ಪ್ರಸಾದ್ ನೇತ್ರಾಲಯ ಉಡುಪಿ : ನೇತ್ರದಾನ ಅರಿವು ಪಾಕ್ಷಿಕ ಆಚರಣೆ- ನೇತ್ರದಾನ ಅರಿವು ಜಾಥಾ

ಉಡುಪಿ: ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಅನ್ವಯ ‘41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆಯ’ ಪ್ರಯುಕ್ತ ‘ನೇತ್ರದಾನ ಅರಿವು’ ಜಾಥಾವನ್ನು ಉಡುಪಿಯ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ನಡೆಸಲಾಯಿತು.

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಜಾಥಾಕ್ಕೆ ಚಾಲನೆ ನೀಡಿದರು ಸರ್ವಿಸ್ ಬಸ್ ನಿಲ್ದಾಣದಿಂದ ಪ್ರಸಾದ್ ನೇತ್ರಾಲಯದವರೆಗೆ ಜಾಥಾದಲ್ಲಿ ಭಾಗವಹಿಸಿದ ಉಡುಪಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ನೇತ್ರದಾನದ ಮಹತ್ವದ ಕುರಿತು ಘೋಷಣೆಗಳನ್ನು ಕೂಗಿದರು.

ಮೂಡನಂಬಿಕೆ, ಅಜ್ಞಾನ ಮುಂತಾದ ವಿಷಯಗಳಿಂದ ನೇತ್ರದಾನ ಮಾಡಲು ಜನರು ಹಿಂಜರಿಕೆ ತೋರುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಆದ್ಯತೆಯಾಗಬೇಕಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.

ಮುಖ್ಯ ಅತಿಥಿಯಾದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಪೂರ್ ಅವರ ಮಾತನಾಡುತ್ತಾ ‘ಹುಟ್ಟು ಆಕಸ್ಮಿಕ ಸಾವು ಖಚಿತ’ ಆದ್ದರಿಂದ ನಮ್ಮ ಸತ್ಕರ್ಮಗಳು ನಮ್ಮ ಜೀವನದ ನಂತರವೂ ಮುಂದುವರಿಯಬೇಕಾದರೆ ನೇತ್ರದಾನದಂತಹ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡುತ್ತಾ ಶೈಕ್ಷಣಿಕ ವಿಷಯದಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದೆ, ಹಾಗೇನೇ ಅಂಗಾಂಗ ದಾನದಲ್ಲಿಯೂ ನಾವು ಮುಂಚೂಣಿಯಲ್ಲಿರಬೇಕು. ಪ್ರಸಾದ್ ನೇತ್ರಾಲಯವು ಸರಕಾರ ಮಾಡಬೇಕಾಗಿರುವ ಜನಪರ ಕಾರ್ಯಗಳನ್ನು ತಾನು ಸಮಾಜಮುಖಿಯಾಗಿ ಮಾಡುತ್ತಿರುವುದು ಸಂತೋಷದ ವಿಷಯ. ನಾನು ಅಂಗಾಂಗ ದಾನ ಮಾಡಲು ಸಂಕಲ್ಪಿಸಿದ್ದು ಇತರರು ನೇತ್ರದಾನದಂತಹ ಸತ್ಕಾರ್ಯಗಳಿಗೆ ತೊಡಗಬೇಕು ಎಂದರು.

ಪ್ರಾಸ್ತಾ ವಿಕವಾಗಿ ಮಾತನಾಡಿದ ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಕೋವಿಡ್ ನಂತರದ ಸಮಯದಲ್ಲಿ ನೇತ್ರದಾನದ ಕಾರ್ಯವು ಕುಂಠಿತವಾಗುತ್ತಾ ಸಾಗಿದೆ. ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವುದು ಇಂದು ಅತ್ಯಂತ ಅಗತ್ಯವಾಗಿದೆ. ಭಾರತವು ನೇತ್ರ ದಾನಿಗಳ ಕೊರತೆಯಿಂದಾಗಿ ಶ್ರೀಲಂಕಾದಂತಹ ದೇಶಗಳಿಂದ ಕಣ್ಣುಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಅಂದತ್ವ ನಿಯಂತ್ರಣ ಅಧಿಕಾರಿ ಡಾ. ಲತಾ ನಾಯಕ ಅವರು ಮಾತನಾಡುತ್ತಾ ಇಂದಿನ ಯುವ ಪೀಳಿಗೆ ತಮ್ಮ ನೆರೆಹೊರೆಯ ಹಾಗೂ ಸಂಬಂಧಿಕರಲ್ಲಿ ನೇತ್ರದಾನದ ಮಹತ್ವ ಮತ್ತು ಅವಶ್ಯಕತೆಯ ಬಗ್ಗೆ ಜಾಗೃತಿ ಮೂಡಿಸುತ್ತ ನೇತ್ರದಾನಕ್ಕೆ ಪ್ರೇರೇಪಿಸಬೇಕು ಎಂದರು.

ಈ ಜಾಥಾದಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನೇತ್ರದಾನ ಪಾಕ್ಷಿಕ ಆಚರಣೆಯ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಪೋಸ್ಟರ್ ರಚನಾ ಸ್ಪರ್ಧೆ ಗಳನ್ನು ನಡೆಸಲಾಗಿ ವಿಜೇತರಿಗೆ ಪ್ರಶಸ್ತಿ ಹಾಗೂ ಅಭಿನಂದನಾ ಪತ್ರಗಳನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ನೇತ್ರದಾನ ವಾಗ್ದಾನ ನಡೆಸಿದ ಹಲವಾರು ದಾನಿಗಳಿಗೆ ನೇತ್ರದಾನದ ಪ್ರಮಾಣ ಪತ್ರವನ್ನು ವೇದಿಕೆಯಲ್ಲಿದ್ದ ಗಣ್ಯರು ಹಸ್ತಾಂತರಿಸಿದರು. ಉಡುಪಿಯ ಹಿರಿಯ ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು ಅವರು ಉಪಸ್ಥಿತರಿದ್ದವರಿಗೆ ನೇತ್ರದಾನದ ಪ್ರಮಾಣ ವಚನ ನಡೆಸಿಕೊಟ್ಟರು.

ಡಾ.ಬಾಲಕೃಷ್ಣ ಮಡ್ಡೋಡಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಸಾದ್ ನೇತ್ರಾಲಯದ ಮುಖ್ಯ ಆಡಳಿತ ಅಧಿಕಾರಿ ಮಧ್ವವಲ್ಲಭ ಆಚಾರ್ಯ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್, ಕಾರ್ನಿಯಾ ತಜ್ಞೆ ಡಾ. ಅಪರ್ಣಾ ನಾಯಕ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!