ಆಸ್ತಿ ಕಬಳಿಕೆಗೆ ತಮ್ಮನಿಗೆ ಹುಚ್ಚನ ಹಣೆಪಟ್ಟಿ ಕಟ್ಟಿ ಚಿತ್ರ ಹಿಂಸೆ: ದೂರು ದಾಖಲು
ಬಂಟ್ವಾಳ: ತಮ್ಮನಿಗೆ ಹುಚ್ಚನ ಹಣೆಪಟ್ಟಿ ಕಟ್ಟಿ ಆಶ್ರಮಕ್ಕೆ ಸೇರಿಸಿ ಅಲ್ಲಿನ ಕೋಣೆಯಲ್ಲಿ ಕೂಡಿ ಹಾಕಿ ಶೌಚಾಲಯದ ನೀರು ಕುಡಿಸಿ, ಚಿತ್ರ ಹಿಂಸೆ ನೀಡಿ ಆಸ್ತಿ ಕಬಳಿಸುವ ಯತ್ನ ನಡೆಸಿದ್ದಾರೆ ಎಂದು ವ್ಯಕ್ತಿಯೋರ್ವರು ಅಣ್ಣಂದಿರ ವಿರುದ್ಧ ದೂರು ನೀಡಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬರಿಮಾರು ಗ್ರಾಮದ ಪುರುಷಕೋಡಿ ನಿವಾಸಿ ವಲೇರಿಯನ್ ಲಸ್ರಾದೊ(51) ತನ್ನ ಅಣ್ಣಂದಿರ ವಿರುದ್ಧ ದೂರು ನೀಡಿರುವ ವ್ಯಕ್ತಿ.
ಆಸ್ತಿ ಕಬಳಿಕೆ ಮಾಡುವ ಉದ್ದೇಶದಿಂದ ವೀಲುನಾಮೆ ದಾಖಲೆಯನ್ನು ಸೃಷ್ಟಿಸಿ, ವಂಚನೆ , ವಿಶ್ವಾಸದ್ರೋಹ, ಪ್ರಾಣಬೆದರಿಕೆ ಹಾಗೂ ಸುಲಿಗೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಹೋದರರಾದ ಬೆನಡಿಕ್ಟ್ ಲಸ್ರಾದೊ (64) ಹಾಗೂ ಫೆಡ್ರಿಕ್ ಲಸ್ರಾದೊ (59) ಇಬ್ಬರೂ ಒಟ್ಟಾಗಿ ವಲೆರಿಯನ್ ಲಸ್ರಾದೊ ಅವರಿಗೆ ಮದ್ಯಾಪಾನ ಮಾಡಿಸಿ, ಮನವೊಲಿಸಿ ಬರಿಮಾರು ಗ್ರಾಮದ ಸರ್ವೇ ನಂಬರ್ 51/5 ರಲ್ಲಿ 2,78 ಎಕ್ರೆ ವಿಸ್ತೀರ್ಣದ ಜಮೀನನ್ನು ವಿಟ್ಲ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜೆಸ್ಟ್ರೆಡ್ ವೀಲುನಾಮೆ ಯಾನೆ ಮರಣ ಶಾನ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಹೋದರರ ಕೈಗೆ ರಿಜೆಸ್ಟ್ರೆಡ್ ವೀಲುನಾಮೆಯ ಮೂಲ ಪ್ರತಿ ದೊರಕಿದ ನಂತರ ಹುಚ್ಚನೆಂಬ ಹಣೆಪಟ್ಟಿ ಕಟ್ಟಿ ಉಡುಪಿ ಆಶ್ರಮವೊಂದಕ್ಕೆ ಬಲತ್ಕಾರವಾಗಿ ಸೇರಿಸಿ ಉಳಿತಾಐ ಖಾತೆಯಿಂದ ಎಟಿಎಂ ಮುಖಾಂತರ ಹಂತ ಹಂತವಾಗಿ 1.50 ಲಕ್ಷ ರೂ.ಗಳನ್ನು ಡ್ರಾ ಮಾಡಿದ್ದಾರೆ. ಅಲ್ಲದೇ 8 ತಿಂಗಳುಗಳ ಕಾಲ ತನ್ನನ್ನು ಒಂದು ರೂಮಿನಲ್ಲಿ ಬಲತ್ಕಾರವಾಗಿ ಕೂಡಿ ಹಾಕಿ, ಶೌಚಾಲಯದ ನೀರನ್ನು ಕುಡಿಸಿ, ವಿವಿಧ ರೀತಿಯಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿದ್ದಾರೆ. ನನ್ನ ಹೆಸರಿನಲ್ಲಿದ್ದ ಮನೆ ಹಾಗೂ ಜಮೀನನ್ನು ತಮ್ಮ ಸ್ವಾಧೀನದಲ್ಲಿ ಬಲತ್ಕಾರವಾಗಿ ಇಟ್ಟುಕೊಂಡಿರುವ ಸಹೋದರರು ತನ್ನ ಜಮೀನಿನಲ್ಲಿ ಕಳೆದ ಮೂರು ವರ್ಷಗಳಿಂದ ಬೆಳೆದ 45 ಕ್ವಿಂಟಲ್ ಗಳಿಂತಲೂ ಅಧಿಕ ಅಡಿಕೆಯನ್ನು ಮಾರಾಟ ಮಾಡಿ ಯಾವುದೇ ಹಣ ನೀಡದೇ 15 ಲಕ್ಷ ರೂ. ಗಿಂತ ಹೆಚ್ಚಿನ ನನ್ನ ಹಣದಿಂದ ಅವರು ಕಾರು ಹಾಗೂ ವಸ್ತುಗಳನ್ನು ಖರೀದಿಸಿದ್ದಾರೆ. ನನ್ನ ಸಂಪೂರ್ಣ ಆಸ್ತಿ ಮತ್ತು ಹಣವನ್ನು ನನಗೆ ವಾಪಾಸ್ ನೀಡಬೇಕು. ನನ್ನ ಕೊಲೆಯಾದಲ್ಲಿ ಸಹೋದರರೇ ಹೊಣೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





