ಮಾಡಾಳ್ ಲಂಚ ಕೇಸ್: ಲೋಕಾಯುಕ್ತದಿಂದ ಇಡಿಗೆ ವರದಿ
ಬೆಂಗಳೂರು ಮಾ.11 : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿ, ಲಂಚ ಪಡೆದಿರುವ ಆರೋಪದಡಿ ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ವಿರೂಪಾಕ್ಷಪ್ಪ ಮತ್ತು ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿಯೂ ಆದ ಅವರ ಮಗ ಪ್ರಶಾಂತ್ ಮಾಡಾಳ್ ವಿರುದ್ಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಈ ಕುರಿತು ಜಾರಿ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಮೂಲಗಳ ಪ್ರಕಾರ, ತನಿಖೆಯಲ್ಲಿ ಲಭ್ಯವಾಗಿರುವ ಮಾಹಿತಿಗಳನ್ನು ಆಧರಿಸಿ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಇ.ಡಿ ಅಧಿಕಾರಿಗಳಿಗೆ ನಿನ್ನೆ ವರದಿಯೊಂದನ್ನು ರವಾನಿಸಿದ್ದಾರೆ’ ಎಂದು ತಿಳಿದು ಬಂದಿದೆ
ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮೂವರು ಮಕ್ಕಳು ಹಣದ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿರುವುದು ಪತ್ತೆ ಯಾಗಿದ್ದು, ಅವರ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ವರದಿ ಸಲ್ಲಿಸಿದ್ದಾರೆ.
ಕೆಎಸ್‌ಡಿಎಲ್‌ನಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮ, ₹ 40 ಲಕ್ಷ ಲಂಚ ಪಡೆಯುವಾಗ ಪ್ರಶಾಂತ್ ಹಾಗೂ ಅದೇ ವೇಳೆ ₹ 1.62 ಕೋಟಿ ಹಣ ತಲುಪಿಸಲು ಬಂದಿದ್ದ ಇತರ ಮೂವರನ್ನು ಬಂಧಿಸಿರುವುದು ಮತ್ತು ವಿರೂಪಾಕ್ಷಪ್ಪ ಮನೆಯಲ್ಲಿ ₹ 6.10 ಕೋಟಿ ನಗದು ಪತ್ತೆಯಾಗಿರುವ ವಿಷಯವನ್ನು ತನಿಖಾ ತಂಡ ಇ.ಡಿ ಜತೆ ಹಂಚಿಕೊಂಡಿದೆ.
‘ವಿರೂಪಾಕ್ಷಪ್ಪ, ಅವರ ಮಕ್ಕಳಾದ ಮಲ್ಲಿಕಾರ್ಜುನ, ಪ್ರವೀಣ್ (ರಾಜಣ್ಣ) ಮತ್ತು ಪ್ರಶಾಂತ್ ಇತ್ತೀಚಿನ ವರ್ಷಗಳಲ್ಲಿ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾರೆ. ವಿರೂಪಾಕ್ಷಪ್ಪ ಅವರ ಶಾಸಕ ಸ್ಥಾನ, ಕೆಎಸ್‌ಡಿಎಲ್ ಅಧ್ಯಕ್ಷ ಹುದ್ದೆ ಹಾಗೂ ಪ್ರಶಾಂತ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಗಳಿಸಿರುವ ಹಣವನ್ನು ಅಡಿಕೆ ಮಂಡಿ ಮೂಲಕ ಪರಿವರ್ತಿಸಿರುವುದು ತನಿಖೆ ವೇಳೆ ಕಂಡುಬಂದಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ‘ಕೆಲವು ವರ್ಷಗಳಿಂದ ಈಚೆಗೆ ಈ ಕುಟುಂಬದ ಸದಸ್ಯರು ಅಪಾರ ಪ್ರಮಾಣದ ಸ್ಥಿರಾಸ್ತಿ ಖರೀದಿಸಿದ್ದಾರೆ. ಕುಟುಂಬಕ್ಕೆ ನಿಕಟವರ್ತಿಗಳಾಗಿರುವ ಕೆಲವು ವ್ಯಕ್ತಿಗಳ ಹೆಸರಿನಲ್ಲಿ ಬೇನಾಮಿಯಾಗಿ ಆಸ್ತಿ ಖರೀದಿಸಿರುವ ಸಂಶಯವೂ ಇದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ವಿರೂಪಾಕ್ಷಪ್ಪ, ಪ್ರಶಾಂತ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲೂ ತನಿಖೆ ನಡೆಸುವ ಅಗತ್ಯವಿದೆ’ ಎಂದು ಶಿಫಾರಸು ಮಾಡಲಾಗಿದೆ.
₹ 90 ಲಕ್ಷ ಲಂಚ ತಲುಪಿಸಿರುವ ಆರೋಪದಡಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಕರ್ನಾಟಕ ಅರೋಮಾಸ್ ಕಂಪನಿಯ ಮಾಲೀಕರನ್ನೂ ಆರೋಪಿ ಎಂದು ಹೆಸರಿಸಲಾಗಿದೆ. ಕಂಪನಿಯ ವ್ಯವಸ್ಥಾಪಕ ದೀಪಕ್ ಜಾಧವ್ ಎಂಬುವವರೇ ನೌಕರರಾದ ಆಲ್ಬರ್ಟ್ ನಿಕೋಲಸ್ ಮತ್ತು ಗಂಗಾಧರ ಅವರಿಗೆ ಹಣ ಕೊಟ್ಟು ಕಳಿಸಿದ್ದರು ಎಂಬ ಮಾಹಿತಿ ಎಫ್‌ಐಆರ್‌ನಲ್ಲಿದೆ. ಹಾಗೂ ಚಿತ್ರದುರ್ಗದ ಭೀಮಸಂದ್ರ ನಿವಾಸಿ ಸಿದ್ದೇಶ್ ಅಲಿಯಾಸ್ ಅನಿಲ್ ಎಂಬಾತನ ಬಳಿ ₹ 60 ಲಕ್ಷ ನಗದು ಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದು, ‘ಪ್ರಶಾಂತ್ ಮಾಡಾಳ್ ಅವರು ಸಿದ್ದೇಶ್ ಹೆಸರಿನಲ್ಲಿ ಬೇನಾಮಿಯಾಗಿ ಆಸ್ತಿಗಳನ್ನು ಹೊಂದಿರುವ ಕುರಿತು ಸಮಗ್ರ ತನಿಖೆ ನಡೆಸುವ ಅವಶ್ಯಕತೆ ಇದೆ’ ಎಂಬ ಉಲ್ಲೇಖವಿದೆ.” ಎಂಬ ಮಾಹಿತಿ ತಿಳಿದು ಬಂದಿದೆ.
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ನಿನ್ನೆ ಲೋಕಾಯುಕ್ತ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದು, ಸಮರ್ಪಕವಾಗಿ ಉತ್ತರಿಸದೇ ಅಸಹಕಾರ ಮುಂದುವರಿಸಿದ್ದಾರೆ ಎನ್ನಲಾಗುತ್ತಿದೆ. ಮಧ್ಯಾಹ್ನ 2.30ಕ್ಕೆ ಲೋಕಾಯುಕ್ತ ಕಚೇರಿಗೆ ಬಂದ ಶಾಸಕರನ್ನು ಪೊಲೀಸ್ ಅಧಿಕಾರಿಗಳ ತಂಡ ರಾತ್ರಿ 8.30ರವರೆಗೂ ವಿಚಾರಣೆ ನಡೆಸಿತು. ಆದರೆ, ತನಿಖಾ ತಂಡದ ಬಹುತೇಕ ಪ್ರಶ್ನೆಗಳಿಗೆ ಅವರು ಸ್ಪಷ್ಟವಾದ ಉತ್ತರ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಸಂಜಯನಗರದ ಮನೆಯಲ್ಲಿ ₹ 6.10 ಕೋಟಿ ನಗದು ಪತ್ತೆಯಾದ ಕೊಠಡಿ ವಿರೂಪಾಕ್ಷಪ್ಪ ಅವರ ಮಲಗುವ ಕೋಣೆ ಎಂದು ಶಾಸಕರ ಸೊಸೆ ಲೋಕಾಯುಕ್ತ ಪೊಲೀಸರ ಎದುರು ಹೇಳಿಕೆ ನೀಡಿದ್ದರು. ಆದರೆ, ವಿಚಾರಣೆ ವೇಳೆ ಶಾಸಕರು ಅದನ್ನು ಅಲ್ಲಗಳೆಯುತ್ತಿದ್ದಾರೆ. ‘ಅಲ್ಲಿ ಪತ್ತೆಯಾದ ಹಣ ಅಡಿಕೆ ಮಾರಾಟದಿಂದ ಬಂದದ್ದು’ ಎಂದು ಸ್ವತಃ ವಿರೂಪಾಕ್ಷಪ್ಪ ಅವರೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ‘ಆ ಹಣಕ್ಕೂ ನನಗೂ ಸಂಬಂಧವೇ ಇಲ್ಲ’ ಎಂದು ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ‘ಯಾವ ಪ್ರಶ್ನೆ ಕೇಳಿದರೂ ವಿರೂಪಾಕ್ಷಪ್ಪ ಸರಿಯಾಗಿ ಉತ್ತರಿಸುತ್ತಿಲ್ಲ. ಕೆಲವು ಪ್ರಶ್ನೆಗಳನ್ನು ಕೇಳಿದಾಗ ಸಂಬಂಧವೇ ಇಲ್ಲದ ಮಾಹಿತಿ ನೀಡುತ್ತಿದ್ದಾರೆ. ಕೆಲವು ಪ್ರಶ್ನೆಗಳಿಗೆ ಉತ್ತರಿಸದೇ ಮೌನವಾಗಿ ಕುಳಿತುಕೊಳ್ಳುತ್ತಿದ್ದಾರೆ. ಹಣದ ಮೂಲದ ಬಗ್ಗೆ ಮಾಹಿತಿಯನ್ನೇ ನೀಡುತ್ತಿಲ್ಲ’ ಎಂದು ಲೋಕಾಯುಕ್ತದ ಅಧಿಕಾರಿಗಳು ಹೇಳುತ್ತಾರೆ.
ಅಲ್ಲದೆ ಶಾಸಕರಿಂದ ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ ಸೋಮವಾರವೂ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾ ರಿಗಳು ವಿರೂಪಾಕ್ಷಪ್ಪ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ವಿಚಾರಣೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕರು, ‘ನಾನು ಲೋಕಾಯುಕ್ತ ಪೊಲೀಸರ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ. ಸೋಮವಾರವೂ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.