ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಬಜರಂಗದಳವನ್ನು ಬ್ಯಾನ್ ಮಾಡುವ ಧೈರ್ಯ ತೋರಿಸಲಿ- ಗಂಗೊಳ್ಳಿಯಲ್ಲಿ ಬಿ.ವೈ.ರಾಘವೇಂದ್ರ ಸವಾಲು

ಗಂಗೊಳ್ಳಿ ಮೇ.4: ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಬಜರಂಗದಳವನ್ನು ಬ್ಯಾನ್ ಮಾಡುವ ಧೈರ್ಯ ತೋರಿಸಲಿ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಸವಾಲು ಹಾಕಿದ್ದಾರೆ.

ಗಂಗೊಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಪರವಾಗಿ ಬೈಂದೂರು ವಿಧಾನಸಭಾ ಚುನಾವಣಾ ಪ್ರಚಾರದ ಬೃಹತ್ ರೋಡ್ ಶೋದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಕಾಂಗ್ರೆಸ್‌ನವರಿಗೆ ನಾಚಿಕೆ ಯಾಗಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಬಜನಂಗ ದಳವನ್ನು ಬ್ಯಾನ್ ಮಾಡುವುದಾಗಿ ಹೇಳಿದ್ದಾರೆ. ಅವರಿಗೆ ತಾಕತ್ತಿದ್ದರೆ ಬಜರಂಗದಳವನ್ನು ಬ್ಯಾನ್ ಮಾಡುವ ಧೈರ್ಯ ತೋರಿಸಲಿ, ಆಗ ಅವರ ಕೈಗೆ ಬಳೆ ತೊಡಿಸುವ ಕೆಲಸವನ್ನು ಹಿಂದು ಸಂಘಟನೆಗಳ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷದ ವ್ಯಾರಂಟಿ ಮುಗಿದಿದೆ. ಹೀಗಾಗಿ ಅವರು ಕೊಡುವ ಗ್ಯಾರಂಟಿ ಕಾರ್ಡ್‌ಗೆ ಯಾವುದೇ ಬೆಲೆ ಇಲ್ಲ. ಕೇವಲ ಓಟಿಗಾಗಿ ಗ್ಯಾರಂಟಿ ಕಾರ್ಡ್‌ ನೀಡುತ್ತಿದ್ದು, ಜನರನ್ನು ವಂಚಿಸುವ ಪ್ರಯತ್ನ ಇದಾಗಿದೆ. ಇಂದಿರಾ ಗಾಂಧಿ ಕಾಲದಲ್ಲಿ 425 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಆಯ್ಕೆಯಾದರೆ ಪಕ್ಷ ಇದೀಗ 43 ಸ್ಥಾನಗಳಿಗೆ ಸೀಮಿತವಾಗಿದ್ದು, ಕನಿಷ್ಠ ವಿರೋಧ ಪಕ್ಷದ ಸ್ಥಾನಮಾನ ಕೂಡ ಇಲ್ಲ ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಠೇವಣಿ ಸಿಗದ ರೀತಿಯಲ್ಲಿ ಸೋಲಿಸಿ ಭಾರತೀಯ ಜನತಾ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು, ಹಿಂದುಗಳ ಹುಲಿಯಾಗಿ, ಹಿಂದುಗಳ ಧ್ವನಿಯಾಗಿ ಗುರುರಾಜ್ ಗಂಟೆಹೂಳೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಅತ್ಯಧಿಕ ಮತಗಳಿಂದ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಪ್ರವೀಣ್ ನೆಟ್ಟಾರ್, ಶಿವಮೊಗ್ಗದ ಹರ್ಷ ಸೇರಿದಂತೆ ಅನೇಕ ಹಿಂದು ಕಾರ್ಯಕರ್ತರ ರಕ್ತದೊಕುಳಿ ಈ ನೆಲದಲ್ಲಿ ಆಗಿದೆ. ಮುಂದಿನ ದಿನಗಳಲ್ಲಿ ಯಾವನೇ ಒಬ್ಬ ಹಿಂದು ಕಾರ್ಯಕರ್ತರ ರಕ್ತವನ್ನು ಈ ನೆಲದಲ್ಲಿ ಬಿಳದಂತೆ ಮಾಡಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬಾರದು ಎಂದು ಅವರು ಹೇಳಿದರು.

ಈ ವೇಳೆ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟೆಹೊಳೆ ಅವರು ಮಾತನಾಡಿ, ಗಂಗೊಳ್ಳಿ ಶಿವಾಜಿಯ ಪ್ರತಾಪಗಢ ಇದ್ದಂತೆ ಇಲ್ಲಿ ಪ್ರತಿಯೊಂದು ಮನೆಯಲ್ಲೂ ಹಿಂದುತ್ವದ ಕೆಚ್ಚು ಇದೆ. ಬೇರೆ ಕಡೆ ಹೋದರೆ ಹಿಂದುತ್ವವನ್ನು ಹೇಳಿ ಕೊಡಬೇಕಾದರೆ, ಗಂಗೊಳ್ಳಿಯಲ್ಲಿ ಮಾತ್ರ ಹಿಂದುತ್ವದ ಕೆಚ್ಚನ್ನು ತೆಗೆದು ಕೊಂಡು ಹೋಗಬಹುದು. ಶಾಸಕನಾಗಿ ಆಯ್ಕೆಯಾದರೆ ತಾಯಂದಿದ ರಕ್ಷಣೆ, ಗೋಮಾತೆಯ ರಕ್ಷಣೆ ಜೊತೆಗೆ ಪ್ರತಿಯೊಬ್ಬ ಹಿಂದು ಕಾರ್ಯಕರ್ತರ ಬೆನ್ನಿಗೆ ನಿಂತು ಸಮಾಜದ ಪರವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಬೈಂದೂರು ಮಂಡಲ ಬಿಜೆಪಿ ಉಸ್ತುವಾರಿ ಬ್ರಿಜೇಶ್ ಚೌಟ, ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದ ಖಾರ್ವಿ, ತಾ.ಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಶೆಟ್ಟಿಗಾರ್ ತ್ರಾಸಿ, ಬಿಜೆಪಿ ಮುಖಂಡರು, ಗ್ರಾಪಂ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ಗಂಗೊಳ್ಳಿಯ ಶ್ರೀರಾಮಮಂದಿರದ ಬಳಿಯಿಂದ ಗಂಗೊಳ್ಳಿ ಬಂದರು ಬಸ್ ನಿಲ್ದಾಣದ ತನಕ ಸುಮಾರು 2 ಕಿ.ಮೀ. ಬೃಹತ್ ರೋಡ್ ಷೋ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರ ಹಾಗೂ ಯುವ ಕಾರ್ಯಕರ್ತರು ಭಾಗವಹಿಸಿದರು.

ಇನ್ನು ಬೈಂದೂರು ಬಿಜೆಪಿ ಅಭ್ಯರ್ಥಿ ಪರವಾಗಿ ಸಂಸದ ಬಿ.ವೈ ರಾಘವೇಂದ್ರ ಅವರು ಪ್ರಚಾರ ಕೈಗೊಂಡು ಶಿರೂರು ಅಳ್ವೆಗದ್ದೆ, ಪಡುವರಿ, ಅಳಿವೆಕೋಡಿ, ತಾರಾಪತಿ, ಮಡಿಕಲ್ ಉಪ್ಪುಂದ, ಕಿರಿಮಂಜೇಶ್ವರದ ಗಂಗೆಬೈಲು, ನಾವುಂದ, ಮರವಂತೆ, ಬೆಕ್ಕೇರಿ, ಗುಜ್ಜಾಡಿ, ಮತ್ತಿತರ ಕಡೆಗಳಲ್ಲಿ ಮತ ಯಾಚಿಸಿದರು. ಹಾಗೂ ಇದೇ ವೇಳೆ ಪಕ್ಷದ ಪ್ರಮುಖರನ್ನು ಭೇಟಿಯಾಗಿ ಚರ್ಚಿಸಿದರು.

Leave a Reply

Your email address will not be published. Required fields are marked *

error: Content is protected !!