ಬಡವರ ಪಿಂಚಣಿ ರದ್ದುಗೊಳಿಸಿದರೆ ಜೋಕೆ- ಸರಕಾರಕ್ಕೆ ಸಂಸದ ಕೋಟ ಎಚ್ಚರಿಕೆ

ಉಡುಪಿ: ಸಂವಿಧಾನದ 73 ನೇ ತಿದ್ದುಪಡಿಗೆ ಪೂರಕವಾಗಿ ಗ್ರಾಮ ಪಂಚಾಯಿತಿಗಳಲ್ಲಿ ನೀಡುತ್ತಿರುವ ಏಕ ವಿನ್ಯಾಸ ನಕ್ಷೆ (9/11) ಹಕ್ಕನ್ನು ಕಸಿದು ಕಾಂಗ್ರೇಸ್ ನೇತೃತ್ವದ ಸರಕಾರ ನಗರ ಪ್ರಾಧಿಕಾರಕ್ಕೆ ನೀಡಿದ್ದನ್ನು ಖಂಡಿಸಿ ಮತ್ತು ಸದ್ರಿ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ಮರಳಿ ನೀಡಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಭಾರತೀಯ ಜನತಾ ಪಕ್ಷ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಎದುರು ಇಂದು ಪ್ರತಿಭಟನೆ ನಡೆಸಿದೆ.

ಉಡುಪಿ ಜಿಲ್ಲೆಯ, ಕೋಟ, ಕೋಟತಟ್ಟು, ಸಾಲಿಗ್ರಾಮ ಮುಂತಾದ ಪಂಚಾಯತ್‌ನ ಎದುರು ನಡೆದ ಬಿ.ಜೆ.ಪಿ ಸಭೆಯನುದ್ದೇಶಿ ಮಾತನಾಡಿದ ಸಂಸದ ಕೋಟ ಸಂವಿಧಾನದ 73ನೇ ತಿದ್ದುಪಡಿಯ ಮುಖ್ಯ ಆಶಯದಂತೆ, ಅಧಿಕಾರ ವಿಕೇಂದ್ರೀಕರಣವಾಗಿ ಇಂತಹ ಆಡಳಿತಾತ್ಮಕ ಹಕ್ಕನ್ನು ಗ್ರಾಮ ಪಂಚಾಯತಿ ಹೊಂದಿರುತ್ತದೆ. ಮತ್ತು ಇಲ್ಲಿಯವರೆಗೆ 9/11 ನೀಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳು ವ್ಯವಸ್ಥಿತವಾಗಿ ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲವಾಗಿದೆ. ಆದರೆ, ರಾಜ್ಯ ಸರ್ಕಾರ ಸುತ್ತೋಲೆಯ ಮೂಲಕ ನಗರ ಪ್ರಾಧಿಕಾರಕ್ಕೆ 9/11 ನೀಡಬೇಕೆಂದು ಮಾಡಿರುವ ತೀರ್ಮಾನದ ಹಿಂದೆ ಗ್ರಾಮ ಪಂಚಾಯಿತಿಗಳ ಶಾಸನಬದ್ದ ಹಕ್ಕನ್ನು ಕÀಸಿವ ಸಂಚು ಅಡಗಿದೆ ಇದನ್ನು ಬಿ.ಜೆ.ಪಿ ವಿರೋಧಿಸುತ್ತಿದೆ. ತಕ್ಷಣ 9/11 ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಬೇಕೆಂದು ಆಗ್ರಹಿಸಿದರು.

ಅಲ್ಲದೇ, ಸರಕಾರದ ನಗರಾಭಿವೃದ್ಧಿ ಇಲಾಖೆ ನೀಡಿದ ಈ ಆದೇಶದಿಂದ ಪ್ರಾಧಿಕಾರಗಳ ಎದುರು ಸಾರ್ವಜನಿಕರು ಕಾದು ಕುಳಿತು ನಿರಾಶರಾಗಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರತಿ 9/11 ಗೆ ವಿಪರೀತ ಲಂಚದ ಆರೋಪ ಕೇಳಿ ಬರುತ್ತಿದ್ದು, ಭ್ರಷ್ಟಾಚಾರ ತಾಂಡವಾಡುತ್ತಿದೆ. ಕೇವಲ ಉಡುಪಿ ಪ್ರಾಧಿಕಾರ ಒಂದರಲ್ಲೆ 10,000ಕ್ಕೂ ಹೆಚ್ಚು ಕಡತಗಳು ನೆನೆ ಗುದಿಗೆ ಬಿದ್ದಿವೆ. ಈ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡು ತಕ್ಷಣ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.

ದುರಾದೃಷ್ಟಕ್ಕೆ ಈಗಿನ ಸರಕಾರ ರಾಜ್ಯದಲ್ಲಿ 9 ಲಕ್ಷಕ್ಕೂ ಮೀರಿ ವೃದ್ಧಾಪ್ಯ ವೇತನ, 14 ಲಕ್ಷ ಸಂಧ್ಯಾ ಸುರಕ್ಷಾ ಪುನರ್ ಪರಿಶೀಲಿಸುವ ಹೆಸರಲ್ಲಿ ಬಡವರ ಸಂಧ್ಯಾಕಾಲದ ಪಿಂಚಣಿ ತಡೆಹಿಡಿಯಲು ಹೊರಟಿದೆ. ಇಂತಹ ಬಡವರ ಪಿಂಚಣಿಯನ್ನು ಯಾವುದೇ ಕಾರಣಕ್ಕೆ ರದ್ದುಗೊಳಿಸದೆ, ತಮ್ಮ ಸರಕಾರ ಕೊಟ್ಟಿರುವ ಪರಿಶೀಲನಾ ಆದೇಶವನ್ನು ರದ್ದು ಮಾಡಬೇಕೆಂದು ಕೋಟ ಮನವಿ ಮಾಡಿದರು.

ನಿನ್ನೆ ಮೊನ್ನೆ ಆಳುವ ಪಕ್ಷದ ಶಾಸಕ ಬಿ.ಆರ್ ಪಾಟೀಲ್ ಹೇಳಿಕೆಯ ಮೂಲಕ ಇಡೀ ರಾಜ್ಯದಾದ್ಯಂತ ಹಬ್ಬಿದ ಸುದ್ದಿಯಂತೆ, ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರಕಾರ ನೀಡುತ್ತಿರುವ ವಸತಿ ಯೋಜನೆಯ ಹಣ ನೀಡಲು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಬಡವರಿಂದ ಹಣ ವಸೂಲಿ ಮಾಡುತ್ತಿವೆ. ರಾಜ್ಯದ ಇತಿಹಾಸದಲ್ಲಿ ಇಂತಹ ಕೆಟ್ಟ ನಡವಳಿಕೆ ನಡೆದಿರಲಿಲ್ಲ. ತಕ್ಷಣ ವಸತಿ ಫಲಾನುಭವಿಗಳಿಂದ ಲಂಚ ಪಡೆಯುತ್ತಿರುವವರ ಮೇಲೆ ಕ್ರಮ ಕೈಗೊಂಡು ವಿಶೇಷ ತನಿಖಾದಳದ ಮೂಲಕ ತನಿಖೆ ನಡೆಸಬೇಕೆಂದು ಕೋಟ ಆಗ್ರಹಿಸಿದರು.

ಅಲ್ಲದೇ, ಬಡವರಿಗೆ ತಲುಪಬೇಕಾದ ನಮೂನೆ 50, 53, 57 ಮತ್ತು 94ಸಿ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿ ಇಂದು ಅವಳಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಇಡೀ ರಾಜ್ಯದಾದ್ಯಂತ ವಿಸ್ತರಿಸುವ ಎಚ್ಚರಿಕೆ ನೀಡಿ ಸಮಸ್ಯೆಯನ್ನು ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಬಿ.ಜೆ.ಪಿ ಮುತ್ತಿಗೆ ಹಾಕಲಿದೆ ಎಂದು ಕೋಟ ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!