ದಶಪಥ ಹೆದ್ದಾರಿ ಮೂಲಕ ಬೆಂಗಳೂರು, ಮೈಸೂರಿನ ಸಮಗ್ರ ಅಭಿವೃದ್ಧಿ- ಶೋಭಾ ಕರಂದ್ಲಾಜೆ

ಬೆಂಗಳೂರು ಮಾ.11 (ಉಡುಪಿ ಟೈಮ್ಸ್ ವರದಿ): ನಮ್ಮ ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ ಇದೆ. ನಿರೀಕ್ಷೆಗೂ ಮೀರಿದ ಬೆಂಬಲ ರಥಯಾತ್ರೆಗೆ ಸಿಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಮತ್ತು ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಯಾತ್ರೆ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯು ನಡ್ಡಾ, ರಾಜನಾಥ ಸಿಂಗ್, ಅಮಿತ್ ಶಾ ಅವರು ಉದ್ಘಾಟಿಸಿದ ರಥಯಾತ್ರೆಗೆ ಅದ್ಭುತ ಜನಬೆಂಬಲ ಸಿಗುತ್ತಿದೆ. ನಾಳೆ ನರೇಂದ್ರ ಮೋದಿಯವರು ಆರ್ಥಿಕ ರಾಜಧಾನಿ ಬೆಂಗಳೂರು- ಸಾಂಸ್ಕøತಿಕ ರಾಜಧಾನಿ ಮೈಸೂರಿನ ಅಭಿವೃದ್ಧಿಯ ಕನಸು ನನಸಾದ 9,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 10 ಪಥಗಳ ಹೈವೇ ಉದ್ಘಾಟಿಸಲಿದ್ದಾರೆ ಎಂದರು

ಬೆಂಗಳೂರು- ಮೈಸೂರು ಹೈವೇ ದಶಕಗಳ ಕನಸು. ಹಿಂದೆ ಪ್ರಧಾನಿಯಾಗಿದ್ದ ದೇವೇಗೌಡರು ಇಂಥ ಕನಸು ಕಂಡಿದ್ದರು. ಆದರೆ, ನೈಸ್ ರಸ್ತೆಯು ಯಶವಂತಪುರ, ಬಿಡದಿಯಿಂದ ಮುಂದೆ ಹೋಗಲೇ ಇಲ್ಲ. ಆಗಲೇ ರಸ್ತೆ ನಿರ್ಮಾಣ ಆಗಿದ್ದರೆ ಮೈಸೂರು ಮತ್ತು ರಸ್ತೆ ಹಾದುಹೋಗುವ ಪ್ರದೇಶಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತಿದ್ದವು. ಪ್ರಧಾನಿಯವರು 2018ರಲ್ಲಿ ಮೈಸೂರಿಗೆ ಬಂದಾಗ ದಶಪಥ ರಸ್ತೆ ಘೋಷಿಸಿದ್ದರು. ಮರುದಿನವೇ ಕ್ಯಾಬಿನೆಟ್ ಸಬ್ ಕಮಿಟಿಯೂ ಇದಕ್ಕೆ ಅನುಮೋದನೆ ಕೊಟ್ಟಿತು. 2018 ಮಾರ್ಚ್‍ನಲ್ಲಿ ಇದಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಇದೀಗ ಅದೇ ಪ್ರಧಾನಿಯವರು ಈ ಐತಿಹಾಸಿಕ ಯೋಜನೆಯನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಮೊದಲಿಗೆ ದ್ವಿಪಥ ರಸ್ತೆ ಇತ್ತು. ಸಂಚಾರದ ಸಮಸ್ಯೆ ತೀವ್ರವಿತ್ತು. ಈಗ ಒಂದೂವರೆ ಗಂಟೆಯಲ್ಲಿ ಶ್ರೀರಂಗಪಟ್ಟಣ, ಮೈಸೂರಿಗೆ ತಲುಪಲು ಸಾಧ್ಯವಿದೆ. 4,428 ಕೋಟಿ ಮೊತ್ತದಲ್ಲಿ ಮೊದಲ ಹಂತ ನಿರ್ಮಾಣವಾಗಿದೆ. 4,500 ಕೋಟಿಯಲ್ಲಿ ಎರಡನೇ ಹಂತ ನಿರ್ಮಾಣಗೊಂಡಿದೆ. ನರೇಂದ್ರ ಮೋದಿಯವರು ಜನಪ್ರತಿನಿಧಿಯನ್ನು ಗಮನಿಸಿ ಯೋಜನೆ ನೀಡಿಲ್ಲ. ಬೆಂಗಳೂರು- ಮೈಸೂರು ನಡುವೆ ನಮ್ಮ ಶಾಸಕರು ಇಲ್ಲದೇ ಇರಬಹುದು. ಆದರೆ, ಮೋದಿಯವರು ಒಂದೇ ಒಂದು ನಮ್ಮ ಸಂಸದರಿಲ್ಲದ ಕೇರಳಕ್ಕೆ ಯೋಜನೆ ಕೊಟ್ಟ ಮಾದರಿಯಲ್ಲೇ ಯೋಜನೆಯನ್ನು ಕರ್ನಾಟಕ, ಉತ್ತರ ಪ್ರದೇಶಕ್ಕೆ ಕೊಟ್ಟಿದ್ದಾರೆ. ದೇಶದ ಜೊತೆಗಿರುವ ಎಲ್ಲಾ ಕೊಂಡಿಗಳಾದ ರಾಜ್ಯಗಳು ಸಶಕ್ತಿಯುತ-ಅಭಿವೃದ್ಧಿಯಿಂದ ಕೂಡಿರಲಿ ಎಂಬ ಆಶಯ ಪ್ರಧಾನಿಯವರದು. ಸುಮಾರು 6,500 ಜನರಿಗೆ ಈ ರಸ್ತೆ ಉದ್ಯೋಗ ಕೊಟ್ಟಿದೆ. ಈ ಹೈವೇಯ ಎರಡೂ ಬದಿಗಳಲ್ಲಿ ಕೈಗಾರಿಕಾ ಕಾರಿಡಾರ್ ಅಥವಾ ಮಳಿಗೆಗಳು, ಹೋಟೆಲ್ ಗಳ ಮೂಲಕ ಉದ್ಯೋಗ ಲಭಿಸುತ್ತವೆ. ಪ್ರವಾಸೋದ್ಯಮದಲ್ಲಿ ಉತ್ತುಂಗ ಸ್ಥಿತಿಗೆ ಮೈಸೂರನ್ನು ಒಯ್ಯಲು ಸಾಧ್ಯವಿದೆ. ದಸರಾ ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ ಎಂದು ವಿವರಿಸಿದರು.

ಪುಟ್ಟಣ್ಣ ಪಕ್ಷ ತೊರೆಯುತ್ತಿರುವ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಅವರೇನೋ ನಿರೀಕ್ಷೆ ಇಟ್ಟು ಬಂದಿರುತ್ತಾರೆ. ಬಿಜೆಪಿಯಲ್ಲಿ ಅವರು ಎಂಎಲ್‍ಸಿಯೂ ಆಗಿದ್ದಾರೆ. ಅದನ್ನು ಅವರು ಮರೆಯಬಾರದು. ಅವರು ಇನ್ಯಾವುದೋ ಲಾಭಕ್ಕಾಗಿ ಪಕ್ಷ ಬಿಟ್ಟಿರಬಹುದು ಎಂದರು. ಹಾಗೂ ದೇಶದಲ್ಲಿ ನಂಬಬಹುದಾದ ನೇತೃತ್ವ ನರೇಂದ್ರ ಮೋದಿಯವರಲ್ಲಿ ಇದೆ. ಯಾರೂ ಪಕ್ಷ ಬಿಡುವುದಿಲ್ಲ. ಕೇಂದ್ರ- ಹಲವಾರು ರಾಜ್ಯಗಳಲ್ಲಿ ಅಸ್ತಿತ್ವವೇ ಇಲ್ಲದ ಇನ್ನೊಂದು ಪಕ್ಷಕ್ಕೆ ಯಾರೂ ಹೋಗುವುದಿಲ್ಲ ಎಂದು ಹೇಳಿದರು.

3 ಈಶಾನ್ಯ ರಾಜ್ಯಗಳಲ್ಲಿ ಹಿಂದೆ ಕೇಂದ್ರ ನಾಯಕರು ತೆರಳಿದರೆ ಭಾರತದ ವಿರುದ್ಧ ಘೋಷಣೆ ಕೂಗುತ್ತಿದ್ದರು. 2014ರ ಮೊದಲು ಈ ರಾಜ್ಯಗಳ ಸ್ಥಿತಿ ಅತ್ಯಂತ ಕೆಟ್ಟದಾಗಿತ್ತು. ಭಯೋತ್ಪಾದಕತೆ, ಒಳ ನುಸುಳುವಿಕೆ, ಬಡತನ ಅಲ್ಲಿತ್ತು. ಅಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ ಸೇರಿ ಮೂಲಸೌಕರ್ಯದ ಕಡೆ ಗಮನ ಕೊಟ್ಟಿರಲಿಲ್ಲ. ಈಗ ಈಶಾನ್ಯ ರಾಜ್ಯಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಅವು ಹೈವೇಗಳು, ರೈಲು ಸಾಕಾರವಾದ ರಾಜ್ಯವಾಗಿವೆ. ವಿಮಾನ ನಿಲ್ದಾಣಗಳೂ ನಿರ್ಮಾಣವಾಗುತ್ತಿದೆ. ಮೊನ್ನೆ ನಡೆದ ಚುನಾವಣೆಯಲ್ಲಿ 3 ರಾಜ್ಯಗಳಲ್ಲೂ ಜನತೆ ನಮ್ಮನ್ನು ಗೆಲ್ಲಿಸಿದ್ದಾರೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ದೇಶದಲ್ಲಿ ಒಂದಾದ ನಂತರ ಒಂದು ರಾಜ್ಯದಲ್ಲಿ ಗೆಲುವು ಸಾಧಿಸುತ್ತಿದೆ. ಒಂದು ಅಭೂತಪೂರ್ವ ವಿಜಯ ಕಳೆದ ವರ್ಷ ಇದೇ ವೇಳೆಗೆ ಸಿಕ್ಕಿತ್ತು. ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ 2ನೇ ಬಾರಿ ಸರಕಾರ ರಚನೆ ಅವಕಾಶ ಯೋಗಿಯವರಿಗೆ ಸಿಕ್ಕಿತ್ತು. ಮೊನ್ನೆ ಗುಜರಾತ್ ನಲ್ಲಿ ನಡೆದ ಚುನಾವಣೆಯಲ್ಲಿ ಹಿಂದೆ ಮೋದಿಯವರೇ ಸಿಎಂ ಆಗಿದ್ದಾಗ ಸಿಗದ ದೊಡ್ಡ ಯಶಸ್ಸು ಈಗ ಗುಜರಾತಿನ ಜನರು ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ್, ಸಿದ್ದರಾಜು, ಮಹೇಶ್ ಟೆಂಗಿನಕಾಯಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!