ಉಡುಪಿ: ಫೆ.11-ಉಡುಪಿ ‘ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತು’

ಉಡುಪಿ ಫೆ.07 (ಉಡುಪಿ ಟೈಮ್ಸ್ ವರದಿ): ದೇವಸ್ಥಾನಗಳಲ್ಲಿನ ದೇವತಾತತ್ತ್ವವನ್ನು ಕಾಪಾಡಲು ಹಾಗೂ ದೇವಸ್ಥಾನಗಳಲ್ಲಿ ಧರ್ಮಪ್ರಸಾರ ಮಾಡಲು, ಭಕ್ತಾಧಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಹೀಗೆ ವಿವಿಧ ಆಶಯದೊಂದಿಗೆ ಹಿಂದೂ ಜನಜಾಗೃತಿ ಸಮಿತಿ ಮತ್ತು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯುಕ್ತ ಆಶ್ರಯದಲ್ಲಿ `ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು’ ಎಂಬ ಕಾರ್ಯಕ್ರಮವನ್ನು ಫೆ.11 ಉಡುಪಿಯ ಕಿದಿಯೂರು ಹೋಟೆಲ್ ನ ಮಾಧವ ಕೃಷ್ಣ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಚಂದ್ರ ಮೊಗವೀರ ಅವರು ತಿಳಿಸಿದ್ದಾರೆ.

ಇಂದು ಉಡುಪಿಯ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಪರಿಷತ್ತಿನಲ್ಲಿ ಉಡುಪಿ ಜಿಲ್ಲೆಯಿಂದ 300 ಕ್ಕಿಂತ ಹೆಚ್ಚು ಆಮಂತ್ರಿತ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು, ಪುರೋಹಿತರು, ಪ್ರತಿನಿಧಿಗಳು, ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುವ ನ್ಯಾಯವಾದಿಗಳು, ಧಾರ್ಮಿಕ ಚಿಂತಕರು, ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಹಾಗೂ ಈ ದೇವಸ್ಥಾನ ಪರಿಷತ್ತಿನಲ್ಲಿ ಗಣ್ಯರ ಮಾರ್ಗದರ್ಶನ, ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಆಯ್ದ ವಿವಿಧ ವಿಷಯಗಳ ಚರ್ಚಾಕೂಟಗಳು ನಡೆಯಲಿವೆ. ಇದರೊಂದಿಗೆ ‘ದೇವಸ್ಥಾನಗಳನ್ನು ಸನಾತನ ಧರ್ಮಪ್ರಸಾರ ಕೇಂದ್ರಗಳನ್ನಾಗಿಸುವುದು’, ‘ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಮಾಡುವುದು’ ಅನಧಿಕೃತ ಹೆಸರಿನಲ್ಲಿ ದೇವಸ್ಥಾನಗಳನ್ನು ಧ್ವಂಸಗೊಳಿಸುವುದು, ಅನ್ಯಮತೀಯರಿಂದ ದೇವಸ್ಥಾನಗಳ ಭೂಮಿಯ ಅತಿಕ್ರಮಣ ಮತ್ತು ಸರಕಾರವು ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವುದರ ವಿರುಧ್ಧ ಪರಿಹಾರೋಪಾಯ, ದೇವಸ್ಥಾನ ಮತ್ತು ತೀರ್ಥಕ್ಷೇತ್ರಗಳ ಪರಿಸರದಲ್ಲಿ ಮದ್ಯ-ಮಾಂಸ ಇವುಗಳ ನಿಷೇಧ; ದುರ್ಲಕ್ಷಿತ ದೇವಸ್ಥಾನಗಳ ಜೀರ್ಣೋದ್ಧಾರ ಮುಂತಾದ ವಿಷಯಗಳ ಮೇಲೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆರ್ವಾಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ರಮೇಶ ಕಾರ್ಣಿಕ್, ಅಂಬಾಗಿಲು ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಸಹ ಮೊಕ್ತೇಸರ ರಾಜೇಶ್ ಶೇಟ್, ಉಡುಪಿ ಜಿಲ್ಲಾ ಸಮಿತಿ ಸೇವಕರಾದ ವಿಶ್ವನಾಥ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!