ಅಂದು ಮೊಟ್ಟೆ ಎಸೆತ, ಇಂದು ಹೂಮಳೆ- ಇದೇ ಪ್ರಜಾಪ್ರಭುತ್ವದ ಸೌಂದರ್ಯ: ಸಿಎಂ ಸಿದ್ದರಾಮಯ್ಯ
ಮಡಿಕೇರಿ: ಕಳೆದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೊಡಗಿಗೆ ಆಗಮಿಸಿದ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ನಡೆದಿತ್ತು. ಮುಖ್ಯಮಂತ್ರಿಯಾಗಿ ಇಂದು ಜಿಲ್ಲೆಗೆ ಆಗಮಿಸಿದಾಗ ಅವರನ್ನು ವಿರಾಜಪೇಟೆಯಲ್ಲಿ ಹೂವಿನ ಸುರಿಮಳೆಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಇದೇ ವಿಚಾರವನ್ನು ಮುಖ್ಯಮಂತ್ರಿಗಳು ʼಎಕ್ಸ್ʼ ನಲ್ಲಿ ಪೋಸ್ಟ್ ಮಾಡಿದ್ದು, ‘ವಿರೋಧ ಪಕ್ಷದ ನಾಯಕನಾಗಿ ಕೊಡಗಿಗೆ ಬಂದಿದ್ದಾಗ ಕೆಲವು ಕಿಡಿಗೇಡಿಗಳು ನನ್ನ ಮೇಲೆ ಮೊಟ್ಟೆ ಎಸೆದಿದ್ದರು. ಮುಖ್ಯಮಂತ್ರಿಯಾಗಿ ಇಂದು ಬಂದಾಗ ಕೊಡಗಿನ ಸಮಸ್ತ ಸಜ್ಜನ ಜನ ಸಮೂಹ ಪ್ರೀತಿಯ ಹೂಮಳೆಯಲ್ಲಿ ನನ್ನನ್ನು ಮುಳುಗಿಸಿದೆ. ಇದು ಕೊಡಗಿನ ಸಜ್ಜನರ ಗೆಲುವು, ಇದೇ ಪ್ರಜಾಪ್ರಭುತ್ವದ ಸೌಂದರ್ಯ’ ಎಂದು ಮನಬಿಚ್ಚಿ ಹೇಳಿಕೊಂಡಿದ್ದಾರೆ.
ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಹೆಲಿಕಾಫ್ಟರ್ ಮೂಲಕ ವಿರಾಜಪೇಟೆ ಬಳಿಯ ಅಂಬಟ್ಟಿ ಹೆಲಿ ಪ್ಯಾಡ್‍ಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರÀ ಪೊನ್ನಣ್ಣ ಅವರು, ತಮ್ಮದೇ ಕಾರಿನಲ್ಲಿ ಸ್ವತಃ ತಾವೇ ಚಾಲನೆ ಮಾಡಿಕೊಂಡು ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದರು.
ಮುಖ್ಯಮಂತ್ರಿಗಳನ್ನು ಕೊಡಗಿನ ಸಾಂಪ್ರದಾಯಿಕ ಕೊಂಬು ಕೊಟ್ಟ್ ವಾಲಗದೊಂದಿಗೆ ಹಾಗೂ ಆದಿವಾಸಿ ತಂಡ ತಮ್ಮದೇ ಆದ ವಿಶಿಷ್ಟ ವಾದ್ಯದೊಂದಿಗೆ ಸ್ವಾಗತಿಸಿದ್ದು ಗಮನ ಸೆಳೆಯಿತು. ಸಮಾವೇಶದ ಬಳಿಕ ಶಾಸಕ ಪೊನ್ನಣ್ಣ ಅವರು ಕೊಡಗಿನ ವಿಶೇಷ ತಿನಿಸುಗಳನ್ನು ಮುಖ್ಯಮಂತ್ರಿಗಳಿಗೆ ತಾವೇ ಸ್ವತಃ ಉಣಬಡಿಸಿದ್ದು ವಿಶೇಷವಾಗಿತ್ತು.