ಕಾಪು: ಅಕ್ರಮ ಮರಳು ಸಾಗಾಟ-ಟಿಪ್ಪರ್ ಸಹಿತ ಮರಳು ವಶ

ಕಾಪು ಫೆ.8 (ಉಡುಪಿ ಟೈಮ್ಸ್ ವರದಿ): ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನವೊಂದನ್ನು ಕಾಪು ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇಂದು ಬೆಳಗ್ಗಿನ ಜಾವ ಕಾಪು ಠಾಣಾ ಪೊಲೀಸರು ಮಲ್ಲಾರು ಗ್ರಾಮದ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಂಗಳೂರು ಕಡೆಯಿಂದ ಬಂದ ಟಿಪ್ಪರ್ ವಾಹನದ ಬಾಡಿಯಲ್ಲಿ ನೀರು ಇಳಿಯುತ್ತಿರುವುದನ್ನು ಗಮನಿಸಿ ಮರಳು ಸಾಗಿಸುತ್ತಿರುವ ಅನುಮಾಣದ ಮೇರೆಗೆ ವಾಹನವನ್ನು ಅಡ್ಡಕಟ್ಟಿ ಚಾಲಕನಲ್ಲಿ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಈ ವೇಳೆ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಬಾಡಿಯ ಮಟ್ಟದವರೆಗೆ ಮರಳನ್ನು ತುಂಬಿಸಿರುವುದು ಕಂಡು ಬಂದಿದೆ. ಟಿಪ್ಪರ್ ವಾಹನದ ಚಾಲಕ ರಾಜು ಎಂಬಾತನ ಬಳಿ ವಾಹನದ ಮಾಲೀಕರ ಬಗ್ಗೆ ವಿಚಾರಿಸಿದಾಗ ವಾಹನವು ಕಾರ್ನಾಡು ನಿವಾಸಿ ಮಧುಸೂದನ್ ಎಂಬವವರಿಗೆ ಸೇರಿದ್ದೆಂದು ತಿಳಿದು ಬಂದಿರುತ್ತದೆ. ಹಾಗೂ ಮುಲ್ಕಿ ಹಳದಂಗಡಿ ಪಾವಂಜೆ ದೇವಸ್ಥಾನದ ಹತ್ತಿರದ ಹೊಳೆಯಲ್ಲಿ ಮರಳನ್ನು ತೆಗೆಸಿ ಅದನ್ನು ಮಾರಾಟ ಮಾಡುತ್ತಿರುವ ಬಗ್ಗೆಯೂ ತಿಳಿದು ಬಂದಿರುತ್ತದೆ. ಈ ವೇಳೆ ಪೊಲೀಸರು ಮರಳು ಸಾಗಿಸುತ್ತಿದ್ದ ಟಿಪ್ಪರ್ ಹಾಗೂ ಅದರಲ್ಲಿದ್ದ ಸುಮಾರು 10,000 ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!