ರಾತ್ರಿ ವೇಳೆ ರೂಮಿನಲ್ಲಿ ಮಹಿಳೆಯೊಂದಿಗೆ ಸಿಕ್ಕಿಬಿದ್ದ ಸ್ವಾಮೀಜಿ: ಮಠದಿಂದ ಬಹಿಷ್ಕಾರ
ಬೆಳಗಾವಿ: ರಾತ್ರಿ ಸಮಯದಲ್ಲಿ ಮಠದ ಸ್ವಾಮೀಜಿ ಮಹಿಳೆಯ ಜೊತೆ ರೆಡ್ ಹ್ಯಾಂಡ್ ಆಗಿ ಸ್ಥಳೀಯರ ಬಳಿ ಸಿಕ್ಕಿಬಿದ್ದು, ಸ್ವಾಮೀಜಿಯನ್ನು ಮಠದಿಂದಲೇ ಓಡಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದಲ್ಲಿರುವ ಅಡವಿಸಿದ್ಧೇಶ್ವರ ಮಠದಲ್ಲಿ ರವಿವಾರ ನಡೆದಿದೆ.
ಮಠದ ಅಡವಿಸಿದ್ಧರಾಮ ಶ್ರೀ ಅವರು ಮಹಿಳೆ ಜೊತೆ ಇರುವುದನ್ನು ಕಂಡ ಸ್ಥಳೀಯರು ಏಕಾಏಕಿ ಮಠಕ್ಕೆ ನುಗ್ಗಿ ಸ್ವಾಮೀಜಿಯನ್ನು ತರಾಟೆಗೆ ತೆಗದುಕೊಂಡಿದ್ದಾರೆ. ಮಠದ ಸ್ವಾಮೀಜಿ ರೂಮಿನಲ್ಲಿ ಮಹಿಳೆ ಇರುವುದನ್ನು ಕೆಲವು ಯುವಕರು ನೋಡಿದ್ದು, ಆಗ ತಕ್ಷಣವೇ ಊರಿನವರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಠಕ್ಕೆ ನೂರಾರು ಮಂದಿ ದೌಡಾಯಿಸಿದ್ದು, ಸ್ವಾಮೀಜಿ ರೂಮಿನಲ್ಲಿ ಮಹಿಳೆಯ ಜೊತೆ ರೆಡ್ ಹ್ಯಾಂಡ್ ಆಗಿ ಊರಿನವರ ಬಳಿ ಸಿಕ್ಕಿಬಿದ್ದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಮೂಡಲಗಿ ಠಾಣಾ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ತಕ್ಷಣವೇ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಿದ ಪೊಲೀಸರು, ಸ್ವಾಮೀಜಿ ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಸ್ವಾಮೀಜಿ ಯಾವುದೇ ಕಾರಣಕ್ಕೂ ಮಠದಲ್ಲಿ ಇರಬಾರದೆಂದು ಸ್ಥಳೀಯರು ಆಗ್ರಹಿಸಿದ ಹಿನ್ನೆಲೆ ಸ್ವಾಮೀಜಿ ಮಠವನ್ನು ಬಿಟ್ಟು ತೆರಳಿದ್ದಾರೆ.





