ತಮಿಳುನಾಡು: ಎಐಎಡಿಎಂಕೆ ಸೇರ್ಪಡೆಗೊಂಡ ನೂರು ಬಿಜೆಪಿ ಕಾರ್ಯಕರ್ತರು
ಚೆನ್ನೈ,ಮಾ.24: ಬಿಜೆಪಿ ನಾಯಕತ್ವದ ಬಗ್ಗೆ ನಾವು ಅಸಮಾಧಾನಗೊಂಡಿದ್ದೇವೆ ಎಂದು ಆರೋಪಿಸಿ ನೂರಕ್ಕೂ ಅಧಿಕ ಬಿಜೆಪಿ ಸದಸ್ಯೆಯರು ಎಐಎಡಿಎಂಕೆ ಸೇರ್ಪಡೆ ಗೊಂಡಿದ್ದಾರೆ.
ಚೆಂಗಲ್ಪಟ್ಟು ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಗಂಗಾದೇವಿ ಶಂಕರ್ ನೇತೃತ್ವದಲ್ಲಿ 100 ಬಿಜೆಪಿ ಕಾರ್ಯಕರ್ತೆಯರು ಮಾಜಿ ಸಚಿವ ಚಿನ್ನಯ್ಯ ಅವರ ಉಪಸ್ಥಿತಿಯಲ್ಲಿ ಎಐಎಡಿಎಂಕೆಗೆ ಸೇರ್ಪಡೆಗೊಂಡರು. ತಮಿಳುನಾಡಿನಲ್ಲಿ 13 ಬಿಜೆಪಿ ಪದಾಧಿಕಾರಿಗಳು ಪಕ್ಷವನ್ನು ತೊರೆದು ಎಐಎಡಿಎಂಕೆಗೆ ಸೇರ್ಪಡೆಗೊಂಡ ಬೆನ್ನಲ್ಲೇ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ಬಿಜೆಪಿ ಸದಸ್ಯೆಯರಿಂದ ಈ ಬೆಳವಣಿಗೆ ನಡೆದಿದೆ.
ಈ ಬಗ್ಗೆ ಮಾತನಾಡಿರುವ ಚೆಂಗಲ್ಪಟ್ಟು ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಗಂಗಾದೇವಿ ಶಂಕರ್ ಅವರು, ಬಿಜೆಪಿ ನಾಯಕತ್ವದ ಬಗ್ಗೆ ನಾವು ಅಸಮಾಧಾನಗೊಂಡಿದ್ದೇವೆ. ಪಕ್ಷಕ್ಕಾಗಿ ದುಡಿಯುತ್ತಿರುವ ಮಹಿಳೆಯರಿಗೆ ಗೌರವ ದೊರೆಯುತ್ತಿಲ್ಲ. ಪ್ರತಿಹಂತದಲ್ಲಿಯೂ ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ಬಳಿ ಮಂಡಲ ಮತ್ತು ಜಿಲ್ಲಾ ಮಟ್ಟಗಳಲ್ಲಿಯ ಸಂಘರ್ಷಗಳ ಕುರಿತು ದೂರಿಕೊಂಡಿದ್ದೆವು,ಆದರೆ ಅವರು ನಮ್ಮ ದೂರುಗಳನ್ನು ಕೇಳಲೂ ಸಿದ್ಧರಿರಲಿಲ್ಲ ’ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮಿತ್ರಪಕ್ಷಗಳಾಗಿದ್ದು, ಕಳೆದ ಕೆಲವು ವಾರಗಳಲ್ಲಿ ಬಿಜೆಪಿಯನ್ನು ತೊರೆದು ಎಐಎಡಿಎಂಕೆಗೆ ಸೇರ್ಪಡೆಗೊಂಡಿರುವ ಎಲ್ಲರೂ ಅಣ್ಣಾಮಲೈ ನಾಯಕತ್ವದ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸಿದ್ದರು.