ಆರು ವರ್ಷಗಳ ಕಾನೂನು ಸಮರದಲ್ಲಿ ಜಯ ಸಾಧಿಸಿದ ವಯೋವೃದ್ಧೆ: ಕೈತಪ್ಪಿದ್ದ ಸ್ಥಿರಾಸ್ತಿ ಮರಳಿ ಮಡಿಲಿಗೆ

ಉಡುಪಿ: ಬದುಕಿದ್ದಾಗಲೇ ಮರಣ ಹೊಂದಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಜಮೀನು ಕಬಳಿಸಿದ್ದ ಆರೋಪಿಯ ವಿರುದ್ಧ ಕಾನೂನು ಸಮರದಲ್ಲಿ ಹೋರಾಡಿ ವಯೋವೃದ್ಧೆಯೋರ್ವರು ಜಯಶಾಲಿಯಾಗಿರುವ ಘಟನೆ ಉಡುಪಿಯ ಬ್ರಹ್ಮಗಿರಿ ಎಂಬಲ್ಲಿ ನಡೆದಿದೆ.
ವಾದಿ ಸರೋಜಿನಿ ಆರ್.‌ ಅಂಚನ್‌ (86) ಎನ್ನುವವರು ಉಡುಪಿಯ ಬ್ರಹ್ಮಗಿರಿಯ ಸಾಯಿರಾಧ ಪ್ರೈಡ್‍ನಲ್ಲಿ ಮನೆಯಲ್ಲಿ ವಾಸವಿದ್ದರು. ಅವರ ಪತಿ ಕೆ.ರಾಘವೇಂದ್ರ ಅಂಚನ್‍ರವರು ಜೀವಂತವಿದ್ದಾಗ 1984 ರ ಫೆ.27 ರಂದು ನೋಂದಾಯಿತ ಕ್ರಯ ಪತ್ರದ ಮೂಲಕ ಮಂಗಳೂರು ಉಪನೋಂದಾವಣಾಧಿಕಾರಿಯವರ ಕಛೇರಿಯಲ್ಲಿ ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದ ಸ.ನಂ 125ರಲ್ಲಿ 12.5 ಸೆಂಟ್ಸ್ ಜಾಗವನ್ನು ಲಕ್ಷ್ಮೀ ಬಾಯಿ ಮತ್ತು ಇತರರಿಂದ ಖರೀದಿಸಿದ್ದರು. ಪತಿ ಕೆ.ರಾಘವೇಂದ್ರ ಅಂಚನ್‍ರವರು 1992 ರ ಆ.7 ರಂದು ತಮ್ಮ ಸ್ಥಿರಾಸ್ತಿಯನ್ನು ತನ್ನ ಪತ್ನಿ ಸರೋಜಿನಿ ಆರ್ ಅಂಚನ್ ಮತ್ತು ತನ್ನ ಮಕ್ಕಳಾದ ನವೀನ್ ಚಂದ್ರ ಹಾಗೂ ವಾಣಿ ಪುರುಷೋತ್ತಮ್‍ರವರಿಗೆ ನೀಡಿ ಮರಣ ಹೊಂದಿದ್ದರು.
ಆಸ್ತಿಯನ್ನು ಖರೀದಿ ಮಾಡಿದ ದಿನದಿಂದ ಮಂಗಳೂರು ಮಹಾನಗರಪಾಲಿಕೆಯಲ್ಲಿ ವಾದಿ ತನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಂಡು ಸ್ವಾಧೀನಾನುಭವವನ್ನು ಹೊಂದಿದ್ದರು. 2016-17 ರ ತನಕ ಸ್ಥಿರಾಸ್ತಿಗೆ ಸಂಬಂಧಪಟ್ಟ ಭೂ-ತೆರಿಗೆಗಳನ್ನು ಪಾವತಿಸಿದ್ದರು. ವಯೋಸಹಜ ಕಾರಣಗಳಿಂದ ವಾದಿಗೆ ಸೇರಿದ ಸ್ಥಿರಾಸ್ತಿಗೆ ಆಗಾಗ ಭೇಟಿ ನೀಡಲು ಅಸಾಧ್ಯವಾಗಿದ್ದು, ಅವರ ಮಗಳು ಮತ್ತು ಅಳಿಯ ವರ್ಷಕ್ಕೆರಡು ಬಾರಿ ತಮ್ಮ ಜಾಗದಲ್ಲಿನ ತೆಂಗಿನ ಮರಗಳಿಂದ ಕಾಯಿಗಳನ್ನು ಕೊಯ್ದುಕೊಂಡು ಬರುತ್ತಿದ್ದರು.
ಮಂಗಳೂರು ಬೋಂದೆಲ್‍ನ ಸುನೀಲ್ ಜೋಸೆಫ್ ಡಿಸೋಜಾ ಸ್ಥಿರಾಸ್ತಿಯನ್ನು ಅಕ್ರಮವಾಗಿ ಕಬಳಿಸುವ ಉದ್ದೇಶದಿಂದ ಸರೋಜಿನಿ.ಆರ್ ಅಂಚನ್‍ 2005 ರ ಅ.19 ರಂದು ಮರಣ ಹೊಂದಿದ್ದಾರೆಂದು ಕಂದಾಯ ಅಧಿಕಾರಿಗಳಿಗೆ ತಪ್ಪು ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಸರೋಜಿನಿ.ಆರ್‌‌.ಅಂಚನ್ ಮತ್ತು ಅವರ ಗಂಡ ಕೆ.ರಾಘವೇಂದ್ರ ಅಂಚನ್‍ ಅವರಿಗೆ ತಾನು ಏಕೈಕ ವಾರಸುದಾರ ಎಂದು ಬಿಂಬಿಸಿ ತನ್ನ ಹೆಸರನ್ನು ಸುನೀಲ್.ಆರ್.ಅಂಚನ್ ಎಂದು ಬದಲಾಯಿಸಿಕೊಂಡು ಸ್ಥಿರಾಸ್ತಿಯ ಖಾತೆಯನ್ನು ತನ್ನ ಹೆಸರಿಗೆ ಬದಲಾವಣೆ ಮಾಡಿಕೊಂಡಿದ್ದರು.
ಸುನೀಲ್ ಜೋಸೆಫ್ 2015 ರ ಡಿ.22 ರಂದು ಸ್ಥಿರಾಸ್ತಿಯನ್ನು ಮಂಗಳೂರು ಕುತ್ತಾರ್ ಪದವು ನಿವಾಸಿ ನಿತಿನ್ ಕೊಟ್ಟಾರಿಯವರಿಗೆ ₹ 12,40,000 ಕ್ಕೆ ನೋಂದಾವಣೆ ಮಾಡಿಕೊಟ್ಟಿದ್ದು, 2016 ರ ಮೇ.9 ರಂದು ನಿತಿನ್ ಕೊಟ್ಟಾರಿ, ಮಂಗಳೂರು ಶಿವನಗರದ ನಿವಾಸಿ ಸುಜಾತ ಚಂದ್ರಕಾಂತ ಪಾಟೀಲ್‍ರವರಿಗೆ ₹ 16,18,800 ಕ್ಕೆ ಮಾರಾಟ ಮಾಡಿದ್ದಾರೆ. 2017 ರ ನ.9 ರಂದು ಸುಜಾತ ಚಂದ್ರಕಾಂತ ಪಾಟೇಲ್‍ರವರು ಮಂಗಳೂರು ಕೊಡಿಯಾಲ್ ಬೈಲು ನಿವಾಸಿ ಸವಿತಾ ಮರಿಯಾ ರೆಬೆಲ್ಲೋರವರಿಗೆ ₹ 18 ಲಕ್ಷಕ್ಕೆ‌ ಆಸ್ತಿಯನ್ನು ಮಾರಾಟ ಮಾಡಿದ್ದರು. 2018 ರ ಜೂನ್ ತಿಂಗಳ 2 ನೇ ವಾರದಂದು ಯಾರೋ ಮೂರನೇ ವ್ಯಕ್ತಿಗಳು ಸ್ಥಿರಾಸ್ತಿಯಲ್ಲಿರುವ ಮರಗಳನ್ನು ಕಡಿಯುತ್ತಿದ್ದಾರೆ ಎನ್ನುವ ಸುದ್ದಿ ಸ್ಥಳೀಯರಿಂದ ತಿಳಿಯಿತು. ಕೂಡಲೇ ಸ್ಥಳಕ್ಕೆ ಬಂದು ವಿಚಾರಿಸಿದಾಗ ಸವಿತಾ ಮರಿಯ ರೆಬೆಲ್ಲೋರವರು ಸ್ಥಿರಾಸ್ತಿಯನ್ನು ಖರೀದಿಸಿರುವುದಾಗಿ ತಿಳಿಯಿತು.
ಆ ಬಗ್ಗೆ ವಾದಿ ಸರೋಜಿನಿ ಆರ್ ಅಂಚನ್‍ರವರು ಸುರತ್ಕಲ್ ಪೋಲೀಸ್ ಠಾಣೆಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದೇ ವೇಳೆ ಈ ಸ್ಥಿರಾಸ್ತಿ ವರ್ಗಾವಣೆಗೆ ಸಂಬಂಧಪಟ್ಟಂತೆ ಶಿವಮೊಗ್ಗದ ನೋಟರಿ ವಕೀಲರೋರ್ವರ ಶೀಲುಗಳು, ಶಿವಮೊಗ್ಗ ಜಿಲ್ಲೆಯ ಉಪ ಖಜಾನೆಯ ನಕಲಿ ಶೀಲುಗಳು, ಮಂಗಳೂರು ಮಹಾನಗರ ಪಾಲಿಕೆಯ ನಕಲಿ ಶೀಲು, ಸುರತ್ಕಲ್ ವಲಯ ಕಛೇರಿಯಲ್ಲಿ ಮರಣ ಪ್ರಮಾಣ ಪತ್ರ ಮಂಜೂರು ಮಾಡುವ ಅಧಿಕಾರಿಯವರ ನಕಲು ಶೀಲು, ಮಂಗಳೂರಿನ ಇಬ್ಬರು ತಹಶೀಲ್ದಾರರ ನಕಲಿ ಶೀಲು, ಗ್ರಾಮಲೆಕ್ಕಾಧಿಕಾರಿ ಪದವು ಗ್ರಾಮ ಇವರ ನಕಲಿ ಶೀಲುಗಳನ್ನು ತಯಾರಿಸಿ ಸದ್ರಿ ಸ್ಥಿರಾಸ್ತಿಯನ್ನು ವರ್ಗಾವಣೆ ಮಡಿಕೊಂಡಿದ್ದಾರೆ ಎಂದು ಸುರತ್ಕಲ್ ಪೋಲಿಸರ ತನಿಖೆಯಿಂದ ವಾದಿ ಸರೋಜಿನಿ ಆರ್.‌ ಅಂಚನ್‌ ಅವರಿಗೆ ತಿಳಿದು ಬಂದಿದೆ.
ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, 2025 ರ ಜೂ.26 ರಂದು ನೋಂದಾಯಿತ ಕ್ರಯ ಪತ್ರಗಳನ್ನು ಅಸಿಂಧು ಎಂದು ಘೋಷಿಸಿ ನೈಜ ಮಾಲೀಕರಿಗೆ ಶಾಂತಿಯುತ ಸ್ವಾಧಿನಾನುಭಾವಕ್ಕೆ ಯಾವುದೇ ರೀತಿಯಿಂದಲೂ ಹಸ್ತಕ್ಷೇಪವನ್ನುಂಟು ಮಾಡಬಾರದೆಂದು ಆದೇಶಿಸಿದೆ. ಈ ಬಗ್ಗೆ ಆದೇಶ ನೀಡಿರುವ ನ್ಯಾಯಾದೀಶರಾದ ರಾಮ ಲಿಂಗಪ್ಪರವರು, ಶಾಶ್ವತ ನಿರ್ಭಂದಕಾಜ್ಞೆಯ ಮೂಲಕ ನಿರ್ಭಂದಿಸಿ ನಂತರ ಅಮಾನ್ಯಗೊಂಡಿರುವ ದಾಸ್ತಾವೇಜುಗಳನ್ನು ಕೂಡಲೇ ನಿಷ್ಕ್ರಿಯಗೊಳಿಸುವಂತೆ ಸಂಬಂಧಪಟ್ಟ ಉಪನೋಂದಾವಣಾ ಕಛೇರಿಗೆ ನಿರ್ದೇಶನ ಮಾಡಿದ್ದಾರೆ.
ಆ ಮೂಲಕ ವಾದಿ ಸರೋಜಿನಿ ಆರ್ ಅಂಚನ್ ಅವರು ತಮ್ಮ ಇಳಿ ವಯಸ್ಸಿನಲ್ಲೂ ಕಾನೂನು ಸಮರದಲ್ಲಿ ಗೆಲುವುದು ಸಾಧಿಸಿದ್ದಾರೆ. ಸಂತ್ರಸ್ತೆಯ ಪರ ಉಡುಪಿಯ ನ್ಯಾಯವಾದಿ ಎಚ್.ಆನಂದ ಮಡಿವಾಳ ಮತ್ತು ಮಂಗಳೂರಿನ ನ್ಯಾಯವಾದಿ ಕೇಶವ ನಂದೋಡಿ ವಾದಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸರೋಜಿನಿ ಆರ್ ಅಂಚನ್, ಆರು ವರ್ಷ ನಿರಂತರ ಹೋರಾಟದಿಂದ ನಮ್ಮ ಜಾಗವನ್ನು ಮರಳಿ ಪಡೆದಿದ್ದೇವೆ. ನನ್ನ ವಕೀಲರು ಮತ್ತು ಸುರತ್ಕಲ್ ಪೋಲೀಸರು ಕ್ಷಿಪ್ರ ಕಾನೂನು ಕ್ರಮ ಕೈಗೊಂಡಿದ್ದರಿಂದ ನನ್ನಿಂದ ಕೈತಪ್ಪಿ ಹೋದ ಸ್ಥಿರಾಸ್ತಿಯನ್ನು ಮರು ಪಡೆಯುವಂತಾಯಿತು ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!