ರೌಡೀಶಿಟರ್ ಗೆ ಪೊಲೀಸರಿಂದ ಫೈರಿಂಗ್: ಆರೋಪಿ ಪ್ರವೀಣ್ ಮನೋಹರ್ ಬಂಧನ
ಕಾರವಾರ: ಪೊಲೀಸರ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್‌ಗೆ ಪೊಲೀಸರು ಫೈರಿಂಗ್ ನಡೆಸಿ ಆರೋಪಿಯನ್ನು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಣ್ಣಗೇರಿ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಂಜೆ ನಡೆದಿದೆ.
ಬಂಧಿತ ರೌಡಿಶಿಟರ್ ಅನ್ನು ಪ್ರವೀಣ್ ಮನೋಹರ್ ಸುಧೀರ್ ಎಂದು ಗುರುತಿಸಲಾಗಿದೆ.
ಕೊಲೆಯತ್ನ, ಸಾರ್ವಜನಿಕ ಆಸ್ತಿಗೆ ಹಾನಿ ಸೇರಿದಂತೆ 16 ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಪ್ರವೀಣ್ ಕಳೆದ ಮೂರು ತಿಂಗಳಿಂದ ತಲೆಮರೆಸಿಕೊಂಡಿದ್ದ. ಆತನನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾಗ, ಆತ ಕಲ್ಲು ಮತ್ತು ಚೂರಿ ಹಿಡಿದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಪಿಎಸ್‌ಐ ಮಹಾಂತೇಶ್ ನಾಯ್ಕ, ಕಾನ್‌ಸ್ಟೇಬಲ್‌ಗಳಾದ ಮಲ್ಲಿಕಾರ್ಜುನ ಹೊಸಮನಿ, ಜಾಫರ್ ಅಥರಗುಂಜಿ ಮತ್ತು ಅಸ್ಲಾಂ ಅವರಿಗೆ ಗಾಯಗಳಾಗಿವೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಪಿಎಸ್‌ಐ ಮಹಾಂತೇಶ್ ನಾಯ್ಕ ಅವರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಆರೋಪಿ ತನ್ನ ದಾಳಿಯ ನ್ನು ಮುಂದುವರಿಸಿದ ಹಿನ್ನೆಲೆ ಪಿಎಸ್‌ಐ ಅನಿವಾರ್ಯವಾಗಿ ಪ್ರವೀಣ್‌ನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿ, ಯಲ್ಲಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.





