ಮಣಿಪಾಲ್ ಮ್ಯಾರಥಾನ್‍ಗೆ ಡಿಕೆಎಂಎಸ್ ಬಿಎಂಎಸ್‍ಟಿ ಫೌಂಡೇಶನ್ ಇಂಡಿಯಾ ಸಾಥ್

ಉಡುಪಿ ಫೆ.9 (ಉಡುಪಿ ಟೈಮ್ಸ್ ವರದಿ): ರಕ್ತದ ಕ್ಯಾನ್ಸರ್ ಮತ್ತು ರಕ್ತದ ಕಾಂಡಕೋಶ (ಬ್ಲಡ್ ಸ್ಟೆಮ್ ಸೆಲ್) ದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆ ಡಿಕೆಎಂಎಸ್ ಬಿಎಂಎಸ್‍ಟಿ ಫೌಂಡೇಶನ್ ಇಂಡಿಯಾ, ಮಣಿಪಾಲ್ ಮ್ಯಾರಥಾನ್ 2024ರ ಜೊತೆಗೆ ಕೈಜೋಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ, ಡಿಕೆಎಂಎಸ್ ಬಿಎಂಎಸ್‍ಟಿ ಫೌಂಡೇಶನ್ ಇಂಡಿಯಾದ ಸಿಇಒ ಪ್ಯಾಟ್ರಿಕ್ ಪೌಲ್ ಅವರು, ಭಾರತದಲ್ಲಿ ಸ್ಟೆಮ್ ಸೆಲ್ ದಾನಿಗಳ ಕೊರತೆಯನ್ನು ಪರಿಹರಿಸುವ ಅಗತ್ಯವಿದೆ.“ಭಾರತದಲ್ಲಿ, ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಜನರು ರಕ್ತದ ಕ್ಯಾನ್ಸರ್ ಅಥವಾ ತತ್ಸಂಬಂಧಿ ಕಾಯಿಲೆಗೆ ಗುರಿಯಾಗುತ್ತಿದ್ದಾರೆ. ಅವರಿಗೆ ಯಶಸ್ವಿಯಾಗಿ ರಕ್ತದ ಸ್ಟೆಮ್ ಸೆಲ್ ಕಸಿ ಮಾಡಿಸಿಕೊಳ್ಳಲು ಸರಿಯಾದ ಎಚ್‍ಎಲ್‍ಎ ಹೊಂದಾಣಿಕೆಯಾಗುವ ದಾನಿ ಬೇಕಾಗುತ್ತದೆ. ದುರಾದೃಷ್ಟವಶಾತ್, ಕೇವಲ ಶೇ 0.03ರಷ್ಟು ಭಾರತೀಯರು ಮಾತ್ರ ರಕ್ತದ ಕಾಂಡಕೋಶದ ದಾನಿಗಳಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಭಾರತೀಯ ಮೂಲದ ರೋಗಿಗಳು ಮತ್ತು ದಾನಿಗಳಿಗೆ ವಿಶಿಷ್ಟವಾದ ಎಚ್‍ಎಲ್‍ಎ ಅಂದರೆ ಹ್ಯೂಮನ್ ಲ್ಯೂಕೊಸೈಟ್ ಆಂಟಿಜೆನ್ ಇದೆ. ಇದು ಜಾಗತಿಕ ಡೇಟಾಬೇಸ್‍ನಲ್ಲಿ ಅಷ್ಟೇನೂ ಪ್ರಮುಖವಾಗಿ ಸಿಗುವುದಿಲ್ಲ. ಹಾಗಾಗಿ ಸೂಕ್ತವಾದ ದಾನಿಯನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ. ಭಾರತ ಯುವ ದೇಶವಾಗಿದ್ದು, ರಕ್ತದ ಕಾಂಡಕೋಶ ದಾನದ ಬಗ್ಗೆ ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ” ಎಂದು ಹೇಳಿದರು.

ಈ ವೇಳೆ ಮಣಿಪಾಲ್ ಅಕಾಡೆಮಿ ಆಪ್ ಹೈಯರ್ ಎಜುಕೇಶನ್ ಪ್ರೋ. ಚಾನ್ಸಲರ್ ಡಾ. ಎಚ್. ಎಸ್. ಬಲ್ಲಾಳ್ ಅವರು ಮಾತನಾಡಿ, “ಈ ಬಾರಿಯ ಮಣಿಪಾಲ್ ಮ್ಯಾರಥಾನ್‍ಗೆ ಡಿಕೆಎಂಎಸ್ ಬಿಎಂಎಸ್‍ಟಿ ಫೌಂಡೇಶನ್ ಇಂಡಿಯಾ ಕೈ ಜೋಡಿಸಿದೆ. ಮ್ಯಾರಥಾನ್‍ನಲ್ಲಿ ರಕ್ತದ ಕಾಂಡಕೋಶ ದಾನದ ಬಗ್ಗೆ, ರಕ್ತದ ಕ್ಯಾನ್ಸರ್ ಮತ್ತು ತತ್ಸಂಬಂಧಿತ ತಲಸ್ಸೇಮಿಯಾ ಇತ್ಯಾದಿ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಡಲಿದ್ದೇವೆ. ಹಾಗೂ ಈ ಸರಳ ಪ್ರಕ್ರಿಯೆಯ ಬಗ್ಗೆ ಇರುವ ಮಿಥ್ಯೆಗಳನ್ನು ನಿವಾರಿಸುವ ಗುರಿಯನ್ನು ನಾವು ಹಾಕಿಕೊಂಡಿದ್ದೇವೆ. ಮ್ಯಾರಥಾನ್‍ನಲ್ಲಿ ಪಾಲ್ಗೊಳ್ಳುವ ಯುವಕರು ಸಂಭವನೀಯ ರಕ್ತಕಾಂಡ ಕೋಶದ ದಾನಿಗಳಾಗಿ ನೋಂದಣಿ ಮಾಡಿಕೊಳ್ಳಬಹುದು ಎಂಬ ಆಶಯ ನಮ್ಮದು” ಎಂದು ಹೇಳಿದರು.

ಉಡುಪಿಯ ಮಾರ್ಕೆಟಿಂಗ್ ಉದ್ಯೋಗಿ ಅಕ್ಷಯ್ ಕುಮಾರ್ ಅವರು ಮಾತನಾಡಿ,“ರಕ್ತದ ಕಾಂಡಕೋಶ ದಾನದ ಬಗ್ಗೆ ಕೆಲವು ಮಿಥ್ಯೆಗಳಿವೆ. ಈ ಪ್ರಕ್ರಿಯೆಯಲ್ಲಿ ದವಡೆಯ ಸ್ವಾಬ್ ಮಾದರಿಗಳನ್ನು ನೀಡುವ ಸರಳ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ದಾನಿಯಾಗಿ ನೋಂದಣಿ ಮಾಡಿಕೊಂಡರೆ ಸಾಕು. ಹೊಸ ತಲೆಮಾರು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟು, ಜೀವಗಳನ್ನು ಉಳಿಸುವ ಭರವಸೆಯ ಆಶಾಕಿರಣವಾಗಿ ದಾನವನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ. ರಕ್ತದ ಕ್ಯಾನ್ಸರ್ ವಿರುದ್ಧದ ಈ ಹೋರಾಟದಲ್ಲಿ ಇದು ಆರೋಗ್ಯಕರ ಹೆಜ್ಜೆಯಾಗಲಿದೆ” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾಹೆಯ ಪ್ರೊ ಉಪಕುಲಪತಿಗಳಾದ ಡಾ. ಶರತ್ ರಾವ್, ಡಾ. ನಾರಾಯಣ್ ಸಭಾಹಿತ್, ಡಾ. ಎನ್ ಎಂ ಶರ್ಮ, ರಿಜಿಸ್ಟ್ರಾರ್ ಡಾ. ಗಿರಿಧರ್ ಕಿ, ಡಿಕೆಎಂಎಸ್ ಬಿಎಂಎಸ್‍ಟಿ ಫೌಂಡೇಶನ್ ಇಂಡಿಯಾದ ಆರೋಹಿ ತ್ರಿಪಾಠಿ ಇನ್ನಿತರರು ಉಪಸ್ಥಿತರಿದ್ದರು.

ಮ್ಯಾರಥಾನ್‍ನಲ್ಲಿ ಸುಮಾರು ಹತ್ತು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಜೀವ ಉಳಿಸುವ ರಕ್ತಕಾಂಡ ಕೋಶದ ದಾನಿಗಳನ್ನು ನೋಂದಣಿ ಮಾಡಿಕೊಳ್ಳುವ ಗುರಿಯನ್ನು ಸಂಸ್ಥೆಯು ಹೊಂದಿದೆ.

ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್‍ನ ಸಹಭಾಗಿತ್ವದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ್ ಮ್ಯಾರಥಾನ್ ಆಯೋಜಿಸಿದೆ. ಮ್ಯಾರಥಾನ್‍ನ 6ನೇ ಆವೃತ್ತಿಗೆ “ವಿ ಆರ್ ವಿತ್ ಯು ಆಲ್ ದಿ ವೇ” ಎಂಬ ಟ್ಯಾಗ್‍ಲೈನ್ ನೀಡಲಾಗಿದ್ದು, ರಕ್ತದ ಕ್ಯಾನ್ಸರ್‍ನಂತಹ ರೋಗಗಳ ವಿರುದ್ಧ ಜಾಗೃತಿಯನ್ನು ಮೂಡಿಸುವ ಉದ್ದೇಶ ಹೊಂದಿದೆ.

Leave a Reply

Your email address will not be published. Required fields are marked *

error: Content is protected !!