ಠಾಣೆಗೆ ಕರೆಸಿ ಕೆಂಪುಕಲ್ಲು ಕಳವು ಆರೋಪಿಯಾಗಿಸಿದ ಅಮಾಯಕ ರಿಕ್ಷಾ ಚಾಲಕನಿಗೆ ಹೈಕೋರ್ಟ್‌ನಲ್ಲಿ ನ್ಯಾಯ!

ಉಡುಪಿ: ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಕೋರೆ ನಡೆಸಿ ಕೆಂಪುಕಲ್ಲು ಕಳವು ಮಾಡಿದ ಪ್ರಕರಣದಲ್ಲಿ ಆಲೂರಿನ ರಿಕ್ಷಾ ಚಾಲಕ ಶೀನ ಪೂಜಾರಿಯವರನ್ನು ಆರೋಪಿಯನ್ನಾಗಿ ಮಾಡಿದ್ದ ಗಂಗೊಳ್ಳಿ ಪೊಲೀಸರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದ್ದು, ಅವರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದೆ.

ಆಲೂರು ನಿವಾಸಿ ಉದಯ ಶೆಟ್ಟಿಯವರನ್ನು ಗಂಗೊಳ್ಳಿಗೆ ಕರೆದೊಯ್ದಿದ್ದ ರಿಕ್ಷಾ ಚಾಲಕ ಶೀನ ಪೂಜಾರಿಯವರು, ಪೊಲೀಸರ ಸೂಚನೆಯಂತೆ ಠಾಣೆಗೆ ತೆರಳಿದ್ದರು. ವೇಳೆ ದಾಖಲೆವೊಂದಕ್ಕೆ ಸಹಿ ಹಾಕಿಸಿಕೊಂಡ ಪೊಲೀಸರು, ಬಳಿಕ ಕಲ್ಲು ಕಳವು ಪ್ರಕರಣದಲ್ಲಿ ಅವರನ್ನು ಎರಡನೇ ಆರೋಪಿಯನ್ನಾಗಿ ಸೇರಿಸಿದ್ದರು ಎನ್ನಲಾಗಿದೆ.

ವಿಷಯ ತಿಳಿಯದ ಶೀನ ಪೂಜಾರಿಯವರಿಗೆ ಎರಡು ತಿಂಗಳ ಬಳಿಕ ನ್ಯಾಯಾಲಯದ ಸಮನ್ಸ್ ಬಂದಾಗ ಪ್ರಕರಣದ ಬಗ್ಗೆ ಅರಿವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ಆರೋಪಿಯಾಗಿ ನ್ಯಾಯಾಲಯಕ್ಕೆ ಅಲೆಯಬೇಕಾದ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ಅವರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿದ್ದರು.

ಪ್ರತಿಷ್ಠಾನದ ನೆರವಿನಿಂದ ವಕೀಲ ಎನ್. ವಿವೇಕಾನಂದ ಅವರ ಮೂಲಕ ಕರ್ನಾಟಕ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಶೀನ ಪೂಜಾರಿಯವರನ್ನು ಆರೋಪಿಯನ್ನಾಗಿ ಮಾಡಲು ಇರುವ ಆಧಾರಗಳ ಕುರಿತು ಗಂಗೊಳ್ಳಿ ಠಾಣೆಗೆ ಹೈಕೋರ್ಟ್ ನಾಲ್ಕು ಬಾರಿ ಅವಕಾಶ ನೀಡಿದರೂ ಸಮರ್ಪಕ ಉತ್ತರ ಸಲ್ಲಿಕೆಯಾಗಿರಲಿಲ್ಲ.

ಹೀಗಾಗಿ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠವು ಆ.6ರಂದು ಆದೇಶ ನೀಡಿ, ಕುಂದಾಪುರ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದ ಆರೋಪಪಟ್ಟಿಯಿಂದ ಶೀನ ಪೂಜಾರಿಯವರ ಹೆಸರನ್ನು ಕೈಬಿಟ್ಟು, ಅವರ ವಿರುದ್ಧದ ಆರೋಪವನ್ನು ರದ್ದುಪಡಿಸಿದೆ. ಶೀನ ಪೂಜಾರಿಯವರು ಇಚ್ಛಿಸಿದರೆ, ಆಧಾರರಹಿತ ಆರೋಪ ಹೊರಿಸಿ ಅವರ ಮಾನಹಾನಿಗೆ ಕಾರಣರಾದ ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಂಪೂರ್ಣ ಕಾನೂನು ನೆರವು ನೀಡಲಾಗುವುದು ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!