ಬೈಂದೂರು: ಸೋಲಿನ ಭೀತಿಯಲ್ಲಿ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ-ಗೋಪಾಲ ಪೂಜಾರಿ

ಬೈಂದೂರು, ಮೇ.4: ಸೋಲಿನ ಭೀತಿಯಲ್ಲಿ ಬಿಜೆಪಿ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಪ್ರಚಾರ ಕೈಗೊಂಡಿದ್ದು ಕಾಂಗ್ರೆಸ್‌ ಇದಕ್ಕೆ ತಕ್ಕ ಉತ್ತರ ನೀಡಲಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಅವರು ಹೇಳಿದ್ದಾರೆ.

ಬೈಂದೂರು ಕ್ಷೇತ್ರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,ಬಿಜೆಪಿ ಅಭ್ಯರ್ಥಿ ಬದಲಾವಣೆ ಪ್ರಯೋಗ ಸಂಘ ಪರಿವಾರ ಹಾಗೂ ಮೂಲ ಬಿಜೆಪಿಗರ ನಡುವೆ ಪ್ರತ್ಯೇಕ ಗುಂಪುಮಾಡಿದೆ. ಇದರಿಂದ ಬಿಜೆಪಿ ಕಾರ್ಯಕರ್ತರು ಹುಮ್ಮಸ್ಸು ಕಳೆದುಕೊಂಡಿದ್ದು ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಬಲ ಕಳೆದುಕೊಂಡಿದೆ. ಆದ್ದರಿಂದ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರಚಾರ ಕೈಗೊಂಡಿದೆ ಎಂದಿದ್ದಾರೆ.

ಈ ವೇಳೆ ಮಾತನಾಡಿದ ಪ್ರಚಾರ ಸಮೀತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅವರು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಸುಳ್ಳು ಪ್ರಚಾರ ಮಾಡುವ ಮೂಲಕ ಬಿಜೆಪಿ ರಾಜಕೀಯ ಲಾಭ ಮಾಡಿಕೊಂಡಿದೆ. ಆದರೆ ಈ ಬಾರಿ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ತಂಡ ಬಿಜೆಪಿಯ ಸುಳ್ಳುಗಳಿಗೆ ತಕ್ಕ ಉತ್ತರ ನೀಡಿ ಜನಸಾಮಾನ್ಯರಿಗೆ ವಾಸ್ತವತೆ ತಿಳಿಸಿದೆ. ಹೀಗಾಗಿ ಬಿಜೆಪಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಾಂಗ್ರೆಸ್ ಪಕ್ಷದ ಜನಮೆಚ್ಚಿದ ನಾಯಕ ಗೋಪಾಲ ಪೂಜಾರಿ ಅವರನ್ನು ಎದುರಿಸಲು ಬಿಜೆಪಿ ರಾಷ್ಟ್ರ ಹಾಗೂ ರಾಜ್ಯದ ಎಲ್ಲಾ ನಾಯಕರನ್ನು ಕರೆ ತಂದಿದೆ. ಆದರೆ ಮತದಾರರು ಇಲ್ಲಿನ ಮಣ್ಣಿನ ಮಗನಿಗೆ ಆಶೀರ್ವಾದ ಮಾಡುವ ಮೂಲಕ ಗೋಪಾಲ ಪೂಜಾರಿ ಅವರ ಪರ ನಾವಿದ್ದೇವೆ ಎಂದು ಸಾಬೀತುಪಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಮುಖಂಡ ಪ್ರಕಾಶ್ಚಂದ್ರ ಶೆಟ್ಟಿ ಅವರು, ಬೈಂದೂರು ಬಿಜೆಪಿಯು ಹಿರಿಯ ಮುಖಂಡರು,  ಸುಕುಮಾರ್ ಶೆಟ್ಟಿಯವರನ್ನು ಕಡೆಗಣಿಸಿದೆ. ಶಾಸಕರ ಸಹಕಾರವಿಲ್ಲದೆ ಬಿಜೆಪಿಗೆದ್ದು ತೋರಿಸಬೇಕು ಎಂದು ಪಣತೊಟ್ಟಂತಿದೆ. ಶಾಸಕರು ಪ್ರಚಾರಕ್ಕೆ ಬಂದರೆ ಅವರಿಗೆ ಹಿನ್ನಡೆಯಾಗುತ್ತದೆ ಎನ್ನುವ ಮಾತು ಬಿಜೆಪಿಯವರಿಂದಲೇ ಕೇಳಿಬರುತ್ತಿದೆ. ಸುಕುಮಾರ್ ಶೆಟ್ಟಿ ಅವರ ಕಡೆಗಣನೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು  ಹೇಳಿದರು.

ಹಾಗೂ ಈಗಾಗಲೇ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ವಾರ್ಡ್ ಮಟ್ಟದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದೆ. ಪ್ರತಿ ವಾರ್ಡ್‌ನಲ್ಲೂ ಪ್ರಚಾರದಲ್ಲಿ ಕಾರ್ಯಕರ್ತರು ತಂಡೋಪತಂಡವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿ ಯವರಿಗೆ ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಧರ್ಮದ ನೆನಪಾಗುತ್ತದೆ. ಕಾಂಗ್ರೆಸ್‌ ಅವಧಿಯಲ್ಲಿ ಕೆ.ಗೋಪಾಲ ಪೂಜಾರಿ ಅವರ ಅವಧಿಯಲ್ಲಿ ಸಾವಿರಾರು ದೇವಸ್ಥಾನಗಳ ಜೀರ್ಣೋದ್ದಾರ ನಡೆಸಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್‌ ಮಾತನಾಡಿ, ಬೈಂದೂರು ಕ್ಷೇತ್ರದಲ್ಲಿ ಕೆ.ಗೋಪಾಲ ಪೂಜಾರಿ ಪರ ಅಪಾರ ಒಲವು ಇದೆ. ಅವರ ಕೊನೆಯ ಚುನಾವಣೆಯಾದ ಕಾರಣ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾದ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಲು ಯುವಕರು, ಹಿರಿಯರು ಪಣತೊಟ್ಟಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!