ನಾಟಕಗಳಿಂದ ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಯುತ್ತದೆ: ಯಶ್ಪಾಲ್ ಸುವರ್ಣ
ಉಡುಪಿ ಫೆ.29(ಉಡುಪಿ ಟೈಮ್ಸ್ ವರದಿ): ನಾಟಕಗಳ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಹರಡುವ ಕೆಲಸಗಳಾಗುತ್ತಿವೆ ಎಂದು ಶಾಸಕ ಯಶ್ಪಾಲ್ ಸುವರ್ಣ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಉಡುಪಿಯ ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ 5ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ವಿ.ಎಸ್. ಆಚಾರ್ಯರ ಕಲ್ಪನೆಯಲ್ಲಿ ಭುಜಂಗಪಾರ್ಕ್‌ನಲ್ಲಿ ಬಯಲು ರಂಗಮಂದಿರ ನಿರ್ಮಾಣಗೊಂಡಿತ್ತು. ಆದರೆ, ಈ ಬಯಲು ರಂಗಮಂದಿರವನ್ನು ಸುಮನಸಾ ಸಂಸ್ಥೆ ಬಿಟ್ಟು ಬೇರೆಯವರು ಬಳಸದೇ ಇರುವುದು ಬೇಸರದ ಸಂಗತಿ ಎಂದರು. ಹಾಗೂ ಸುಮನಸಾ ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದು, ರಾಜ್ಯದೆಲ್ಲೆಡೆ ಇಲ್ಲಿನ ಪ್ರತಿಭೆಗಳು ಬೆಳಗುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಅಚ್ಯುತ್ ಅಮೀನ್ ಅವರು ಮಾತನಾಡಿ, ಸಮಾಜದ, ನಮ್ಮ ಸಂಸ್ಕೃತಿಯ ಪ್ರತಿಬಿಂಬವೇ ರಂಗಭೂಮಿ. ಅದರಂತೆ ಸುಮನಸಾ ಕಾರ್ಯನಿರ್ವಹಿಸುತ್ತಿದ್ದು, ಸಾಂಸ್ಕೃತಿಕ ಮಾತ್ರವಲ್ಲ, ಸಾಮಾಜಿಕ ಸಹಿತ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ನಟರು, ನಿರ್ದೇಶಕರು ಉತ್ತಮ ಸಾಧನೆ ಮಾಡಿದರೆ, ಅದು ಪ್ರೇಕ್ಷಕರಿಗೆ ತಲುಪಿದರೆ ರಂಗಭೂಮಿ ಯಶಸ್ವಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಅತ್ಯಂತ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಸಮನ್ವಯ ಸರ್ವಧರ್ಮ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ ಅವರು ಮಾತನಾಡಿ, ಆಧುನಿಕ ಕಾಲದಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್ ಇದೆ. ಎಲ್ಲವನ್ನೂ ಮೊಬೈಲ್‌ನಲ್ಲಿಯೇ ನೋಡುತ್ತಾರೆ. ಆದರೆ, ರಂಗಭೂಮಿ ನೀಡುವ ಸಂದೇಶ ಅವುಗಳಲ್ಲಿ ಸಿಗುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದ ಪಾಂಡುರಂಗ ಪ್ರಭು ಪರ್ಕಳ ಅವರಿಗೆ ರಂಗಸಾಧಕ ಸನ್ಮಾನ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ವೇಳೆ ‘ನಮ ತುಳುವೆರ್ ಸಂಘಟನೆ’ ತಂಡದಿಂದ ”ಅಂಬೆ” ನಾಟಕ ಪ್ರದರ್ಶನಗೊಂಡಿತು.
ಈ ಸಂದರ್ಭದಲ್ಲಿ ಮಧುಕರ್ ಎಂಜಿನಿಯರಿಂಗ್ ವರ್ಕ್ಸ್ ಮಾಲೀಕ ಮಂಜುನಾಥ್ ಜತ್ತನ್, ಉದ್ಯಮಿ ಗುರುವ ಸುವರ್ಣ, ಉದ್ಯಮಿ ಮಹಾಬಲ ಸಾಲ್ಯಾನ್, ಪೌರಾಯುಕ್ತ ರಾಯಪ್ಪ, ರಾಷ್ಟ್ರೀಯ ಬಿಲ್ಲವ ಮಹಾಮಂಡಳ ಉಡುಪಿ ಅಧ್ಯಕ್ಷ ಚಂದ್ರಶೇಖರ ಕಾಪು, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಪ್ರವೀಣ್ ಜಿ. ಕೊಡವೂರು, ಹರೀಶ್ ಅಂಬಲಪಾಡಿ ಉಪಸ್ಥಿತರಿದ್ದರು.
ನಾಗೇಶ್ ಸ್ವಾಗತಿಸಿದರು. ದಿವಾಕರ ಕಟೀಲು ವಂದಿಸಿದರು. ಪ್ರವೀಣ್‌ಚಂದ್ರ ಕಾರ್ಯಕ್ರಮ ನಿರೂಪಿಸಿದರು.