ಕೇಂದ್ರ ಸಂಪುಟ ಪುನರ್ರಚನೆ: ಶಿವಕುಮಾರ್ ಉದಾಸಿ, ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನ ಸಾಧ್ಯತೆ?

ಬೆಂಗಳೂರು: ಕೇಂದ್ರ ಸಚಿವ ಸಂಪುಟದ ಪುನರ್ರಚನೆಯ ಸಾಧ್ಯತೆ ಇದ್ದು, ಕರ್ನಾಟಕದಿಂದ ಯಾರು ಸಚಿವರಾಗಬಹುದು ಎನ್ನುವುದರ ಬಗ್ಗೆ ಜಾತಿ ಮತ್ತು ಅಧಿಕಾರ ಸಮೀಕರಣಗಳ ಆಧಾರದ ಮೇಲೆ ಹಲವಾರು ಸಂಸದರ ಹೆಸರುಗಳು ಕೇಳಿ ಬರುತ್ತಿದೆ. ಹಾವೇರಿ-ಗದಗ ಸಂಸದ ಶಿವಕುಮಾರ್ ಉದಾಸಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಹೆಸರುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ .

ಕೇಂದ್ರ ಸಂಪುಟದಲ್ಲಿ ಕರ್ನಾಟಕದ ಇಬ್ಬರು ಮಂತ್ರಿಗಳಿದ್ದಾರೆ. ಡಿ.ವಿ.ಸದಾನಂದ ಗೌಡ ಮತ್ತು ಪ್ರಹ್ಲಾದ್ ಜೋಶಿ ಅಲ್ಲದೆ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಕೂಡ ಕರ್ನಾಟಕದ  ರಾಜ್ಯಸಭಾ ಸಂಸದರಾಗಿದ್ದಾರೆ.

ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಸುರೇಶ್ ಅಂಗಡಿ ಅವರ ಸ್ಥಾನಕ್ಕೆ ಲಿಂಗಾಯತರನ್ನು ನೇಮಿಸಲಾಗುವುದು ಎಂಬ ಮಾತಿನ ಬಗ್ಗೆ ಬಿಜೆಪಿ ವಲಯದಲ್ಲಿ ಗೊಂದಲವಿದೆ. ದಲಿತರಿಗೆ ಸ್ಥಳಾವಕಾಶ ಕಲ್ಪಿಸುವ ಇರಾದೆ ಇದೆ ಎನ್ನುವ ಮಾತೂ ಇದೆ.

ನಾಲ್ಕು ಬಾರಿಯ ಸಂಸದ ಅಂಗಡಿ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಕಳೆದ ಸೆಪ್ಟೆಂಬರ್‌ನಲ್ಲಿ ಕೋವಿಡ್ ನಿಂದಾಗಿ ನಿಧನರಾದರು. ಅವರ ಪತ್ನಿ ಮಂಗಳಾ ಅಂಗಡಿ ಬೆಳಗಾವಿ ಸಂಸದೆಯಾಗಿ ಆಯ್ಕೆಯಾದರು.

ಉತ್ತರ ಕರ್ನಾಟಕದ ಲಿಂಗಾಯತ ಮುಖಂಡ ಶಿವಕುಮಾರ್ ಉದಾಸಿ ಸಚಿವರಾಗುವ ಭರವಸೆಯ ನಾಯಕರಲ್ಲಿ ಒಬ್ಬರು. ಉದಾಸಿ ಅವರ ತಂದೆ ಹಾನಗಲ್ ಶಾಸಕ  ಸಿಎಂ ಉದಾಸಿ ಇತ್ತೀಚೆಗೆ ನಿಧನರಾದರು. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ತಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವುದರಿಂದ ಅವರು ಸಚಿವರಾಗುವ ಸಾಧ್ಯತೆ ಇಲ್ಲವೆನ್ನಲಾಗಿದೆ.

ಸಂಪುಟದಲ್ಲಿ ದಲಿತರಿಗೆ ಸ್ಥಾನ ಸಿಗಬಹುದೆಂಬ ಊಹಾಪೂಹದೊಡನೆ ರಾಜಕೀಯ ದೈತ್ಯ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸೋಲಿಸಿದ ಕಲಬುರಗಿ ಸಂಸದ ದ ಡಾ.ಉಮೇಶ್ ಜಾಧವ್ ಹಾಗೂ ಚಿತ್ರದುರ್ಗ ಎಂಪಿ ಎ ನಾರಾಯಣಸ್ವಾಮಿ ಅವರು ಕೂಡ ಮಂತ್ರಿ ಸ್ಥಾನ ಅಲಂಕರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!