ಶಾಲಾ ವಾಹನ ಅಪಘಾತ ತಡೆಗೆ ಕುಂದಾಪುರ ಸಂಚಾರಿ ಪೊಲೀಸರ ಕಾರ್ಯಾಚರಣೆ
ಕುಂದಾಪುರ: ಇತ್ತೀಚೆಗೆ ಶಾಲಾ ವಾಹನ ಅಪಘಾತಕ್ಕೊಳಗಾಗುವ ಸುದ್ದಿಗಳು ಸಾಕಷ್ಟು ಕೇಳಿ ಬರುತ್ತಿದೆ. ಅದಲ್ಲದೇ ಶಾಲಾ ವಾಹನ ಹಾಗೂ ಆಟೋರಿಕ್ಷಾದಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕುಳ್ಳಿರಿಸಿಕೊಂಡು ಹೋಗುವುದು ಇವೆಲ್ಲವನ್ನೂ ತಡೆಯುವ ನಿಟ್ಟಿನಲ್ಲಿ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸಾದ್ ತಂಡ ಇಂದಿನಿಂದ ಕಾರ್ಯಾಚರಣಗೆ ಇಳಿದಿದ್ದಾರೆ.
ಈ ಬಗ್ಗೆ ಶಾಲಾ ವಾಹನಗಳು, ಆಟೋ ರಿಕ್ಷಾಗಳ ಚಾಲಕ ಮತ್ತು ಮಾಲಕರ ಜೊತೆ ನಡೆಸಿದ ಕುಂದಾಪುರ ಸಂಚಾರಿ ಪೊಲೀಸರು, ಮಿತಿಮೀರಿದ ಮತ್ತು ಅಪಾಯಕಾರಿ ಸ್ಥಿತಿಯಲ್ಲಿ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿರುವ ಆಟೋರಿಕ್ಷಾ ಮತ್ತು ಶಾಲಾ ವಾಹನಗಳನ್ನು ತಡೆದು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇದೇ ರೀತಿಯ ಕೃತ್ಯಗಳು ಮುಂದುವರಿದರೆ ಅಥವಾ ಮರುಕಳಿಸಿದರೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.
ಇನ್ನು, ಇಂತಹ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಶಾಲಾ ವಾಹನಗಳು ಮತ್ತು ಆಟೋ ರಿಕ್ಷಾಗಳ ವಿರುದ್ಧ ತಕ್ಷಣ ಕ್ರಮಕ್ಕೆ ಮುಂದಾಗಿರುವ ಪೊಲೀಸರು, ಶಾಲಾ ವಾಹನಗಳಲ್ಲಿ 55ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕೊಂಡೊಯ್ದರೆ ಅಂತಹ ಶಾಲಾ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ ಎನ್ನಲಾಗಿದೆ.





