ಭಾರತ ಪಾಕಿಸ್ತಾನ ನಡುವಿನ ಯುದ್ಧವನ್ನು ನಾನು ನಿಲ್ಲಿಸಿದೆ: ಟ್ರಂಪ್
ವಾಷಿಂಗ್ಟನ್: ಪಹಲ್ಗಾಮ್ ನಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕ್ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿತು. ಬಳಿಕ ಯುದ್ಧದ ವಾತಾವರಣ ನಿರ್ಮಾಣವಾಗಿ ಬಳಿಕ ಕದನ ವಿರಾಮ ಘೋಷಿಸಲಾಯಿತು. ಕದನ ವಿರಾಮ ಘೋಷಣೆಯಲ್ಲಿ ಡೊನಾಲ್ಡ್ ಟ್ರಂಪ್ ಪಾತ್ರ ಏನೂ ಇಲ್ಲ, ಪಾಕ್ ವಿನಂತಿಯ ಮೇರೆಗೆ ಯುದ್ಧವನ್ನು ನಿಲ್ಲಿಸಲಾಯ್ತು ಎಂದು ಈಗಾಗಲೇ ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ. ಆದರೂ ಕೂಡ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಮತ್ತೆ ಪ್ರಸ್ತಾಪಿಸಿದ್ದು, ಕದನ ವಿರಾಮ ನನ್ನಿಂದಲೇ ಘೋಷಣೆ ಆಯ್ತು ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಪ್ರಧಾನಿ ಮೋದಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದಲ್ಲಿ ಅಮೆರಿಕವು ಮಧ್ಯಸ್ಥಿಕೆ ವಹಿಸಿಲ್ಲ. ಪಾಕ್ ವಿನಂತಿಯ ಮೇರೆಗೆ ಕದನ ವಿರಾಮ ಘೋಷಿಸಲಾಗಿದೆ ಎಂದಿದ್ದಾರೆ.
ಶ್ವೇತಭವನದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೊಂದಿಗಿನ ಔತಣಕೂಟಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, “ನಾನು ಭಾರತ ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದೆ. ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ. ಮೋದಿ ಅದ್ಭುತ ವ್ಯಕ್ತಿ ಎಂದು ನಾನು ಭಾವಿಸಿದ್ದೇನೆ. ಸಂಘರ್ಷವನ್ನು ನಿಯಂತ್ರಿಸುವಲ್ಲಿ ಮುನೀರ್ ಮತ್ತು ಮೋದಿ ಇಬ್ಬರೂ ಅತ್ಯಂತ ಪ್ರಭಾವಶಾಲಿ ಎಂದು ಉಲ್ಲೇಖಿಸಿದ್ದಾರೆ. ಎರಡೂ ಕೂಡ ಪರಮಾಣು ರಾಷ್ಟ್ರಗಳು. ನಾನು ಅವರ ನಡುವಿನ ಯುದ್ಧ ನಿಲ್ಲಿಸಿದೆ” ಎಂದು ಮತ್ತೆ ಪುನರುಚ್ಛರಿಸಿದ್ದಾರೆ,





