18 ವರ್ಷ ಮೇಲ್ಪಟ್ಟ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ 10 ದಿನಗಳಲ್ಲಿ ಲಸಿಕೆ- ಡಾ.ಸಿ.ಎನ್ ಅಶ್ವತ್ಥನಾರಾಯಣ

ಬೆಂಗಳೂರು, ಜೂ.30: ರಾಜ್ಯದಲ್ಲಿನ 18 ವರ್ಷ ಮೇಲ್ಪಟ್ಟ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೂ ಇನ್ನು 10 ದಿನಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುವುದು ಎಂದು  ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕುರಿತಾಗಿ ರಾಜ್ಯದೆಲ್ಲೆಡೆ ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಜವಾಬ್ದಾರಿ ವಹಿಸಲಾಗಿದೆ. ಅದರಂತೆ ಜೂ.28 ರಂದು 94,000 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಇನ್ನು ಹತ್ತು ದಿನದಲ್ಲಿ ಇಂಜಿನಿಯರಿಂಗ್, ಮೆಡಿಕಲ್, ಪ್ಯಾರಾ ಮೆಡಿಕಲ್, ಡಿಪ್ಲೋಮಾ, ಜಿಸಿಐಟಿ, ಐಟಿಐ, ಪಾಲಿಟೆಕ್ನಿಕ್ ಮತ್ತು ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುವುದು ಎಂದರು.

ಲಸಿಕೆ ಅಭಿಯಾನದಲ್ಲಿ ಇಡೀ ದೇಶದಲ್ಲೇ ರಾಜ್ಯ 3ನೇ ಸ್ಥಾನದಲ್ಲಿದೆ ಎಂದ ಅವರು, ಜೂ.ತಿಂಗಳಲ್ಲಿ 60 ಲಕ್ಷ ಲಸಿಕೆ ನೀಡಲಾಗಿದ್ದು, ಜುಲೈನಲ್ಲಿ ಇನ್ನು ಹೆಚ್ಚು ಕೊಡಲಾಗುವುದು. ಈಗಾಗಲೇ ಕೇಂದ್ರದಿಂದ ಉತ್ತಮವಾಗಿ ಲಸಿಕೆ ಪೂರೈಕೆ ಆಗುತ್ತಿದ್ದು, ಖಾಸಗಿ ಕ್ಷೇತ್ರ ದಿಂದಲೂ ವ್ಯಾಕ್ಸಿನ್ ಪಡೆದು ಜನರಿಗೆ ಕೊಡಲಾಗುವುದು. ಹಾಗೂ, ಮುಖ್ಯಮಂತ್ರಿಗಳ ಕೌಶಲ್ಯ ಯೋಜನೆ ಅಡಿ ನೋಂದಾಯಿಸಿ ಕೊಂಡಿರುವ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು. ಇನ್ನು 3ನೇ ಅಲೆಯಲ್ಲಿ ಆಮ್ಲಜನಕ ಕೊರತೆ ಆಗದಂತೆ ಸರಕಾರ ಕಟ್ಟೆಚ್ಚರ ವಹಿಸಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಆಗಸ್ಟ್ ಒಳಗೆ 360 ಘಟಕಗಳಿಂದ ಆಮ್ಲಜನಕ ಉತ್ಪಾದನೆ ಸೇರಿ 2,800 ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು‌ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.

ಸದ್ಯಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ (ಸರಕಾರಿ ಮತ್ತು ಖಾಸಗಿ) ಇಲಾಖೆಗಳ ವ್ಯಾಪ್ತಿಯಲ್ಲಿ 400 ಮೆ.ಟನ್ ಆಮ್ಲಜನಕ ಉತ್ಪಾದನೆ ಆಗುವುದಿದೆ. ಕೆಲವೆಡೆ ಈಗಾಗಲೇ ಉತ್ಪಾದನೆ ಆಗುತ್ತಿದ್ದರೆ, ಇನ್ನು ಕೆಲವೆಡೆ ಘಟಕಗಳನ್ನು ಅಳವಡಿಸಲಾಗುತ್ತಿದೆ. ಇನ್ನು ಕೇಂದ್ರ ಸರಕಾರ, ಪಿಎಂ ಕೇರ್, ಸಿಎಸ್‍ಆರ್ ಹಾಗೂ ರಾಜ್ಯ ಸರಕಾರ ಖರೀದಿ ಮಾಡಿರುವ 40 ಸೇರಿ 187 ಆಮ್ಲಜನಕ ಘಟಕಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ. ಇವುಗಳ ಅಳವಡಿಕೆ ಕಾರ್ಯ ವಿವಿಧ ಹಂತಗಳಲ್ಲಿದೆ. ಕೆಲ ಘಟಕಗಳು ಈ ತಿಂಗಳ ಒಳಗಾಗಿ ಉತ್ಪಾದನೆ ಆರಂಭಿಸುವುದಿದ್ದು, ಉಳಿದವು ಆಗಸ್ಟ್ ನಲ್ಲಿ ಪೂರ್ಣ ಉತ್ಪಾದನೆ ಶುರು ಮಾಡಲಿವೆ. ವೈದ್ಯಕೀಯ ಶಿಕ್ಷಣ ಇಲಾಖೆಗೆ ಕೇಂದ್ರವು ನೀಡಿರುವ 17 ಸೇರಿ ಸಿಎಸ್ ಆರ್ ನಿಂದ ಬಂದಿರುವವು ಸೇರಿ 40 ಆಕ್ಸಿಜನ್ ಜನರೇಟರ್ ಗಳಿವೆ. ಇದಲ್ಲದೆ, ರಾಜ್ಯ ಸರಕಾರ 35 ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಆಕ್ಸಿಜನ್ ಜನರೇಟರ್ ಗಳ ಅಳವಡಿಕೆ ಮತ್ತು ಸಂಗ್ರಹಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಇಲ್ಲಿಯೂ ಆಗಸ್ಟ್ ನಿಂದಲೇ ಆಮ್ಲಜನಕ ಉತ್ಪಾದನೆಯಾಗಲಿದೆ. ಒಟ್ಟು 360 ಘಟಕಗಳಿಂದ ಆಮ್ಲಜನಕ ಲಭ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಅರಿವಳಿಕೆ ತಜ್ಞ ಡಾ.ರಾಘವೇಂದ್ರ ನೇತೃತ್ವದ ಆಮ್ಲಜನಕ ನಿರ್ವಹಣೆ ಸಮಿತಿ ವರದಿ ನೀಡಿದ್ದು ಆ ಪ್ರಕಾರ ಮೂಲಸೌಕರ್ಯ ಕಲ್ಪಿಸಲು ಕ್ರಮ ಜರುಗಿಸಲಾಗಿದೆ.  ಆಮ್ಲಜಕನ ಉತ್ಪಾದನೆ ಜತೆಗೆ ಅದರ ಅತ್ಯುತ್ತಮ ಸಂಗ್ರಹಣಾ ವ್ಯವಸ್ಥೆಗೂ ಆದ್ಯತೆ ನೀಡಲಾಗಿದೆ. ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲೇ 1806 ಮೆ.ಟನ್ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 500 ಮೆ.ಟನ್ ಆಮ್ಲಜನಕವನ್ನು ಹೆಚ್ಚುವರಿ ಸಂಗ್ರಹ ಮಾಡುವ ಗುರಿ ಇದ್ದು, ಅದಕ್ಕೆ ಬೇಕಾದ ಎಲ್ಲ ಕ್ರಮವನ್ನು ಈಗಾಗಲೇ ವಹಿಸಲಾಗಿದೆ. ಆಗಸ್ಟ್ ತಿಂಗಳ ಒಳಗೆ ಇದೆಲ್ಲ ಪೂರ್ಣವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಅವರು ಹೇಳಿದರು. ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಲಾ 6 ಮೆ.ಟನ್ ಹಾಗೂ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ತಲಾ 20 ಮೆ.ಟನ್ ಸಂಗ್ರಹ ಮಾಡುವ ಗುರಿ ಇದೆ. ಕೆಲ ಮೆಡಿಕಲ್ ಕಾಲೇಜ್ ಗಳಲ್ಲಿ 40-50 ಮೆ.ಟನ್ ಸಂಗ್ರಹ ಸಾಮರ್ಥ್ಯವುಳ್ಳ ಆಕ್ಸಿಜನ್ ಟ್ಯಾಂಕರ್ ಗಳಿವೆ. ಇಂಥ ಟ್ಯಾಂಕರ್ ಗಳನ್ನು ತಯಾರಿಸಲು ಈ ಟೆಂಡರ್ ಕರೆಯಲಾಗುತ್ತಿದೆ. 

2,500-2,800 ಟನ್ ಆಕ್ಸಿಜನ್ ಸಂಗ್ರಹ ಮಾಡುವ ವ್ಯವಸ್ಥೆ ರಾಜ್ಯದಲ್ಲಿ ಆಗಲಿದೆ. ಜತೆಗೆ ಜಂಬೋ ಮತ್ತು ಡ್ಯೂರಾ ಸಿಲಿಂಡರ್ ಗಳ ಮೂಲಕ 45 ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ. ಅಲ್ಲದೆ, 9 ಜಿಲ್ಲೆಗಳಲ್ಲಿ ಆಕ್ಸಿಜನ್ ರೀ ಫಿಲ್ಲಿಂಗ್ ಸೌಲಭ್ಯ ಇಲ್ಲ, ಅದನ್ನೂ ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು. ರಾಜ್ಯದಲ್ಲಿ ಈಗ 58,000 ಆಕ್ಸಿಜನ್ ಬೆಡ್ ಗಳಿದ್ದು, ಈ ಪ್ರಮಾಣವನ್ನು 84,000ಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಜತೆಗೆ, ಎಲ್ಲ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಐಸಿಯು ಘಟಕಗಳನ್ನು ಆದ್ಯತೆಯ ಮೇರೆಗೆ ಅಳವಡಿಸಲಾಗುತ್ತಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!