ಶ್ರವಣಬೆಳಗೊಳ ಜೈನ ಮಠದ ಉತ್ತರಾಧಿಕಾರಿಯಾಗಿ ಆಗಮಶಾಸ್ತ್ರಿ ಇಂದ್ರಜೈನ್‌ ನೇಮಕ

ಹಾಸನ ಮಾ.24 : ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನಿಧನದ ನಂತರ  ಶ್ರವಣಬೆಳಗೊಳ ಜೈನ ಮಠದ ಉತ್ತರಾಧಿಕಾರಿಯಾಗಿ ಆಗಮಶಾಸ್ತ್ರಿ ಇಂದ್ರಜೈನ್‌ ಅವರನ್ನು ನೇಮಕ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ 22ರ ಹರೆಯದ ಆಗಮಶಾಸ್ತ್ರಿ ಇಂದ್ರಜೈನ್‌ ಅವರು ಬಿಕಾಂ ಪದವೀಧರರಾಗಿದ್ದಾರೆ. ಆಗಮಶಾಸ್ತ್ರಿ ಇಂದ್ರಜೈನ್‌ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ನಿರ್ಧಾರ ಕೈಗೊಂಡ ನಂತರ ಅವರಿಗೆ ಜೈನ ಧರ್ಮದ ಕ್ಷುಲ್ಲಕ ದೀಕ್ಷೆ ನೀಡಲಾಗಿತ್ತು. ಕಳೆದ 20 ದಿನಗಳಿಂದಲೂ ಶ್ರವಣಬೆಳಗೊಳ ಮಠದಲ್ಲಿ ಆಗಮಶಾಸ್ತ್ರಿ ಇಂದ್ರಜೈನ್‌ ಅವರಿಗೆ ಮಠದ ಪರಂಪರೆ, ಆಚಾರ – ವಿಚಾರ, ಮಠದ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಶ್ರವಣಬೆಳಗೊಳ ಮಠ ಪೀಠಾರೋಹಣದೊಂದಿಗೆ ಆಗಮಶಾಸ್ತ್ರಿ ಇಂದ್ರಜೈನ್‌ ಅವರಿಗೆ ನೂತನ ನಾಮಾಂಕಿತವಾಗಲಿದ್ದು, ಪೀಠಾರೋಹಣದ ಧಾರ್ಮಿಕ ವಿಧಿವಿಧಾನಗಳು ಇನ್ನಷ್ಟೇ ಆಗಬೇಕಾಗಿದೆ.

ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆರೋಗ್ಯ ಹದಗೆಡುತ್ತಿದ್ದ ಹಿನ್ನೆಲೆ ಮೂರು ತಿಂಗಳ ಹಿಂದೆಯೇ ಶ್ರವಣಬೆಳಗೊಳದ ಜೈನ ಮಠದ ಉತ್ತರಾಧಿಕಾರಿ ನೇಮಕದ ಚರ್ಚೆ ನಡೆದಿತ್ತು. ಜೈನ ಮಠಕ್ಕೆ ಇಂದ್ರ ವಂಶಸ್ಥರೇ ಸ್ವಾಮೀಜಿಯರಾಗುವ ಪರಂಪರೆಯಿರುವುದರಿಂದ ಆ ಬಗ್ಗೆ ವಿವಿಧ ಜೈನಮಠದ ಸ್ವಾಮೀಜಿಯವರು, ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಟ್ರಸ್ಟಿಗಳು, ಜೈನ ಸಮುದಾಯದ ಮುಖಂಡರು ಚರ್ಚಿಸಿ ಆಗಮಶಾಸ್ತ್ರಿ ಇಂದ್ರಜೈನ್‌ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು.

Leave a Reply

Your email address will not be published. Required fields are marked *

error: Content is protected !!