ದೆವ್ವ ಬಿಡಿಸುವುದಾಗಿ ಮಹಿಳೆಗೆ ಥಳಿತ: ಅಸ್ವಸ್ಥಗೊಂಡ ಮಹಿಳೆ ಸಾವು..!
ಶಿವಮೊಗ್ಗ: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಗೆ ಥಳಿಸಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗದ ಜಂಬರಗಟ್ಟೆ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.
ಮೃತರನ್ನು 45 ವರ್ಷ ಪ್ರಾಯದ ಹೊಸ ಜಂಬರಗಟ್ಟೆ ಗ್ರಾಮದ ನಿವಾಸಿ ಗೀತಮ್ಮ ಎಂದು ಗುರುತಿಸಲಾಗಿದೆ.
ರವಿವಾರ ರಾತ್ರಿ ಗೀತಮ್ಮ ಅವರ ಮನೆಗೆ ಬಂದ ಆಶಾ ಎಂಬಾಕೆ ಮಂಕಾಗಿದ್ದ ಗೀತ ಅವರಿಗೆ ದೆವ್ವ ಹಿಡಿದಿದೆ. ಅದನ್ನು ಬಿಡಿಸುವುದಾಗಿ ಅವರ ಮಗ ಸಂಜಯ್ ನ ಬಳಿ ಹೇಳಿದ್ದಾಳೆ. ಮಂಕಾಗಿದ್ದ ತನ್ನ ತಾಯಿ ಲವಲವಿಕೆಯಿಂದಿದ್ದರೆ ಸಾಕು ಎಂದು ಆಶಾಳ ಮಾತಿಗೆ ಒಪ್ಪಿಕೊಂಡಿದ್ದಾನೆ. ಬಳಿಕ ಆಶಾಳು ತನ್ನ ಮೇಲೆ ಚೌಡಮ್ಮ ಬಂದಿರುವುದಾಗಿ ಹೇಳಿ ಗೀತಮ್ಮಳ ಮೇಲಿರುವ ದೆವ್ವ ಬಿಟ್ಟು ಹೋಗು ಎಂದು ಕೋಲಿನಿಂದ ಥಳಿಸಲಾರಂಭಿಸಿದ್ದಾಳೆ. ಬಳಿಕ ಮನೆಯಿಂದ ಎರಡೂವರೆ ಕಿ.ಮೀ. ದೂರವಿರುವ ಹಳೇ ಜಂಬರಗಟ್ಟೆ ಚೌಡಮ್ಮನ ದೇವಸ್ಥಾನದವರೆಗೂ ಥಳಿಸಿಕೊಂಡು ಹೋಗಿದ್ದು, ದೆವ್ವ ಬಿಟ್ಟು ಹೋಗಿಲ್ಲ ಎನ್ನುವ ಕಾರಣ ನೀಡಿ ಬೆಳಗಿನ ಜಾವ 2.30ರ ವರೆಗೂ ಥಳಿಸಿದ್ದಾಳೆ. ಗೀತಮ್ಮಳ ತಲೆಯ ಮೇಲೆ ದೊಡ್ಡ ಗಾತ್ರದ ಕಲ್ಲು ಹೊರಿಸಿ ಕಾಲುವೆಯಲ್ಲಿದ್ದ ತಣ್ಣೀರೆರಚಿದ್ದಾಳೆ. ಚಳಿ ತಾಳಲಾಗದೇ ನಡಗುತ್ತಿದ್ದ ಗೀತಮ್ಮ ಕುಸಿದು ಬಿದ್ದಿದ್ದಾರೆ. ನಂತರ ಆಶಾ ಎಂಬಾಕೆ ಈಗ ಗೀತಮ್ಮಳ ಮೈಮೇಲಿದ್ದ ದೆವ್ವ ಬಿಟ್ಟು ಹೋಗಿದೆ. ಇನ್ನು ಮುಂದೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ಸರಿಯಾಗಿದೆ ಎಂದು ಗೀತಮ್ಮಳನ್ನು ಮನೆಗೆ ಕಳುಹಿಸಿದ್ದಾಳೆ.
ನಡೆಯಲಾಗದೇ ತೀವ್ರ ಅಸ್ವಸ್ಥರಾಗಿದ್ದ ಗೀತಮ್ಮಳನ್ನು ಮಗ ಸಂಜಯ್ ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆ ವೇಳೆಗಾಗಲೇ ಗೀತಮ್ಮ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿದ್ದಾರೆ.
ಇನ್ನು, ಈ ಬಗ್ಗೆ ಹೊಳೆ ಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಆಶಾಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.





