ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಗೆಲುವು

ಕಲಬುರಗಿ ಮಾ.23 : ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಚುನಾವಣೆಯಲ್ಲಿ ಒಂದು ಮತದ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿದ್ದು, ಬಿಜೆಪಿಯ ವಿಶಾಲ ದರ್ಗಿ ಮೇಯರ್ ಆಗಿ ಆಯ್ಕೆಯಾದರೆ, ಉಪ ಮೇಯರ್ ಆಗಿ ಬಿಜೆಪಿಯ ಶಿವಾನಂದ ಪಿಸ್ತಿ ಚುನಾಯಿತರಾಗಿದ್ದಾರೆ.

ವಿಶಾಲ ದರ್ಗಿ ಅವರು 33 ಮತ ಪಡೆದರೆ ಕಾಂಗ್ರೆಸ್ ದಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಕಾಶ ಕಪನೂರ ಅವರು 32 ಮತ ಪಡೆದು ಸೋಲು ಅನುಭವಿಸಿದರು. ಅದೇ ರೀತಿ ಉಪಮೇಯರಾಗಿ ಬಿಜೆಪಿಯ ಶಿವಾನಂದ ಪಿಸ್ತಿ ಅವರು 33 ಮತ ಪಡೆದ ಚುನಾಯಿತರಾದರೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ವಿಜಯಲಕ್ಷ್ಮಿ ಅವರು ಸಹ 32 ಮತ ಪಡೆದು ಸೋಲು ಅನುಭವಿಸಿದರು. ಈ ಮೂಲಕ ಬಿಜೆಪಿಯ ಅಭ್ಯರ್ಥಿಗಳು ತಲಾ ಒಂದು ಮತದ ಅಂತರದಿಂದ ಗೆದ್ದುಕೊಂಡಿದ್ದಾರೆ.

ಪಾಲಿಕೆಯ 55 ಸ್ಥಾನಗಳಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 04 ಹಾಗೂ ಓರ್ವ ಪಕ್ಷೇತರ ಗೆಲುವು ಸಾಧಿಸಿದ್ದರು. ತದನಂತರ ಬೆಳವಣಿಗೆಯಲ್ಲಿ ವಾರ್ಡ್ 36 ರಲ್ಲಿ ಗೆಲುವು ಸಾಧಿಸಿದ ಶಂಭುಲಿಂಗ ಬಳಬಟ್ಟಿ ಹಾಗೂ ವಾರ್ಡ್ 24 ರದಿಂದ ಗೆದ್ದ ಪ್ರಿಯಾಂಕ್ ಅಂಬರೀಶ್ ಅವರು ಅನರ್ಹಗೊಂಡಿದ್ದರಿಂದ ಸಂಖ್ಯೆ 53 ಕ್ಕೆ ಇಳಿದಿತ್ತು. ಮೂವರು ಸಂಸದರು, ಮೂವರು ಶಾಸಕರು ಹಾಗೂ ಒಂಭತ್ತು ಜನ ವಿಧಾನ ಪರಿಷತ್ತು ಸದಸ್ಯರು ಸೇರಿ ಮತದಾರರ ಸಂಖ್ಯೆ 69 ಆಗಿತ್ತು. ಆದರೆ ಇದರಲ್ಲಿ ಬಾಬುರಾವ ಚಿಂಚನಸೂರ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಒಟ್ಟಾರೆ ಸಂಖ್ಯಾ ಬಲ 68 ಕ್ಕೆ ನಿಗದಿಗೊಂಡಿತು. ಚುನಾವಣೆಯಲ್ಲಿ 65 ಮತದಾರರು ಪಾಲ್ಗೊಂಡಿದ್ದರು. ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹಾಗೂ ಜೆಡಿಎಸ್ ಅಲಿಂಮೋದ್ದೀನ್ ಅವರು ಗೈರು ಹಾಜರಾಗಿದ್ದರು.

Leave a Reply

Your email address will not be published. Required fields are marked *

error: Content is protected !!