ಕಟಪಾಡಿ-ಶಿರ್ವ ಮುಖ್ಯ ರಸ್ತೆ ಶೀಘ್ರ ದುರಸ್ತಿಗೆ ಆಗ್ರಹ

ಉಡುಪಿ ಜು.9 (ಉಡುಪಿ ಟೈಮ್ಸ್ ವರದಿ): ಶಿರ್ವ ಕಟಪಾಡಿ ಹೆದ್ದಾರಿ ಹೊಂಡ ಗುಂಡಿಗಳಿಂದ ಕೂಡಿದ್ದು ಇದನ್ನು ಸರಿಪಡಿಸಬೇಕಾದ ಜನಪ್ರತಿನಿಧಿಗಳು ಯಾವುದೇ ಕ್ರಮ ಕೂಗೊಳ್ಳುತ್ತಿಲ್ಲ ಎಂದು ಕಾಪು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜಾ ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಪಿಡಬ್ಲುಡಿ ಅಧೀನದಲ್ಲಿ ಬರುವ ಈ ರಸ್ತೆಯನ್ನು ಶಾಲೆ ಮಕ್ಕಳು ಸೇರಿದಂತೆ ಸಾರ್ವಜನಿಕರು ಸಂಪರ್ಕಕ್ಕಾಗಿ ಬಳಸುತ್ತಾರೆ. ಈ ರಸ್ತೆಯನ್ನು ಶಾಸಕರು ಸಂಸದರು ಉಸ್ತುವಾರಿ ಮಾಡುವ ಹೊಣೆಯನ್ನು ಹೊಂದಿರುತ್ತಾರೆ. ಈ ಹಿಂದೆ  ವಿನಯ್ ಕುಮಾರ್ ಸೊರಕೆ ಅವರು ಶಾಸಕರಾಗಿದ್ದಾಗ ರಸ್ತೆಯನ್ನು ಅಗಲೀಕರಣ ಮಾಡಿ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದರು. ಆದರೆ ಆ ಬಳಿಕ 5 ವರ್ಷಗಳ ವರೆಗೆ ಪ್ಯಾಚ್‌ ವರ್ಕ್ ಮಾಡಿದ್ದು ಬಿಟ್ಟರೆ ಇದು ವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಿರಲಿಲ್ಲ. ಈಗ ಕೈಗೊಂಡಿರುವ ಕಾಮಗಾರಿಯನ್ನು ಸಂಪೂರ್ಣ ಮಾಡದೇ ಅರ್ದಂಬರ್ದ ಮಾಡಿರುತ್ತಾರೆ. ಆದರೆ ಇಷ್ಟೊಂದು ಪ್ರಯೋಜನವಿರುವ ಈ ರಸ್ತೆ ಸರಿಪಡಿಸುವ ಬಗ್ಗೆ ಜನಪ್ರತಿನಿಧಿಗಳು ಆಸಕ್ತಿ ತೋರದೇ ಇರುವುದು ಬೇಸರದ ಸಂಗತಿ ಎಂದಿದ್ದಾರೆ.

ಇದೀಗ ಈ ರಸ್ತೆಯ ಅಲ್ಲಲ್ಲಿ ಹೊಂಡ ಬಿದ್ದಿದ್ದು ನೀರು ತುಂಬಿ ಕೊಂಡಿದೆ. ಅಲ್ಲದೆ ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ರಸ್ತೆಯಲ್ಲೇ ಮಳೆ ನೀರು ಹರಿಯುತ್ತಿದ್ದು ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರು ಭಯದಲ್ಲೇ ಸಂಚರಿಸುತ್ತಿದ್ದಾರೆ. ಈಗಿನ ಶಾಸಕರು ಬಂದು ಒಂದು ವರ್ಷವಾಗಿದೆ. ಅವರಿಗೆ ಅನುದಾನವೂ ಸಿಕ್ಕಿದೆ ಆದರೆ ಈ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಈ ರಸ್ತೆಯನ್ನು ದುರಸ್ಥಿ ಮಾಡಲಾಗದ ಜನಪ್ರತಿನಿಧಿಗಳು ಬೇರೆ ರಸ್ತೆಯನ್ನು ಎಷ್ಟು ರಿಪೇರಿ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. 

ಹಾಗೂ ಈ ರಸ್ತೆಯನ್ನು ಶೀಘ್ರದಲ್ಲೇ ದುರಸ್ತಿ ಪಡಿಸಬೇಕು. ಈ ರಸ್ತೆ ದುರಸ್ಥಿ ಪಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!