ಉಡುಪಿ ನಗರ ಯುವಮೋರ್ಚಾ ವತಿಯಿಂದ ಗುರುವಂದನಾ ಕಾರ್ಯಕ್ರಮ
ಉಡುಪಿ: ಬಿಜೆಪಿ ಯುವಮೋರ್ಚಾ ಉಡುಪಿ ನಗರ ಅಧ್ಯಕ್ಷರಾದ ಶ್ರೀವತ್ಸ ಅವರ ನೇತೃತ್ವದಲ್ಲಿ ಗುರುಪೂರ್ಣಿಮಾ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ ನಡೆಯಿತು. ಈ ಗುರುವಂದನಾ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರಾದ ಬನ್ನಂಜೆ ಸಂಜೀವ್ ಸುವರ್ಣ ಹಾಗೂ ಉಡುಪಿ ನಗರ ಭಾಗದ ಶಾಲಾ ಮಕ್ಕಳಿಗೆ ಭಗವದ್ಗೀತೆ ಶ್ಲೋಕ ಕಲಿಸಿ ಕೊಟ್ಟಂಥ ಗುರುವಿಗೆ ಗೌರವಿಸಲಾಯಿತು.
ಕನ್ನಡದ ಹಿರಿಯ ಯಕ್ಷಗಾನ ಕಲಾವಿದರು ಮತ್ತು ಶಿಕ್ಷಕರಾದ ಬನ್ನಂಜೆ ಸಂಜೀವ ಸುವರ್ಣ ಅವರನ್ನು ಗೌರವಿಸಲಾಯಿತು . ಅವರು ಉಡುಪಿಯ ಯಕ್ಷಸಂಜೀವ ಯಕ್ಷಗಾನ ಕೇಂದ್ರದ ಮುಖ್ಯಸ್ಥರು, ಅವರು ಯಕ್ಷಗಾನದ ಹಲವು ಪ್ರಕಾರಗಳಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ಅನೇಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿರುತ್ತಾರೆ. ಯಕ್ಷಗಾನ ಕಲಾವಿದರಾಗಿ 30ಕ್ಕೂ ಹೆಚ್ಚು ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ ಮತ್ತು ಯಕ್ಷಗಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯಕ್ಷಗಾನದ ಗುರು-ಶಿಷ್ಯ ಪರಂಪರೆಯನ್ನು ಎತ್ತಿಹಿಡಿಯುತ್ತಲೇ ಯಕ್ಷಗಾನದ ಆಧುನಿಕ ರೂಪಾಂತರಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಮತ್ತು ಮಾನಸಿಕ ಅಸ್ವಸ್ಥ ಮಕ್ಕಳಿಗೂ ಯಕ್ಷಗಾನ ಕಲಿಸಿದ್ದಾರೆ.
ಮೀನಾಕ್ಷಿ ಪೈ ಅವರು ಕಳೆದ ಸುಮಾರು 30 ವರ್ಷದಿಂದ ಉಡುಪಿ ಭಾಗದ ಶಾಲೆಗಳಿಗೆ ತೆರಳಿ ಶಾಲಾ ಮಕ್ಕಳಿಗೆ ಭಗವದ್ಗೀತೆ ಕಂಠ ಪಾಠವನ್ನು ಕಲಿಸಿ, ಅವರ ಸ್ವಂತ ಖರ್ಚಿನಿಂದ ಶಾಲಾ ಮಕ್ಕಳಿಗೆ ಭಗವದ್ಗೀತೆ ಪುಸ್ತಕವನ್ನು ನೀಡುತ್ತಾ ಬಂದಿದ್ದಾರೆ. ಹಾಗೆಯೇ ಉಡುಪಿ ಕೃಷ್ಣ ಮಠದ ಸಹಯೋಗದಲ್ಲಿ ಮೀನಾಕ್ಷಿ ಪೈ ಅವರ ನೇತೃತ್ವದಲ್ಲಿ ಭಗವದ್ಗೀತೆ ಶ್ಲೋಕ ಕಂಠಪಾಠ ಸ್ಪರ್ಧೆ ಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಲಿಯಲು ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ. ಪ್ರಸ್ತುತ ಕೃಷ್ಣ ಮಠದಲ್ಲಿ 15 ವರ್ಷಗಳಿಂದ ಪ್ರತಿದಿನ ಭಗವದ್ಗೀತೆ ಶ್ಲೋಕವನ್ನು ಪಠಿಸುತ್ತಿದ್ದಾರೆ. ಈ ಸೇವಾಮನೋಭಾವನೆಯುಳ್ಳ ಬನ್ನಂಜೆ ಸಂಜೀವ್ ಸುವರ್ಣ ಮತ್ತು ಮೀನಾಕ್ಷಿ ಪೈ ಇವರಿಗೆ ಉಡುಪಿ ನಗರ ಬಿಜೆಪಿ ಯುವಮೋರ್ಚಾ ತಂಡವು ಅವರನ್ನು ಗುರುತಿಸಿ ಗುರುಪೂರ್ಣಿಮ ದಿನಂದಂದು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರ ಯುವಮೋರ್ಚಾ ಉಪಾಧ್ಯಕ್ಷರಾದ ಪ್ರಜ್ವಲ್ ಪೂಜಾರಿ, ಸಂದರ್ಶ ಆಚಾರ್ಯ, ಪ್ರಣವ್ ಕಾಮತ್, ನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ನಿತಿನ್ ಪೈ ಮಣಿಪಾಲ, ಕಾರ್ಯದರ್ಶಿಗಳಾದ ದೀಕ್ಷಿತ್ ಶೆಟ್ಟಿ, ನಿಕಿಲ್ ಮಡಿವಾಳ, ಹರ್ಷ ಆಚಾರ್ಯ, ಭೂಷಣ್ ಕುಮಾರ್ ಉಪಸ್ಥಿತರಿದ್ದರು.





