ಒಡೆದ ಮನೆಯಾಗುತ್ತಿದ್ದೆಯಾ ರಾಜ್ಯ ಕಾಂಗ್ರೆಸ್ ???
ಮೈಸೂರು, ಜೂನ್ 28: ಸಿದ್ದರಾಮಯ್ಯನವರು ಭಾವೀ ಮುಖ್ಯಮಂತ್ರಿಗಳು ಅವರನ್ನು ಮಾಜಿ ಸಿಎಂ ಎಂದು ಹೇಳಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ನೀಡಿದ ಹೇಳಿಕೆ, ಕಾಂಗ್ರೆಸ್ಸಿನ ರಾಜಕೀಯಕ್ಕೆ ಮತ್ತೊಂದು ತಿರುವು ಪಡೆದಿದೆ. ಕೆಪಿಸಿಸಿ ಅಧ್ಯಕ್ಷರು ಮತ್ತು ಪಕ್ಷದ ಶಿಸ್ತುಸಮಿತಿ ನೀಡಿದ ಎಚ್ಚರಿಕೆಯ ಹೊರತಾಗಿಯೂ, ಮುಸುಕಿನ ಗುದ್ದಾಟ ಕಮ್ಮಿಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.ಹೊಸ ಹೊಸ ಹೇಳಿಕೆಗಳು ನಾಯಕರಿಂದ ಹೊರ ಬೀಳುತ್ತಲೇ ಇದೆ.
ಈ ಎಲ್ಲಾ ಬೆಳವಣಿಗೆಯ ನಡುವೆ ಹೈಕಮಾಂಡ್ ನಲ್ಲಿ ಆಪ್ತರಾಗಿರುವ ಬಿ.ಕೆ.ಹರಿಪ್ರಸಾದ್ ಮತ್ತು ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪನವರು ದೆಹಲಿಗೆ ತೆರಳಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದರೊಂದಿಗೆ ಸುತ್ತೂರು ಶ್ರೀಗಳನ್ನು ಭೇಟಿಯಾಗಿರುವ ಉತ್ತರ ಕರ್ನಾಟಕದ ಭಾಗದ ಪ್ರಭಾವೀ ಮುಖಂಡ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಸುತ್ತೂರು ಶ್ರೀಗಳನ್ನು ಭೇಟಿಯಾಗಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಕೂಡಾ ಮುಂದಿನ ಮುಖ್ಯಮಂತ್ರಿಗಳ ವಿಚಾರದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. “ಕಾಂಗ್ರೆಸ್ಸಿನಲ್ಲೂ ಲಿಂಗಾಯತ ಸಮುದಾಯದ ನಾಯಕರೂ ಇದ್ದಾರೆ ಎನ್ನುವುದನ್ನು ಮರೆಯಬಾರದು”ಎಂದು ಹೇಳಿದ್ದಾರೆ.
ಎಂ.ಬಿ.ಪಾಟೀಲ್ ಅವರನ್ನು ಸಿದ್ದರಾಮಯ್ಯನವರ ಆಪ್ತ ಬಣದ ನಾಯಕ ಎಂದು ಗುರುತಿಸಲಾಗುತ್ತಿದೆ. ಹಾಗಾಗಿ, ಸುತ್ತೂರಿನಲ್ಲಿ ಎಂಬಿಪಿ ನೀಡಿದ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.