ್ದರು ಈ ಮೂಲಕ ನನಗೆ ಸಾಹಿತ್ಯ ಹಾಗೂ ಬರೆವಣಿಗೆಯ ಆಸಕ್ತಿ ಬೆಳೆಯಿತು.
ಉ. ಟೈಮ್ಸ್ :ನಾಟಕ ಹಾಗೂ ಯಕ್ಷಗಾನ ಎರಡರ ನಡುವಿನ ವ್ಯತ್ಯಾಸ ನಾಗರತ್ನ ರವರ ಪ್ರಕಾರ ?
ಅತಿಥಿ: ಯಕ್ಷಗಾನಕ್ಕಿಂತ ನಾಟಕ ಹೆಚ್ಚು ಶ್ರಮ ಬಯಸುತ್ತದೆ.ಯಕ್ಷಗಾನದಲ್ಲಿ ಮೂಲ ಮತ್ತು ಸಾಮಾನ್ಯ ಹೆಜ್ಜೆಗಳನ್ನು ಕಲಿತರೆ ಯಾವುದೇ ಪಾತ್ರವನ್ನು ಸಲೀಸಾಗಿ ಮಾಡಬಹುದು. ಆದರೆ ನಾಟಕದಲ್ಲಿ ಪ್ರತೀ ಪಾತ್ರಕ್ಕೂ ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ.
ಉ. ಟೈಮ್ಸ್ : ಸಾಧನೆಯ ಹಾದಿಯಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು?
ಅತಿಥಿ: ಪ್ರಥಮ ಹಂತದಲ್ಲಿ ಮಹಿಳೆಯರು ಸಮಾಜದ ವಿರೋಧವನ್ನೇ ಎದುರಿಸಬೇಕಾಗುತ್ತದೆ. ಟೀಕೆಗಳನ್ನು ,ಅಪವಾದಗಳನ್ನು ಎದುರಿಸುವ ಧೈರ್ಯ ಹೊಂದಿರಬೇಕು. ಸಾಂಸಾರಿಕ ಜೀವನದಲ್ಲಿ ಒಡಕು ಮೂಡುವ ಸಾಧ್ಯತೆ ಇರುತ್ತದೆ. ಅಲ್ಲದೆ ಕೆಲವೊಮ್ಮೆ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಂಸಾರದ ನದಿಯಲ್ಲಿ ಅಭಿರುಚಿಯ ದೋಣಿಯನ್ನ ಸಾವಕಾಶವಾಗಿ ಸಾಧನೆಯ ದಡಕ್ಕೆ ಸೇರಿಸಬೇಕು.
ಇವರು ಕಲಿ ಕಂಠೀರವ, ದೇವಯಾನಿ ಶರ್ಮಿಷ್ಟೇ,ಪ್ರಚಂಡ ರಾವಣ, ಸತಿ ಸಕ್ಕುಬಾಯಿ, ಭಕ್ತ ಸಿರಿಯಾಳ ಮೊದಲಾದ ನಾಟಕಗಳಲ್ಲಿ ಅಭಿನಯಿಸಿದ್ದು, ಹಾಸ್ಯ ಲೇಖನ ಮೂಷಿಕಾಯನದಂತಹ ಲೇಖನಗಳನ್ನು ಬರೆದಿದ್ದಾರೆ.
ಇವರ ಯಕ್ಷಗಾನ ಕ್ಷೇತ್ರದ ಸಾಧನೆಗೆ 2017 ರಲ್ಲಿ ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿ ವತಿಯಿಂದ ಕರ್ನಾಟಕ ವಿಕಾಸ ರತ್ನ ಹಾಗೂ 2020 ರಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಮೈಸೂರು ಇದರ ವತಿಯಿಂದ ಗುರು ಭೂಷಣ ಎಂಬ ಪ್ರಶಸ್ತಿ ಲಭಿಸಿದೆ.