ಕೇರಳ: ತನ್ನ ಪ್ರೀತಿ ಉಳಿಸಲು ಪ್ರೇಯಸಿಯನ್ನ 10 ವರ್ಷಗಳ ಕಾಲ ಕೊಠಡಿಯಲ್ಲಿ ಕೂಡಿಟ್ಟ ಪಾಗಲ್ ಪ್ರೇಮಿ

ಪಾಲಕ್ಕಾಡ್ ಜೂ.10: ಪ್ರೇಮಿಗಳು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಏನೆಲ್ಲಾ ಕಸರತ್ತು ಮಾಡುತ್ತಾರೆ. ಆದರೆ ಇಲ್ಲೊಬ್ಬ ಪಾಗಲ್ ಪ್ರೇಮಿ ತನ್ನ ಪ್ರೀತಿಯ ಉಳಿಸಿಕೊಳ್ಳಲು ತನ್ನ ಮನೆಯ ಕೊಠಡಿಯಲ್ಲಿ ಯಾರಿಗೂ ತಿಳಿಯದಂತೆ ತನ್ನ ಪ್ರೇಯಸಿಯನ್ನ ಬರೋಬ್ಬರಿ 10 ವರ್ಷಗಳ ಕಾಲ ಬಚ್ಚಿಟ್ಟು ತನ್ನ ಪ್ರೀತಿಯನ್ನುಕಾಪಾಡಿದ್ದ.
ಘಟನೆ ಕೇರಳ ದಲ್ಲಿ ನಡೆದಿದ್ದು, ರಹ್ಮಾನ್(34 ) ಎಂಬ ಯುವಕ ತಾನು ಪ್ರೀತಿಸಿದ ಯುವತಿ ಸಜಿತಾ (28) ಇಬ್ಬರೂ ಪಾಲಕ್ಕಾಡ್‌ ಸಮೀಪದ ಅಯಿಲೂರಿನ ನಿವಾಸಿಗಳಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಂತರ್‌ ಧರ್ಮೀಯವಾದ ಕಾರಣ ತಮ್ಮ ಪ್ರೀತಿಯನ್ನು ಕುಟುಂಬಸ್ಥರು ಒಪ್ಪುವುದಿಲ್ಲವೆಂದು ತಿಳಿದು 2010 ರ ಫೆ. 2 ರಂದು ಸಜಿತಾ ಮನೆಯಿಂದ ತೆರಳಿದ್ದಳು ಎನ್ನಲಾಗಿದೆ. ಈ ವೇಳೆ ರಹ್ಮಾನ್‌ ಆಕೆಯನ್ನು ತನ್ನ ಮನೆಗೆ ಕರೆತಂದು ಯಾರಿಗೂ ತಿಳಿಯದಂತೆ ಕೊಠಡಿಯಲ್ಲಿ ಬಚ್ಚಿಟ್ಟಿದ್ದ ಎನ್ನಲಾಗಿದೆ. ಈ ನಡುವೆ ದಿನಂಪ್ರತಿ ಆಕೆಗೆ ಆಹಾರ ಒದಗಿಸುತ್ತಿದ್ದು, ನಿತ್ಯ ಕ್ರಿಯೆಗೆ ಮಾತ್ರ ರಾತ್ರಿ ಕೊಠಡಿಯಿಂದ ಹೊರ ಬರುತ್ತಿದ್ದಳು

ಅಲ್ಲದೆ ಪ್ರೇಯಸಿ ತನ್ನ ಕೊಠಡಿಯಲ್ಲಿ ಇರುವ ವಿಚಾರ ಯಾರಿಗೂ ತಿಳಿಯದಂತೆ ನೋಡಿಕೊಳ್ಳಲು, ತಾನು ಖಿನ್ನತೆಯಿಂದ ಬಳಲುತ್ತಿದ್ದು, ಯಾರೂ ತನ್ನ ಕೊಠಡಿಗೆ ಬಾರದಂತೆ ಆತ ಅಭಿನಯವನ್ನೂ ಮಾಡಿದ್ದ ಎನ್ನಲಾಗಿದೆ.

ಆದರೆ ರಹ್ಮಾನ್‌ ಇದ್ದಕ್ಕಿದ್ದಂತೆ ನಾಪತ್ತೆಯಾದ್ದು, ಸುಮಾರು ಮೂರು ತಿಂಗಳವರೆಗೆ ಪತ್ತೆಯೇ ಇರದಿದ್ದಾಗ ಮನೆಯವರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ವೇಳೆ ಪೊಲೀಸರು ಚೆಕ್‌ ಪೋಸ್ಟ್‌ ಗಳಲ್ಲಿ ತಪಾಸಣೆ ನಡೆಸುತ್ತಿದ್ದಾಗ ರಹ್ಮಾನ್‌ ನನ್ನು ಪೊಲೀಸರು ಪತ್ತೆಹಚ್ಚಿ ಠಾಣೆಗೆ ಕರೆತಂದು ವಿಚಾರಿಸಿದಾಗ ರಹ್ಮಾನ್ ಅವರ ಈ ವಿಚಾರ ಬೆಳಕಿಗೆ ಬಂದಿದೆ.ಈ ವೇಳೆ ತನ್ನ ಪ್ರೇಮ ಕಥೆಯನ್ನು ಪೊಲೀಸರಿಗೆ ತಿಳಿಸಿದ ರಹ್ಮಾನ್, “ನಾನು ಆಕೆಯನ್ನು ಹತ್ತು ವರ್ಷಗಳ ಕಾಲ ನನ್ನ ಕೊಠಡಿಯಲ್ಲಿ ಬಚ್ಚಿಟ್ಟಿದ್ದೆ. ಬೇರೆ ಮನೆ ಮಾಡಲು ನಮ್ಮಲ್ಲಿ ಹಣವಿರಲಿಲ್ಲ. ಆದರೆ ಮೂರು ತಿಂಗಳ ಹಿಂದೆ ನಾವು ಬೇರೆಯೇ ಬಾಡಿಗೆ ಮನೆ ಮಾಡಿ ವಾಸಿಸಲು ಪ್ರಾರಂಭಿಸಿದೆವು” ಎಂದು ರಹ್ಮಾನ್‌ ಹೇಳಿಕೆ ನೀಡಿದ್ದಾನೆ.

ಸಜಿತಾ ತನ್ನ ಮನೆಯಿಂದ ಹೊರಬಿದ್ದ ಸಂದರ್ಭದಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಲಾಗಿತ್ತು. ಪೊಲೀಸರು ಈ ಕುರಿತು ರಹ್ಮಾನ್‌ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿದ್ದರು. ಬಳಿಕ ಮನೆಯವರು ಆಕೆ ಮತೃಪಟ್ಟಿರಬಹುದೆಂದು ಭಾವಿಸಿ ರೇಶನ್‌ ಕಾರ್ಡ್‌ ನಿಂದ ಹೆಸರನ್ನೂ ತೆರವುಗೊಳಿಸಿದ್ದರು ಎಂದು ತಿಳಿದು ಬಂದಿದೆ. ಇದೀಗ ಆಕೆ ರಹ್ಮಾನ್‌ ಜೊತೆಯಲ್ಲಿ ಜೀವಿಸುತ್ತೇನೆಂದು ಹೇಳಿದ್ದು, ಪೊಲೀಸರು ಎರಡೂ ನಾಪತ್ತೆ ಪ್ರಕರಣಗಳನ್ನು ಕೊನೆಗೊಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!