ಕೊರೋನಾಕ್ಕಾಗಿ ಸಿದ್ದತೆ ಇಲ್ಲದ ಸರಕಾರ : ಶಾಸಕ ಯು ಟಿ ಖಾದರ್

ಮಂಗಳೂರು ಏ.23 (ಉಡುಪಿ ಟೈಮ್ಸ್ ವರದಿ) : ಕೊರೋನಾಕ್ಕಾಗಿ ಸಿದ್ದತೆ ಇಲ್ಲದ ಸರಕಾರ ಎಂದು ಶಾಸಕ ಯು ಟಿ ಖಾದರ್ ಅವರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸದ್ಯದ ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಸರಕಾರ ಕೈಗೊಂಡಿರುವ ನಿಯಮಗಳ ಕುರಿತು ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಅವರು, ಸರ್ಕಾರ ದಿನಕ್ಕೊಂದು ಆದೇಶ ನೀಡಿ ಗೊಂದಲ ಸೃಷ್ಟಿ ಮಾಡುತ್ತಿದೆ. ಜನರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರ ನಿಯಮಗಳನ್ನು ಆದೇಶ ನೀಡಬೇಕಿತ್ತು. ಆದರೆ ರಾಜ್ಯ ಸರ್ಕಾರ ಅದನ್ನು ಮಾಡಲಿಲ್ಲ. ಕೊರೊನಾ ಎರಡನೇ ಅಲೆಗೆ ಜನರು ಭಯಪಡುತ್ತಿದ್ದು. ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದ್ದಾರೆ.
ಲಾಕ್ ಡೌನ್ ಕೊರೊನಾಗೆ ಮದ್ದಲ್ಲ ಎಂಬುವುದು ತಿಳಿದಿರಲಿ ಎಂದ ಅವರು, ಕಳೆದ ಒಂದೂವರೆ ವರ್ಷಗಳಲ್ಲಿ ಕೊರೋನಾ ಎದುರಿಸಲು ಸಕಲ ಸಿದ್ದತೆಗಳನ್ನು ಸರ್ಕಾರ ಮಾಡಬೇಕಿತ್ತು. ಇದ್ಯಾವುದನ್ನು ಮಾಡದ ಸರ್ಕಾರ ಈಗ ಆತುರಾತುರವಾಗಿ ಲಾಕ್ ಡೌನ್ ಮಾಡಿ ಜನರನ್ನು ಸಂಕಷ್ಟದಲ್ಲಿಟ್ಟಿದ್ದಾರೆ. ಕೊರೋನಾಕ್ಕಾಗಿ ಸರ್ಕಾರ ಯಾವ ವ್ಯವಸ್ಥೆಯನ್ನು ಮಾಡಿದೆ..? ಎಂದು ಸರಕಾರವನ್ನು ಪ್ರಶ್ನಿಸಿದ್ದಾರೆ.
ಜನರು ಆಸ್ಪತ್ರೆಗೆ ಹೋದಾಗ ಸಕಲ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕಿತ್ತು. ಸಮರ್ಪಕವಾಗಿ ವ್ಯಾಕ್ಸಿನೇಷನ್ ಆಗುತ್ತಿಲ್ಲ. ಆನ್‍ಲೈನ್‍ನಲ್ಲಿ ಅರ್ಜಿ ಹಾಕಿ ಅನ್ನುತ್ತಿದ್ದಾರೆ. ಆಸ್ಪತ್ರೆಗೆ ಹೋದಾಗ ಇಲ್ಲ ಅಂತಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಅಂತ್ಯಕ್ರಿಯೆಗಾಗಿ ಜಾಗ ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಡ ಜನರು ಕೊರೋನಾದಿಂದ ಸತ್ತರೆ ಅವರಿಗೆ ಅಂತ್ಯಕ್ರಿಯೆ ಮಾಡಲು ಸರಕಾರ ಸಕಲ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!